ಮಂಡ್ಯ, (ಸೆ. 21):  ಸುಮಲತಾ ಅಂಬರೀಶ್ ವಿರುದ್ಧ ಟೀಕಿಸಿದ್ದ ಜೆಡಿಎಸ್ ಮುಖಂಡ ಎಲ್‌.ಆರ್‌.ಶಿವರಾಮೇಗೌಡ ಅವರು ಅಂಬರೀಶ್ ಅವರನ್ನ ರಾಜಕೀಯಕ್ಕೆ ಕರೆತರುವಲ್ಲಿ ನನ್ನದೂ ಪಾತ್ರವಿದೆ ಎಂದು ಹೇಳಿದ್ದಾರೆ.

ಮಂಡ್ಯದ ನಾಗಮಂಗಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರನ್ನ ರಾಜಕೀಯಕ್ಕೆ ಕರೆತರುವಲ್ಲಿ ನನ್ನದೂ ಪಾತ್ರವಿದೆ. ಯಾವ ರೀತಿ ಪಾತ್ರ ಅನ್ನೋದರ ಬಗ್ಗೆ ತಿಳಿಯಲು ಸುಮಲತಾ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಸುಮಲತಾ, ಜಯಲಲಿತಾರನ್ನು ಮೀರಿಸುವ ಮಾಯಾಂಗಿನಿ ಎಂದು ನಾಲಿಗೆ ಹರಿಬಿಟ್ಟ ಸಂಸದ

ಲೋಕಸಭಾ ಚುನಾವಣೆ ವೇಳೆ ಫಲಿತಾಂಶದ ಬಳಿಕ‌ ಸುಮಲತಾ ಟೂರಿಂಗ್ ಟಾಕೀಸ್ ಎತ್ತಂಗಡಿಯಾಗಲಿದೆ ಎಂದು ಟೀಕಿಸಿದ್ದ ಶಿವರಾಮೇಗೌಡ ಪ್ರತಿಕ್ರಿಯಿಸಿ, ಚುನಾವಣೆ ಬಳಿಕ ಟೂರಿಂಗ್ ಟಾಕಿಸ್ ಆಗಬಹುದೆಂದು ಅನಿಸಿತ್ತು, ಹೇಳಿದ್ದೆ. ಸುಮಲತಾ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಏನೂ ಇಲ್ಲ. ಅವರು ನನ್ನ ಸಿಸ್ಟರ್ ಇದ್ದಂಗೆ ಎಂದು ಹೇಳಿದರು.

ಅಂಬರೀಶ್ ರಾಜಕೀಯವಾಗಿ ಯಾರಿಗೂ ತೊಂದರೆ ಕೊಟ್ಟಿಲ್ಲ. ಕೆಲಸ ಮಾಡ್ಲಿಲ್ಲ. ಅಂದ್ರೂ ಜನಾಭಿಪ್ರಾಯದಲ್ಲಿ ದೊಡ್ಡ ಹೆಸರು ಉಳಿಸಿಕೊಂಡಿದ್ದರು. ಅದೇ ರೀತಿ ಇವರು ಕೆಲಸ ಮಾಡಲ್ವೇನೊ ಎಂಬ ಭಯ ಇತ್ತು  ಎಂದರು.

ನಮ್ಮ ಶಾಸಕರು ಒನ್ ಟು ಡಬಲ್ ವೋಟ್ ಒತ್ತಿಸ್ತೀನಿ ಅಂದ್ರು. ಅದು ಆಯ್ತಾ...? ಎಂದು ತಮ್ಮ ಜೆಡಿಎಸ್ ಪಕ್ಷದ ನಾಯಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಜೆಡಿಎಸ್ ಮುಖಂಡರುಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದರು. ಬೇರೆ ಜಿಲ್ಲೆಯಿಂದ ಅಭ್ಯರ್ಥಿ ಕರೆತಂದ್ರು ಎಂದು ಜನ ತೀರ್ಪು ತೆಗೆದುಕೊಂಡ್ರು.  ಹೊರ ಜಿಲ್ಲೆಯವರಾಗಿದ್ದರಿಂದ ನಿಖಿಲ್ ಸೋಲಾಯ್ತು ಎಂದು ತಿಳಿಸಿದರು.

ಹೆಣ್ಣು ಮಗಳು, ಸ್ವಾಭಿಮಾನಕ್ಕಾಗಿ ಸುಮಲತಾರನ್ನು ಗೆಲ್ಲಿಸಿದ್ರು ಎಂದು ಹೇಳುವ ಮೂಲಕ ಸುಮಲತಾ ಗೆಲುವು ಸ್ವಾಭಿಮಾನದ ಗೆಲುವು ಎಂದು ಶಿವರಾಮೇಗೌಡ ಒಪ್ಪಿಕೊಂಡರು.