ಕೆ.ಆರ್‌ .ಪೇಟೆ(ಆ.17) : ಬೆಂಗಳೂರಿನ ಡಿ.ಜೆ.ಹಳ್ಳಿ ಗಲಭೆ ಬಳಿಕ ಬಿಜೆಪಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ ಎಂದು ಹಾಸನ ಜಿಲ್ಲಾ ಸಂಸದ ಪ್ರಜ್ವಲ್ ರೇವಣ್ಣ ಶನಿವಾರ ಟೀಕಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಮುಖಂಡರೊಂದಿಗೆ ಚರ್ಚಿಸಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲಿನ ದಾಳಿಯನ್ನು ಕಂಡಿಸಿದ ಸಂಸದರು, ಡಿಜೆ ಹಳ್ಳಿ ಗಲಭೆಯಲ್ಲಿ ನಡೆದುಕೊಂಡ ಸಂಘಟನೆ ಮತ್ತು ಗಲಭೆ ನಂತರ ಬಿಜೆಪಿ ನಡೆದುಕೊಳ್ಳುತ್ತಿರುವ ನೀತಿ ವಿರುದ್ಧ ಅಸಮಾಧನ ವ್ಯಕ್ತಪಡಿಸಿದರು.

ಗಲಭೆ ನಂತರ ಆ ಪ್ರದೇಶದಲ್ಲಿ ಶಾಂತಿ ಕಾಪಾಡಬೇಕಾದ ಬಿಜೆಪಿ ಪರಸ್ಪರ ಕೇಸರೆರಚಾಟ ಮಾಡುತ್ತಿದೆ. ಘಟನೆ ಬಗ್ಗೆ ಯಾರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಬಿಜೆಪಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು ಎಂದು ಹೇಳಿದರು.

'ಬಿಜೆಪಿ ಸೇರಲು ಜೆಡಿಎಸ್‌ನ ನಾಲ್ವರು ಶಾಸಕರ ಉತ್ಸುಕ' ...

ಹಳೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್‌ ದುರ್ಬಲವಾಗಿರುವುದರಿಂದ ಬಿಜೆಪಿ ಬೇರೂರುತ್ತಿದೆ. ಈ ಹಿಂದೆ ಕಾಂಗ್ರೆಸ್‌, ಜೆಡಿಎಸ್‌ ನಡುವೆ ಹೋರಾಟವಿತ್ತು. ಈಗ ಕಾಂಗ್ರೆಸ್‌ ವೀಕ್‌ ಆಗಿದೆ. ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಹೋರಾಟ ನಡೆಯುತ್ತಿದೆ. ನಮ್ಮ ಪಕ್ಷ ಸಂಘಟನೆ ಪ್ರಬಲವಾಗಿದೆ. ಇನ್ನೂ ಸಂಘಟನೆಗೆ ಒತ್ತು ನೀಡುತ್ತೇವೆ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ನಲವತ್ತು ಕ್ಷೇತ್ರಗಳಲ್ಲಿ ಜೆಡಿಎಸ್‌ 5 ಸಾವಿರಕ್ಕೂ ಕಡಿಮೆ ಮತಗಳಿಂದ ಸೋತಿದೆ. ಕುಮಾರಣ್ಣ ಪಕ್ಷ ಸಂಘಟನೆಗೆ ಪೈಲಚ್‌ ಪ್ರಾಜೆಕ್ಟ್ ತಯಾರಿಸಿದ್ದಾರೆ. ಕೊರೋನಾ ಮುಗಿದ ನಂತರ ಯುವಕರಿಗೆ ಹೆಚ್ಚು ಆದ್ಯತೆ ನೀಡಿ ಪಕ್ಷವನ್ನು ಈಗಿನಿಂದಲೇ ಚುನಾವಣೆಗೆ ಸಜ್ಜುಗೊಳಿಸುತ್ತೇವೆ ಎಂದು ತಿಳಿಸಿದರು.