ರಾಮನಗರ [ಜ.23]:  ಪೊಲೀಸರ ಗಮನಕ್ಕೂ ತಾರದೆ, ಏಕಾಏಕಿ ಕೇತಗಾನಹಳ್ಳಿ ಗ್ರಾಮಕ್ಕೆ ನುಗ್ಗಿದ್ದು ಅಲ್ಲದೆ, ಗ್ರಾಮದಲ್ಲಿ ಗೊಂದಲ ಸೃಷ್ಟಿಸಿ, ಪ್ರಕ್ಷುಬ್ಧ ವಾತಾವರಣ ನಿರ್ಮಾಣಕ್ಕೆ ಕಾರಣರಾದ ಸಾಮಾಜಿಕ ಕಾರ‍್ಯಕರ್ತ ಎಸ್‌.ಆರ್‌ ಹಿರೇಮಠ್‌ ಹಾಗೂ ರವಿಕೃಷ್ಣಾರೆಡ್ಡಿ ಅವರ ವಿರುದ್ಧ ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಗಡಿ ಕ್ಷೇತ್ರ ಶಾಸಕ ಎ. ಮಂಜುನಾಥ್‌, ಸಮಾಜ ಸೇವಕರು, ಮಾಹಿತಿ ಹಕ್ಕು ಕಾರ್ಯಕರ್ತರು ಹಾಗೂ ದೇಶೋದ್ಧಾರಕರು ಎಂದು ಸ್ವಯಂ ಕರೆದುಕೊಳ್ಳುವ ಎಸ್‌.ಆರ್‌. ಹಿರೇಮಠ್‌ ಹಾಗೂ ರವಿಕೃಷ್ಣಾರೆಡ್ಡಿ ಅವರೇ, ತಾವು ಯಾರನ್ನೋ ಮೆಚ್ಚಿಸಲು ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ನಿಮಗಿಂತಲೂ ಒಳ್ಳೆಯ ಪದ ಬಳಕೆ ಮಾಡಲು ನಮಗೂ ಬರುತ್ತದೆ ಎಂದು ಎಚ್ಚ​ರಿ​ಸಿ​ದ​ರು.

ಕೃಷಿ ಚಟುವಟಿಕೆ:  ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ತಾವು ರಾಜಕೀಯಕ್ಕೆ ಬರುವ ಮುಂಚಿನಿಂದಲೂ ಬಿಡದಿ ಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಜಮೀನು ಖರೀದಿ ಮಾಡಿ ಕೃಷಿ ಚಟುವಟಿಕೆ ಕೈಗೊಂಡಿದ್ದರು. ಮತದಾನವೂ ಸೇರಿದಂತೆ ಅವರ ಎಲ್ಲ ವ್ಯವಹಾರಗಳನ್ನು ಕೇತಗಾನಹಳ್ಳಿ ಗ್ರಾಮದಲ್ಲಿಯೇ ಮಾಡುತ್ತಾರೆ. ಇದನ್ನು ಅವರು ತಮ್ಮ ಕರ್ಮಭೂಮಿ ಎಂದು ಎಷ್ಟೋ ಬಾರಿ ಪ್ರತಿಪಾದಿಸಿದ್ದಾರೆ. ಕುಮಾ​ರ​ಸ್ವಾಮಿ ಮಾಲೀಕತ್ವದ ಜಮೀನು ವಿಚಾರದಲ್ಲಿ ದಿ. ಪುಟ್ಟಸ್ವಾಮಿಗೌಡ, ಜಿ. ಮಾದೇಗೌಡ ನಂತರ ಇದೀಗ ಎಸ್‌.ಆರ್‌. ಹಿರೇಮಠ್‌ ತಕರಾರು ತೆಗೆದಿದ್ದಾರೆ.

ಕೇತಗಾನಹಳ್ಳಿಯಲ್ಲಿ ಕುಮಾ​ರ​ಸ್ವಾಮಿ ಮಾಲೀಕತ್ವದ 46 ಎಕರೆ ಕೃಷಿಭೂಮಿ ಇದೆ. ಈ ಜಮೀನಿನಲ್ಲಿ ಯಾವುದಾದರೂ ಸರ್ಕಾರಿ ಭೂಮಿ ಇದ್ದರೆ, ತೆಗೆದುಕೊಳ್ಳಲಿ, ತಮ್ಮ ಜಮೀನು ಕುರಿತಂತೆ ಸಂಪೂರ್ಣ ವಿವರ ನೀಡುವುದಾಗಿ ಕುಮಾರಸ್ವಾಮಿ ಅವರೇ ತಿಳಿಸಿದ್ದಾರೆ. ಎಸ್‌.ಆರ್‌. ಹಿರೇಮಠ್‌ ಹಾಗೂ ರವಿಕೃಷ್ಣಾರೆಡ್ಡಿ ಅವರು ಹೇಳಿ ಕೇಳಿ ಮಾಹಿತಿ ಹಕ್ಕ ಕಾರ್ಯಕರ್ತರು. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕಲೆ ಹಾಕಿ, ಕಾನೂನು ಹೋರಾಟ ನಡೆಸಲಿ, ಅದನ್ನು ಬಿಟ್ಟು ಗ್ರಾಮಕ್ಕೆ ನುಗ್ಗಿ ಗ್ರಾಮದ ಮುಖ್ಯಸ್ಥರಲ್ಲೇ ಒಡಕು ಮೂಡಿಸುವ ಕೆಲಸ ಎಷ್ಟುಸರಿ ಎಂಬುದನ್ನು ಅವರೇ ಅರಿತುಕೊಳ್ಳಲಿ ಎಂದು ತಿರುಗೇಟು ನೀಡಿದರು.

ರಾಮನಗರ : ಹಿರೇಮಠ್ ಮೇಲೆ ಹಲ್ಲೆಗೆ ಯತ್ನ..

ಪ್ರಕ್ಷುಬ್ಧ ವಾತಾ​ವ​ರಣ:  ಕುಮಾರಸ್ವಾಮಿ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಹಿರೇಮಠ್‌-ರವಿಕೃಷ್ಣಾರೆಡ್ಡಿ ಅವರಿಗೆ ಕೋರ್ಟ್‌ ಆದೇಶ ನೀಡಿತ್ತಾ? ಅಥವಾ ಪೊಲೀಸರ ಗಮನಕ್ಕೆ ತಂದು ಇವರು ಗ್ರಾಮಕ್ಕೆ ಭೇಟಿ ನೀಡಿದ್ದರಾ? ಎಂಬುದನ್ನು ಅವರೇ ಬಹಿರಂಗಪಡಿಸಲಿ. ಈ ಇಬ್ಬರು ಕೇತಗಾನಹಳ್ಳಿ ಗ್ರಾಮದ ಯಾರದೋ ಮನೆಯಲ್ಲಿ ಕುಳಿತುಕೊಂಡು ಮಾಹಿತಿ ಕಲೆ ಹಾಕುವ ನೆಪದಲ್ಲಿ ಗ್ರಾಮದ ಕೆಲವರಿಗೆ ಕುಮ್ಮಕ್ಕು ನೀಡಿ ಪ್ರಕ್ಷುಬ್ಧ ವಾತಾ​ವ​ರಣ ನಿರ್ಮಾ​ಣ​ವಾ​ಗು​ವಂತೆ ಮಾಡಿ​ದ್ದಾರೆ.

ದೂರು ದಾಖಲು: ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದಿದೆ. ನಮ್ಮ ಕಾರ್ಯಕರ್ತರು ತಪ್ಪು ಮಾಡಿದ್ದರೆ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವೇನೂ ಇಲ್ಲ. ಒಂದೆಡೆ, ಪೊಲೀಸರಿಗೆ ಮಾಹಿತಿ ನೀಡದೆ, ಗ್ರಾಮಕ್ಕೆ ನುಗ್ಗಿದ್ದು ಅಲ್ಲದೆ, ಪೊಲೀಸರನ್ನೇ ಪ್ರಭಾವಿಗಳ ಬೂಟು ನೆಕ್ಕುವವರು ಅಂತ ಹೀಯಾಳಿಸುತ್ತೀರಾ. ಮತ್ತೊಂದೆಡೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತಾರೆ. ನಾವು ಕೂಡ ಹಿರೇಮಠ್‌ ಹಾಗೂ ರವಿಕೃಷ್ಣಾರೆಡ್ಡಿ ವಿರುದ್ಧ ಬಿಡದಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸುತ್ತೇವೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

ಸುದ್ದಿ​ಗೋ​ಷ್ಠಿ​ಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌, ಎಪಿಎಂಸಿ ಅಧ್ಯಕ್ಷ ಲಕ್ಕೋಜನಹಳ್ಳಿ ದೊರೆಸ್ವಾಮಿ, ಬಿಡದಿ ಪುರಸಭೆ ಸದಸ್ಯ ಆರ್‌. ದೇವರಾಜು, ಮುಖಂಡರಾದ ಬಿ. ಉಮೇಶ್‌, ಹೋಟೆಲ್‌ ಉಮೇಶ್‌, ಗೂಳಿಗೌಡ, ಸೋಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.