ಕೊಬ್ಬರಿ ಬೆಲೆ ಏರಿಕೆಗೆ ಜೆಡಿಎಸ್ ವರಿಷ್ಠರೇ ಕಾರಣ: ಕೆಟಿಎಸ್
ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರ ಫಲವಾಗಿ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 250 ರು. ಬೆಂಬಲ ಬೆಲೆ ನೀಡುವ ಮೂಲಕ 12 ಸಾವಿರ ರು. ಗಳಿಗೆ ಹೆಚ್ಚಿದ್ದು ಜೆಡಿಎಸ್ ಸದಾ ರೈತ ಪರವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ತಿಪಟೂರು: ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಒತ್ತಾಯಿಸಿದ್ದರ ಫಲವಾಗಿ ಕೇಂದ್ರ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 250 ರು. ಬೆಂಬಲ ಬೆಲೆ ನೀಡುವ ಮೂಲಕ 12 ಸಾವಿರ ರು. ಗಳಿಗೆ ಹೆಚ್ಚಿದ್ದು ಜೆಡಿಎಸ್ ಸದಾ ರೈತ ಪರವಾಗಿದೆ ಎಂದು ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ತಿಳಿಸಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿಗೆ ಬೆಲೆ ಹೆಚ್ಚಿಸುವಂತೆ ಹೋರಾಟ, ಧರಣಿ, ಮುಷ್ಕರಗಳು ನಡೆದರೂ ಸರ್ಕಾರ ರೈತರ ಮನವಿಗೆ ಸ್ಪಂದಿಸಿರಲಿಲ್ಲ. ರೈತರ ಸಂಕಷ್ಟವನ್ನು ಅರಿತ ದೇವೇಗೌಡರು ಖುದ್ದು ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರ ಪರಿಣಾಮ ಒಂದೇ ದಿನದಲ್ಲಿ ತೀರ್ಮಾನ ತೆಗೆದುಕೊಂಡು ಕ್ವಿಂಟಾಲ್ ಕೊಬ್ಬರಿಗೆ 250 ರು. ಪ್ರೋತ್ಸಾಹ ಧನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಉಳಿಸಿಕೊಳ್ಳದಿದ್ದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ರೈತರೊಂದಿಗೆ ಬೃಹತ್ ಪಾದಯಾತ್ರೆ ಹಮ್ಮಿಕೊಂಡು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಶಿವಸ್ವಾಮಿ, ಮುಖಂಡರಾದ ನಟರಾಜು, ಮಂಜುನಾಥ್ ಪರುವಗೊಂಡನಹಳ್ಳಿ, ನೇತ್ರಾನಂದ, ಸಂತೋಷ್, ಷಡಕ್ಷರಿ, ಲೋಕೇಶ್, ಕಾಂತರಾಜು, ವಸಂತ್, ಶಿವಾನಂದ್ ಮತ್ತಿತರಿದ್ದರು.
ಆರೋಗ್ಯದ ದೃಷ್ಟಿಯಿಂದ ಕೊಬ್ಬರಿ ಉತ್ತಮ ಪೌಷ್ಠಿಕಾಂಶದಿಂದ ಕೂಡಿದ್ದು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟದ ಜೊತೆ ಕೊಬ್ಬರಿ ಮತ್ತು ಬೆಲ್ಲ ನೀಡುವುದರಿಂದ ಮಕ್ಕಳ ಆರೋಗ್ಯ ಸುಧಾರಣೆಯಾಗಲಿದ್ದು ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕಿದ್ದು ಇದರಿಂದ ರೈತರಿಗೂ ಅನುಕೂಲವಾಗಲಿದೆ.
ಕೆ.ಟಿ. ಶಾಂತಕುಮಾರ್, ಜೆಡಿಎಸ್ ಮುಖಂಡ