ಕಾಫಿ ಬೆಳೆಗಾರರ ಸಾಲ ಮನ್ನಾ ..?
ಮಲೆನಾಡಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಕಾಫಿಹಣ್ಣುಗಳು ನೀರು ಪಾಲಾಗಿವೆ. ಈ ನಿಟ್ಟಿನಲ್ಲಿ ಸಾಲ ಮನ್ನಾಗೆ ಆಗ್ರಹಿಸಲಾಗಿದೆ.
ಚಿಕ್ಕಮಗಳೂರು (ಡಿ.10): ಕಳೆದೆರಡು ದಿನಗಳಿಂದ ಮಲೆನಾಡಿನಲ್ಲಿ ಸುರಿದ ಅಕಾಲಿಕ ಮಳೆಯಿಂದ ಫಸಲಿಗೆ ಬಂದಿದ್ದ ಕಾಫಿಹಣ್ಣುಗಳು ನೀರು ಪಾಲಾಗಿವೆ. ಸಂಕಷ್ಟದಲ್ಲಿರುವ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಜೆಡಿಎಸ್ ಜಿಲ್ಲಾ ವಕ್ತಾರ ಹೊಲದಗದ್ದೆ ಗಿರೀಶ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ಮಲ್ಲಂದೂರು, ಶಿರವಾಸೆ, ಅವತಿ, ಆಲ್ದೂರು, ಕೈಮರ, ಕಬ್ಬಿನಹಳ್ಳಿ, ಹೊಲದಗದ್ದೆ, ಜಾಗರ ಸೇರಿದಂತೆ ಮೂಡಿಗೆರೆ ಭಾಗದ ಹಲವು ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದೆ. ಇದರಿಂದ ಬೆಳೆದು ನಿಂತಿದ್ದ ಹಣ್ಣುಗಳೆಲ್ಲ ನೆಲಕಚ್ಚಿವೆ ಎಂದಿದ್ದಾರೆ.
ಕಳೆದ 15 ದಿನಗಳ ಹಿಂದೆ ಗಿಡದಲ್ಲಿ ಹಣ್ಣಾಗಿದ್ದ ಕಾಫಿಯನ್ನು ಕಾರ್ಮಿಕರ ಕೊರತೆಯಿಂದ ಕಟಾವು ಮಾಡಲು ಸಾಧ್ಯವಾಗದೇ ಕಳೆ ತೆರವು ಮಾಡಲಾಗುತ್ತಿತ್ತು. ಎರಡು ದಿನಗಳಿಂದ ಬೆಳೆಗಾರರು ಕಳೆ ತೆಗೆದು ಕಾಫಿ ಫಸಲನ್ನು ಕಟಾವು ಮಾಡಲು ಮುಂದಾಗಿದ್ದರು. ಬೆರಳೆಣಿಕೆಯಷ್ಟುಬೆಳೆಗಾರರು ಕಾಫಿ ಕಟಾವು ಮಾಡಿದ್ದರೆ ಶೇ.98 ರಷ್ಟುತೋಟಗಳಲ್ಲಿ ಹಣ್ಣು ಬೆಳೆದು ನಿಂತಿತ್ತು. ಚಂಡಮಾರುತದ ಅಬ್ಬರದ ಪರಿಣಾಮ ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಮೋಡ ಕವಿದು ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದು, ಮಂಗಳವಾರ ಧಾರಾಕಾರ ಮಳೆ ಸುರಿದು ಮಲೆನಾಡಿನ ಕಾಫಿತೋಟಗಳಲ್ಲಿ ಕೈಗೆ ಬಂದಿದ್ದ ಫಸಲು ನೆಲಸಮವಾಗಿ ತೀವ್ರ ನಷ್ಟಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ.
'ರೈತರೇನು ಉಗ್ರಗಾಮಿಗಳಾ, ಕಳ್ಳರಂತೆ ಕಾಣ್ತಾರಾ'? ..
ಹತ್ತಾರು ವರ್ಷದಿಂದ ಹವಾಮಾನ ವೈಪರೀತ್ಯದಿಂದ ಕಾಫಿ ಇಳುವರಿ ಕಡಿಮೆ ಇತ್ತು. ಬೆಲೆ ಏರಿಳಿತ, ಗೊಬ್ಬರ, ರಾಸಾಯನಿಕ ಬೆಲೆ ಏರಿಕೆ, ಕಾರ್ಮಿಕರ ಕೊರತೆಯಿಂದ ಪ್ರತಿವರ್ಷ ಬೆಳೆಗಾರರು ಸಾಲದಲ್ಲೆ ಮುಳುಗಿದ್ದರು. ಈ ಬಗ್ಗೆ ಸರ್ಕಾರಕ್ಕೆ ಎಷ್ಟುಬಾರಿ ಮನವಿ ಮಾಡಿದ್ದರೂ ಸ್ಪಂದಿಸಿರಲಿಲ್ಲ. ತೋಟಗಳಿಗೆ ಭೇಟಿ ನೀಡಿ ಸತ್ಯಾಸತ್ಯತೆ ಅರಿತು ಕೇಂದ್ರಕ್ಕೆ ವರದಿ ನೀಡಿ ಎಂದು ಕಾಫಿ ಮಂಡಳಿಗೆ ಅಂಗಲಾಚಿದರೂ ಕೂಡ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಬೆಳೆಗಾರರ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಮಲೆನಾಡಿನಲ್ಲಿ 25 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಮಳೆ ಬಿದ್ದಿದ್ದು ಗಾಯದ ಮೇಲೆ ಬರೆಎಳೆದಂತಾಗಿದೆ. ಮಳೆ ಹೀಗೆ ಮುಂದುವರಿದರೆ ಶೇ.10ರಷ್ಟುಫಸಲನ್ನು ಕಟಾವು ಮಾಡಲು ಸಾಧ್ಯವಾಗದು. ಹಾಗಾಗಿ, ಸರ್ಕಾರ ಕೂಡಲೇ ಬೆಳೆಗಾರರ ಸಾಲಮನ್ನಾಕ್ಕೆ ಮುಂದಾಗದಿದ್ದರೆ ಆತ್ಯಹತ್ಯೆ ದಾರಿ ಹಿಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ ಎಂದು ತಿಳಿಸಿದ್ದಾರೆ.
ಇಷ್ಟೆಲ್ಲಾ ಸಂಕಷ್ಟದ ನಡುವೆ ಬೆಳೆಗಾರರು ಕಾಫಿ ಮಾರಾಟ ಮಾಡುವ ಸಂದರ್ಭ ಕೆಲವು ಕಾಫಿ ವ್ಯಾಪಾರಸ್ಥರು ತೂಕದಲ್ಲಿ ಮೋಸವಾಗುತ್ತಿದೆ. ಅಳತೆಗೆ ಎಲೆಕ್ಟ್ರಾನಿಕ್ ಯಂತ್ರವನ್ನೇ ಬಳಸಿದರೆ ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಬಹುದು ಹೇಳಿಕೆಯಲ್ಲಿ ತಿಳಿಸಿರುವ ಅವರು, ಈ ಬಗ್ಗೆಯೂ ಜಿಲ್ಲಾಧಿಕಾರಿ ಗಮನಹರಿಸಿ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸುವಂತೆ ಆಗ್ರಹಿಸಿದ್ದಾರೆ.