*  ಸುಳ್ಳು ಆರೋಪ ಮಾಡಿರುವ ರೋಹಿಣಿ ಅಮಾನತುಗೊಳಿಸಿ*  ಜೆಡಿಎಸ್‌ ಒಂಥರಾ ಟ್ರೈನಿಂಗ್‌ ಸ್ಕೂಲ್‌ ಇದ್ದಂತೆ* ಸಿಎಂ ಆಗಿರುವವರು ಜೆಡಿಎಸ್‌ನವರೇ. ಇಲ್ಲಿಗೆ ಬಂದು ಕಲಿತುಕೊಂಡು ಬೇರೆ ಪಕ್ಷಕ್ಕೆ ಹೋಗ್ತಾರೆ 

ಮೈಸೂರು(ಜು.31): ರೋಹಿಣಿ ಸಿಂಧೂರಿ ಲೇಡಿ ಸಿಂಗಂ ಅಲ್ಲ. ಮೈಸೂರು ಜನರನ್ನ ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ ಎಂದು ಜೆಡಿಎಸ್‌ ಶಾಸಕ ಹಾಗೂ ಮಾಜಿ ಸಚಿವ ಸಾ.ರಾ. ಮಹೇಶ್‌ ಆರೋಪಿಸಿದ್ದಾರೆ.

ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿರುವ ತಮ್ಮ ಕಚೇರಿ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೂ ಹಗರಣದಿಂದ ನನ್ನನ್ನು ವರ್ಗಾವಣೆ ಮಾಡಿದರು ಅನ್ನೋದು ನೀವು (ರೋಹಿಣಿ ಸಿಂಧೂರಿ) ಕಟ್ಟಿದ ಕತೆ. ನೀವು ಯಾವುದೇ ಭೂಮಿ ಉಳಿಸುವ ಕೆಲಸ ಮಾಡಿಲ್ಲ ಎಂದರು.

ದಲಿತ ಸಮುದಾಯದ ಶರತ್‌ ಅವರನ್ನು 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದರು. ವಾಲ್ಮೀಕಿ ಜಯಂತಿಯಂದು ನಾಗರಹೊಳೆಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘಿಸಿದ್ದರು. ಪಾರಂಪರಿಕ ಕಟ್ಟಡ ಆವರಣದಲ್ಲಿ ಈಜುಕೊಳ ನಿರ್ಮಿಸಿದ್ದರು. ಕೋವಿಡ್‌ ಸಾವಿನ ಸಂಬಂಧ ತಪ್ಪು ಲೆಕ್ಕ ನೀಡಿದ್ದರು. ಸಾ.ರಾ. ಚೌಲ್ಟ್ರಿ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣ ಮಾಡಿದೆ ಅಂತ ಆರೋಪ ಮಾಡಿದ್ದರು. ಆದರೆ, ಯಾವುದೇ ಉಲ್ಲಂಘನೆ ಆಗಿಲ್ಲ ಅಂತ ಪ್ರಾದೇಶಿಕ ಆಯುಕ್ತರೇ ವರದಿ ನೀಡಿದ್ದಾರೆ ಎಂದು ಅವರು ಹೇಳಿದರು.

ಲಿಂಗಾಂಬುದಿಕೆರೆಯ ಜಾಗ ಒತ್ತುವರಿ ಆಗಿಲ್ಲ. ಆರ್‌.ಟಿ. ನಗರದಲ್ಲಿ ಒಬ್ಬರಿಗೆ ಹೆಚ್ಚುವರಿಯಾಗಿ ಪರಿಹಾರ ಕೊಟ್ಟಿದ್ದರು. ಇದನ್ನು ನೀವು ಬರುವುದಕ್ಕೂ 8 ವರ್ಷಗಳ ಹಿಂದೆಯೇ ಎಂಡಿಎ ಅಧ್ಯಕ್ಷರು ಪತ್ತೆ ಮಾಡಿದ್ದರು. ಸರ್ವೇ ನಂ.4 ವಿಚಾರದಲ್ಲಿ ನೀವು ಸುಪ್ರೀಂಕೋರ್ಟ್‌ನಲ್ಲಿ ಖಾಸಗಿ ವಕೀಲರಿಗೆ 24 ಲಕ್ಷವನ್ನು ನಿಯಮ ಮೀರಿ ಕೊಟ್ಟಿದ್ದೀರಿ. ಆದರೆ, ನಿಮ್ಮ ಕೇಸ್‌ ಕೋರ್ಟ್‌ನಲ್ಲಿ ತಿರಸ್ಕೃತವಾಗಿದೆ ಎಂದು ಅವರು ತಿಳಿಸಿದರು.

ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ: ಸಾ.ರಾ. ಮಹೇಶ್‌

ರಾಜವಂಶಸ್ಥರೊಂದಿಗೆ ಫೋಟೋ

ಸರ್ವೇ ನಂ.4ರ ಮಾಲೀಕರ ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾದ ಮೂರನೇ ದಿನದಲ್ಲಿ ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಅವರೊಂದಿಗೆ ರೋಹಿಣಿ ಸಿಂಧೂರಿ ಕಾಣಿಸಿಕೊಂಡಿದ್ದಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯತ್ತಾ? ಎಂದು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ- ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಜೊತೆಗಿರುವ ಫೋಟೋ ತೋರಿಸಿ ವಾಗ್ದಾಳಿ ನಡೆಸಿದರು.
ಸರ್ವೇ ನಂ.4 ವ್ಯಾಜ್ಯದಲ್ಲಿ ಜಿಲ್ಲಾಧಿಕಾರಿ ವಾದಿ ಮತ್ತು ರಾಜವಂಶಸ್ಥರು ಪ್ರತಿವಾದಿ. ಆ ಕೇಸ್‌ ಸುಪ್ರೀಂಕೋರ್ಟ್‌ನಲ್ಲಿ ಅಡ್ಮಿಟ್‌ ಆಗಲಿಲ್ಲ. ಕೇಸ್‌ ವಜಾಗೊಂಡ ಮೂರನೇ ದಿನದಲ್ಲಿ ವಾದಿ, ಪ್ರತಿವಾದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಫೋಟೋ ತೆಗೆಸಿಕೊಳ್ಳುವ ನಿಮಗೆ ರಾಜವಂಶದವರ ಇತಿಹಾಸ ಗೊತ್ತಿರಲಿಲ್ಲವೇ ಎಂದು ಅವರು ಪ್ರಶ್ನಿಸಿದರು.

ರಾಜಮನೆತನ ಮತ್ತು ಅವರ ಕೊಡುಗೆ ಬಗ್ಗೆ ಪುಸ್ತಕ ಓದಿಕೊಂಡಿರಬೇಕು. ರಾಜಮನೆತನ ಏನು, ಮೈಸೂರು ಜನ ಏನು ಎಂದು ಅವರಿಗೆ ಈಗ ಗೊತ್ತಾದಂತಿದೆ. ರಾಜಮನೆತನದವರ ಮೇಲೆ ಅಡ್ಮಿಟ್‌ ಆಗದ ಕೇಸನ್ನು ಹಾಕಿದ್ದಾರೆ. ಇದಕ್ಕೆ 24 ಲಕ್ಷ ಹಣವನ್ನು ವ್ಯರ್ಥಮಾಡಿದರು. ಎಂಡಿಎಯಲ್ಲಿ ಯಾರ ಅನುಮತಿ ಪಡೆಯದೆ ಹಣ ಬಳಸಿದ್ದಾರೆ ಎಂದು ಅವರು ಆರೋಪಿಸಿದರು.

ಆರೋಪಗಳು ಸುಳ್ಳು

ವರ್ಗಾವಣೆ ಮಾಡಿದಾಗ ನೀವು ಮಾಡಿದ ಆರೋಪಗಳೆಲ್ಲಾ ಸುಳ್ಳು. ಇದನ್ನು ನಿಮ್ಮ ಇಲಾಖೆಯ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ನಾವು ಮಾಡಿದ ಆರೋಪಗಳು ತನಿಖೆಯಿಂದ ಸತ್ಯ ಎಂದು ತಿಳಿದು ಬಂದಿದೆ. ಹೀಗಾಗಿ ತಕ್ಷಣ ಇವರನ್ನು ಅಮಾನತು ಮಾಡಬೇಕು. ಇವರ ಮೇಲೆ 124 ಚಾರ್ಜಸ್‌ ಮಾಡಿ ಸೇವೆಯಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ವರದಿ ಬಂದ ನಂತರ ಇವರನ್ನು ಅಮಾನತು ಮಾಡಬೇಕು. ಹಕ್ಕುಚ್ಯುತಿ ಮಂಡನೆಗೂ ಸ್ಪೀಕರ್‌ಗೆ ಮನವಿ ಮಾಡಿದ್ದೇನೆ. ನಿಮ್ಮ ವರ್ಗಾವಣೆ ಆಗಿದ್ದು ಯಾವುದೇ ಭೂ ಮಾಫಿಯಾದಿಂದ ಅಲ್ಲ. ನಿಮ್ಮ ಮೂಲಕ ಮೈಸೂರಿನ ಜನತೆಗೆ ಹಚ್ಚಿದ ಕಳಂಕ ಒಂದೊಂದಾಗಿ ಬಯಲಿಗೆ ಬರುತ್ತಿದೆ ಎಂದು ಅವರು ಹೇಳಿದರು.

ಮಾಜಿ ಮೇಯರ್‌ ಆರ್‌. ಲಿಂಗಪ್ಪ, ಮಾಜಿ ಉಪ ಮೇಯರ್‌ ಶೈಲೇಂದ್ರ, ನಗರ ಪಾಲಿಕೆ ಸದಸ್ಯರಾದ ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತು, ಜಿಪಂ ಮಾಜಿ ಸದಸ್ಯ ದ್ವಾರಕೀಶ್‌, ಜೆಡಿಎಸ್‌ ಮುಖಂಡರಾದ ಸೋಮು, ರವಿಚಂದ್ರೇಗೌಡ, ಸಂತೋಷ್‌ ಮೊದಲಾದವರು ಇದ್ದರು.

ಸರ್ಕಾರದ ನಿಯಮ ಉಲ್ಲಂಘಿಸಿ ಸುಮಾರು ಒಂದು ಕೋಟಿ ದುರ್ವಿನಿಯೋಗ ಮಾಡಿಕೊಂಡಿರುವ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ಆಗಬೇಕು. ಅವರಿಂದಲೇ ಸರ್ಕಾರದ ಹಣ ವಸೂಲಿ ಮಾಡಿ, ಸೇವೆಯಿಂದ ಅಮಾನತುಗೊಳಿಸಬೇಕು. ಚಾರ್ಜಸ್‌ ಮಾಡಿದ ಬಳಿಕ ಸೇವೆಯಿಂದ ವಜಾಗೊಳಿಸಬೇಕು. ಇದು ಆಗದಿದ್ದರೇ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ ಎಂದು ಶಾಸಕ ಸಾ.ರಾ. ಮಹೇಶ್‌ ತಿಳಿಸಿದ್ದಾರೆ.

ಜೆಡಿಎಸ್‌ ಟ್ರೈನಿಂಗ್‌ ಸ್ಕೂಲ್‌

ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರ್ಪಡೆ ಕುರಿತು ಪ್ರತಿಕ್ರಿಯಿಸಿದ ಸಾ.ರಾ. ಮಹೇಶ್‌ ಅವರು, ಜೆಡಿಎಸ್‌ ಒಂಥರಾ ಟ್ರೈನಿಂಗ್‌ ಸ್ಕೂಲ್‌ ಇದ್ದಂತೆ. ಬರ್ತಾರೆ ಕಲಿತಾರೆ ಹೋಗ್ತಾರೆ. ಈಗ ಮುಖ್ಯಮಂತ್ರಿ ಆಗಿರುವವರು ಜೆಡಿಎಸ್‌ನವರೇ. ಇಲ್ಲಿಗೆ ಬಂದು ಕಲಿತುಕೊಂಡು ಬೇರೆ ಪಕ್ಷಕ್ಕೆ ಹೋಗುತ್ತಾರೆ ಎಂದು ಹೇಳಿದರು.