ಮೈಸೂರು (ಫೇ.23): ಮೈಸೂರು ನಗರ ಪಾಲಿಕೆ ಮೇಯರ್‌ ಮತ್ತು ಉಪ ಮೇಯರ್‌ ಚುನಾವಣೆ ಹೊಂದಾಣಿಕೆ ಕುರಿತು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ.

ಸೋಮವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಶಾಸಕ ಸಾ.ರಾ. ಮಹೇಶ್‌ ಕಚೇರಿಗೆ ತೆರಳಿ ಮೈತ್ರಿ ಕುರಿತು ಮಾತುಕತೆ ನಡೆಸಿದರು. ಸುಮಾರು ಒಂದು ಗಂಟೆ ಕಾಲ ನಡೆದ ಚರ್ಚೆಯ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯ ಬಗ್ಗೆ ಇಬ್ಬರೂ ನಾಯಕರಿಗೂ ಒಲವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂತು.

ಮೈತ್ರಿ ಕುರಿತು ಮೊದಲು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ನಮ್ಮ ಜೊತೆ ಮೈತ್ರಿ ಆಗುವಂತೆ ಮನವಿ ಮಾಡಿದ್ದೇವೆ. ಉತ್ತಮ ಆಡಳಿತ ನೀಡಲು ಜೆಡಿಎಸ್‌ ಸಹಕಾರ ಕೋರಿದ್ದೇವೆ. ಸಾ.ರಾ. ಮಹೇಶ್‌ ಅವರು ಹೈಕಮಾಂಡ್‌ ಬಳಿ ಮಾತುಕತೆ ನಡೆಸಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ನಮ್ಮ ನಿಲುವು ಒಂದೇ ಇದೆ. ನಮ್ಮ ಪಕ್ಷದ ಸದಸ್ಯರು ಮೇಯರ್‌ ಆಗಬೇಕು. ನಾವು ಕಾಂಗ್ರೆಸ್‌ ಜೊತೆ ಹೋಗಲ್ಲ. ಹಾಗಾಗಿ ಜೆಡಿಎಸ್‌ ಜೊತೆ ಹೋಗೋಣ ಅಂತ ಇದ್ದೀವಿ. ನಮ್ಮಿಬ್ಬರಿಗೂ ಋುಣಾನುಬಂದ ಇದೆ. ಕೊಡುವುದು ತೆಗೆದುಕೊಳ್ಳುವುದು ಜೆಡಿಎಸ್‌ ಜೊತೆ ಇದೆ. ಹಾಗಾಗಿ ನಮ್ಮ ಕಡೆ ಸ್ವಲ್ಪ ಅನುಕಂಪ ತೋರಿ ಎಂದು ಸಾ.ರಾ ಮಹೇಶ್‌ಗೆ ಮನವಿ ಮಾಡಿದ್ದೇನೆ ಎಂದರು.

'ಬಿಜೆಪಿ-ಜೆಡಿಎಸ್‌ ಒಂದಾಗಿದ್ದಕ್ಕೆ ಕಾಂಗ್ರೆಸ್‌ಗೆ ಹೊಟ್ಟೆಯುರಿ' ..

ಶಾಸಕ ಸಾ.ರಾ. ಮಹೇಶ್‌ ಮಾತನಾಡಿ, ನಗರ ಪಾಲಿಕೆಯಲ್ಲಿ ಯಾರಿಗೂ ಬಹುಮತವಿಲ್ಲ. ನಾವು ಯಾರ ಜೊತೆಯಾದರೂ ಮೈತ್ರಿಯಾಗಲೇ ಬೇಕು. ಈ ಹಿಂದೆ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದೆವು. ಆದರೆ ರಾಜ್ಯದಲ್ಲಿ ಮೈತ್ರಿ ಮುರಿದ ಬಳಿಕ ಮೈಸೂರು ನಗರ ಪಾಲಿಕೆ ಮೈತ್ರಿ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಈಗ ಬಿಜೆಪಿ ಸಚಿವರು, ಸಂಸದರು ಬಂದು ಮೈತ್ರಿ ಕುರಿತು ಮಾತನಾಡಿದ್ದಾರೆ. ಅವರ ಮನವಿಯನ್ನು ನಾನು ಹೈಕಮಾಂಡ್‌ ಗೆ ತಿಳಿಸುತ್ತೇನೆ. ಹೈ ಕಮಾಂಡ್‌ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ ಎಂದರು.

ಜೆಡಿಎಸ್‌ ಪಕ್ಷವೇ ಅಲ್ಲ, ನಾವು ಯಾರೊಂದಿಗೂ ಮೈತ್ರಿಯಾಗೋದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ ನಂತರವೇ ಇಷ್ಟೆಲ್ಲ ಆಗಿದ್ದು. ಅವರು ಆ ಹೇಳಿಕೆ ನೀಡದಿದ್ದರೆ ಏನೂ ಆಗುತ್ತಿರಲಿಲ್ಲ. ಈಗ ಬಿಜೆಪಿಯವರು ಸಹಕಾರ ಕೋರಿದ್ದಾರೆ. ನಾಳೆ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಆದರೆ ಜೆಡಿಎಸ್‌ನ ಕೆಲವು ಸದಸ್ಯರು ಕಾಂಗ್ರೆಸ್‌ ಪರವಾಗಿದ್ದರೆ, ಮತ್ತೆ ಕೆಲವರು ಬಿಜೆಪಿ ಪರವಾಗಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವುದಾಗಿ ಆರಂಭದಲ್ಲಿಯೇ ಮಾತುಕತೆಯಾಗಿತ್ತು. ಅದರಂತೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಆಡಳಿತ ನಗರ ಪಾಲಿಕೆಯಲ್ಲಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಿಂದಾಗಿ ಜೆಡಿಎಸ್‌ ಬಿಜೆಪಿ ಕಡೆ ಮುಖ ಮಾಡಿದಂತಿದೆ. ಆದರೆ ಕೆಲವು ಜೆಡಿಎಸ್‌ನ ನಗರ ಪಾಲಿಕೆ ಸದಸ್ಯರು ಮಾತ್ರ ನಾವು ಮಾತಿಗೆ ತಪ್ಪದೆ ಕಾಂಗ್ರೆಸ್‌ ಜೊತೆಯಲ್ಲಿಯೇ ಮೈತ್ರಿ ಮುಂದುವರೆಸೋಣ ಎಂಬ ಉದ್ದೇಶವಿದೆ. ಮತ್ತೆ ಕೆಲವರು ಕಾಂಗ್ರೆಸ್‌ ಜೊತೆ ಮೈತ್ರಿಯೇ ಬೇಡ, ಬಿಜೆಪಿ ಜೊತೆ ಹೋಗೋಣ ಎಂಬ ಇಚ್ಛೆ ಇನ್ನು ಕೆಲವರಲ್ಲಿದೆ.