ಶಿವಮೊಗ್ಗ (ಅ.22):  ಜಿಲ್ಲಾ ಪಂಚಾಯಿತಿಯಲ್ಲಿ ಅಧಿಕಾರ ಹಿಡಿಯಲು ರಾಜಕೀಯ ಪಕ್ಷಗಳ ನಡುವೆ ನಡೆಯುತ್ತಿರುವ ಸಂಖ್ಯಾ ಬಲದ ಮೇಲಾಟಕ್ಕೆ ಜಿಪಂ ಅಧಿಕಾರಾವಧಿಯ ಕೊನೆಯ ಗಳಿಗೆಯಲ್ಲಿ ತೆರೆ ಬೀಳುವ ಸಾಧ್ಯತೆ ಕಾಣಿಸುತ್ತಿದೆ. ಬಿಜೆಪಿ ತನ್ನ ಅಸ್ತಿತ್ವ ದಾಖಲಿಸುವ ಪ್ರಯತ್ನ ಯಶ ಕೊಡುವ ಸಾಧ್ಯತೆ ಇದೆ.

ಜಿಪಂ ಅಧ್ಯಕ್ಷೆ ಜೆಡಿಎಸ್‌ ಸದಸ್ಯೆ ಜ್ಯೋತಿ ಎಸ್‌. ಕುಮಾರ್‌ ಅವರೇ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಈಗಾಗಲೇ ಈ ಕುರಿತು ಬಿಜೆಪಿ ವರಿಷ್ಟರ ಜೊತೆ ಮಾತುಕತೆ ಕೂಡಾ ನಡೆದಿದೆ. ಜ್ಯೋತಿಯವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಜಿಪಂ ಐದು ವರ್ಷಗಳ ಕೊನೆಯ ದಿನಗಳಲ್ಲಿ ತಾಂತ್ರಿಕವಾಗಿ ಬಿಜೆಪಿ ಅಧಿಕಾರ ಗಳಿಸಿದಂತಾಗುತ್ತದೆ.

ಬೈಎಲೆಕ್ಷನ್‌: 'ವಿಜಯೇಂದ್ರ ನೇತೃತ್ವದಲ್ಲಿ ಶಿರಾ ಕ್ಷೇತ್ರ ಗೆಲುವು' ...

ಕಳೆದ ಚುನಾವಣೆಯಲ್ಲಿ ಒಟ್ಟು 31 ಸ್ಥಾನಗಳ ಪೈಕಿ ಬಿಜೆಪಿ 15, ಕಾಂಗ್ರೆಸ್‌ 8, ಜೆಡಿಎಸ್‌ 7 ಮತ್ತು ಪಕ್ಷೇತರ(ಬಂಡಾಯ ಕಾಂಗ್ರೆಸ್‌) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಒಂದು ಸ್ಥಾನದ ಕೊರತೆಯಿಂದಾಗಿ ಬಿಜೆಪಿಗೆ ಅಧಿಕಾರ ದಕ್ಕಿರಲಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಪಕ್ಷೇತರ ಅಭ್ಯರ್ಥಿಯ ಬೆಂಬಲದೊಂದಿಗೆ ಅಧಿಕಾರ ಪಡೆದರು. ಈ ಒಪ್ಪಂದದಂತೆ ಜೆಡಿಎಸ್‌ಗೆ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ನಿಗದಿಗೊಳಿಸಲಾಯಿತು. ಆದರೆ ಕಾಲ ಬದಲಾಯಿತು. ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌ ಮೊದಲ ಅವಧಿಯ ಬಳಿಕ ತಮ್ಮ ಸ್ಥಾನ ಬಿಟ್ಟುಕೊಡಲಿಲ್ಲ. ಪಕ್ಷದ ಮುಖಂಡರ ಸಂಧಾನವೂ ಫಲಿಸಲಿಲ್ಲ.

ಇತ್ತ ಜೆಡಿಎಸ್‌ನ ಆಂತರಿಕ ಬೇಗುದಿ ಈ ರಾಜಕೀಯ ಮೇಲಾಟಕ್ಕೆ ಇಂಬು ನೀಡಿತು. ಅಪ್ಪಾಜಿಗೌಡರ ಆಪ್ತ ವಲಯದಲ್ಲಿದ್ದ ಜ್ಯೋತಿ ಎಸ್‌. ಕುಮಾರ್‌ ಮತ್ತು ಅವರ ಪತಿ ಅಪ್ಪಾಜಿಗೌಡರಿಂದ ದೂರವಾದರು. ಮಧು ಬಂಗಾರಪ್ಪ ಇವರ ಬೆಂಬಲಕ್ಕೆ ಬರಲಿಲ್ಲ. ಆರ್‌. ಎಂ. ಮಂಜುನಾಥಗೌಡರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತಿದ್ದರು. ಕಾಂಗ್ರೆಸ್‌ ಮತ್ತು ಉಳಿದ ಜೆಡಿಎಸ್‌ ಸದಸ್ಯರಿಗೆ ಉಂಟಾದ ಅಸಮಾಧಾನಕ್ಕೆ ಬೆಲೆ ಸಿಗಲಿಲ್ಲ. ಈ ಅಸಮಾಧಾನ ಹೆಚ್ಚಾಗುತ್ತಿದ್ದಂತೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಪ್ರಯತ್ನ ನಡೆಯಿತು. ಇತ್ತ ಅವಿಶ್ವಾಸ ವಿಶ್ವಾಸದ ಪ್ರಯತ್ನ ನಡೆಯುತ್ತಿರುವಂತೆಯೇ ಇನ್ನೊಂದೆಡೆ ಬಿಜೆಪಿ ಮತ್ತು ಜೆಡಿಎಸ್‌ ಒಟ್ಟಾಗಿ ಅಧಿಕಾರ ಪಡೆಯುವ ಪ್ರಯತ್ನವೂ ತೆರೆ ಮರೆಯಲ್ಲಿ ನಡೆಯಿತು. ಆದರೆ ಯಾವ ರಾಜಕೀಯ ಲೆಕ್ಕಾಚಾರವೂ ಯಶಸ್ವಿಯಾಗಲಿಲ್ಲ. ಜ್ಯೋತಿ ಅಧ್ಯಕ್ಷರಾಗಿ ಮುಂದುವರೆಯುತ್ತಲೇ ಇದ್ದರು.

ಆದರೀಗ ಈ ರಾಜಕೀಯಕ್ಕೆ ಇನ್ನೊಂದು ರೂಪ ನೀಡುವ ಪ್ರಯತ್ನ ಸಾಗಿದೆ. ಜೆಡಿಎಸ್‌ ಜೊತೆ ಹೊಂದಾಣಿಕೆಯ ಬದಲಾಗಿ ಒಂದು ಸ್ಥಾನ ಎದುರಿಸುತ್ತಿರುವ ಸಂದರ್ಭದಲ್ಲಿ ಜ್ಯೋತಿಯವರನ್ನೇ ಪಕ್ಷಕ್ಕೆ ಬರ ಮಾಡಿಕೊಂಡರೆ ಹೇಗೆ ಎಂಬ ಚಿಂತನೆ ಬಿಜೆಪಿಯಲ್ಲಿದೆ. ಈ ಪ್ರಯತ್ನಕ್ಕೆ ಇದೀಗ ವೇಗ ಸಿಕ್ಕಿದೆ. ಆದರೆ ಇನ್ನೂ ಅಂತಿಮ ಸ್ವರೂಪಕ್ಕೆ ಬರಲಾಗಿಲ್ಲ

ಬಿಜೆಪಿ ಬೆಂಬಲ ಇರುವ ಕಾರಣಕ್ಕಾಗಿಯೇ ಜ್ಯೋತಿ ಅವರು ಜಿಪಂ ಅಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತಿಲ್ಲ ಎಂಬ ಮಾತು ಮೈತ್ರಿಕೂಟದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಜಿಪಂ ಸ್ಥಾಯಿ ಸಮಿತಿ ಆಯ್ಕೆ ಸಂದರ್ಭದಲ್ಲಿ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌ ಬಿಜೆಪಿಗೆ ಅನುಕೂಲವಾಗುಂತೆ ನಡೆದುಕೊಂಡಿದ್ದರು ಎಂಬ ದೂರು ಮೈತ್ರಿಕೂಟದ್ದು.

30 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿ ಇದ್ದೇನೆ. ಭದ್ರಾವತಿ ಮಾಜಿ ಶಾಸಕ ಅಪ್ಪಾಜಿಗೌಡರ ಜೊತೆಯಲ್ಲಿ ಇದ್ದು, ಅವರು ಯಾವುದೇ ಪಕ್ಷಕ್ಕೆ ಹೋದರೂ ಅವರ ಜೊತೆಯಲ್ಲಿ ಹೋಗುತ್ತಿದ್ದೆ. ಜಿಪಂ ಅಧ್ಯಕ್ಷ ಸ್ಥಾನ ವಿಚಾರದಲ್ಲಿ ಬಿಜೆಪಿ ಬೆಂಬಲ ನೀಡಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಆಗುವ ಬಗ್ಗೆ ಮಾತುಕತೆ ನಡೆಸಲಾಗುತ್ತಿದೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧಾರ ಮಾಡುತ್ತೇನೆ.

- ಎಸ್‌.ಕುಮಾರ್‌, ಜಿಪಂ ಮಾಜಿ ಸದಸ್ಯ, (ಜಿಪಂ ಹಾಲಿ ಅಧ್ಯಕ್ಷೆ ಪತಿ)