'ಮುಖ್ಯಮಂತ್ರಿಯಾಗುವ ಬಗ್ಗೆ ಕಾಂಗ್ರೆಸ್ಸಿಗರು ಹಗಲುಗನಸು ಕಾಣ್ತಿದ್ದಾರೆ'
* ಎರಡು ವರ್ಷ ಇರುವಾಗಲೇ ಎಲ್ಲ ಪಕ್ಷಗಳಲ್ಲಿ ಕಚ್ಚಾಟ-ಶ್ರೀನಾಥ
* ಅಧಿಕಾರದ ಹುಚ್ಚು ಬಿಟ್ಟು ಕೋವಿಡ್ ಪರಿಹಾರಕ್ಕೆ ಹೋರಾಡಿ
* ಕೋವಿಡ್‌ನಿಂದ ಮೃತರ ಕುಟುಂಬ ವರ್ಗಕ್ಕೆ ಪರಿಹಾರ ನೀಡುವಲ್ಲಿ ವಿಫಲ
ಗಂಗಾವತಿ(ಜೂ.25): ಕಾಂಗ್ರೆಸ್‌ನವರು ಹಗಲು ಕನಸು ಕಾಣುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಬಗ್ಗೆ ಜನರು ಮನನೊಂದಿದ್ದಾರೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುವ ಹಗಲು ಕನಸು ಕಂಡಿದ್ದಾರೆ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕಲ್ಯಾಣ ಕರ್ನಾಟಕ ಪ್ರದೇಶದ ಜೆಡಿಎಸ್ ಉಪಾದ್ಯಕ್ಷ ಎಚ್.ಆರ್. ಶ್ರೀನಾಥ ಎಂದು ಲೇವಡಿ ಮಾಡಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯಾಗುವುದಕ್ಕೆ ಇನ್ನೂ ಎರಡು ವರ್ಷ ಅವಧಿ ಇದೆ. ಈಗಲೇ ಎಲ್ಲ ಮುಖ್ಯಮಂತ್ರಿ ಕುರ್ಚಿಗಾಗಿ ಜಗಳ ನಡೆದಿದೆ. ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ ಮತ್ತು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಾಗಲೇ ಪೈಪೋಟಿ ನಡೆಸಿದ್ದಾರೆ, ಇದು ಸರಿಯಲ್ಲ. ಮತದಾರರು ಯಾವ ಪಕ್ಷಕ್ಕೆ ಬಹುಮತ ನೀಡುತ್ತಾರೆಯೋ ಆ ಪಕ್ಷದ ನಾಯಕರು ಮುಖ್ಯಮಂತ್ರಿಯಾಗುತ್ತಾರೆ ಎಂದರು.
ಕಾಂಗ್ರೆಸ್‌ನಲ್ಲೂ ಸಿಎಂ ಕುರ್ಚಿಗೆ ಗುದ್ದಾಟ: ನಾನೂ ಮುಖ್ಯಮಂತ್ರಿ ಆಕಾಂಕ್ಷಿ ಎಂದ ಎಸ್.ಆರ್.ಪಾಟೀಲ್
ಬಿಜೆಪಿ ವಿಫಲ:
ರಾಜ್ಯದಲ್ಲಿ ಕೋವಿಡ್ ಹಬ್ಬುತ್ತಿದ್ದರೂ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಎಚ್.ಆರ್. ಶ್ರೀನಾಥ ಅರೋಪಿಸಿದರು. ಸಾವು-ನೋವುಗಳು ಆಗಿದ್ದರೂ ಅವರ ಕುಟುಂಬ ವರ್ಗಕ್ಕೆ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಅಲ್ಲದೆ ವ್ಯಾಕ್ಸಿನ್‌ಗಳ ಮಾರಾಟ ನಿರಂತರವಾಗಿ ನಡೆಯುತ್ತಿದ್ದರೂ ಕ್ರಮ ಕೈಗೊಳ್ಳುವಲ್ಲಿ ಮುಖ್ಯಮಂತ್ರಿ ವಿಫಲರಾಗಿದ್ದಾರೆ ಎಂದು ದೂರಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಉಸ್ಮಾನ ಹಾಗೂ ಪ್ರಮುಖರು ಇದ್ದರು.
ಅನ್ಸಾರಿ -ತಾವು ಒಂದಾಗಬಹುದು
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಾವು ಒಂದಾಗಬಹುದು ಅಥವಾ ವಿರುದ್ಧವಾಗಬಹುದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಹಾರಿಕೆಯ ಹೇಳಿಕೆ ನೀಡಿದ್ದಾರೆ. ತಮ್ಮ ತಂದೆ ಮಾಜಿ ಸಂಸದ ಎಚ್.ಜಿ. ರಾಮಲು ಇಂದಿರಾ ಗಾಂಧಿ ಗರಡಿಯಲ್ಲಿ ಪಳಗಿದ್ದಾರೆ. ಅವರು ಮೂಲತಃ ಕಾಂಗ್ರೆಸ್‌ನವರು. ಈಗ ನಾನು ಜೆಡಿಎಸ್‌ನಲ್ಲಿದ್ದೇನೆ. ಇಕ್ಬಾಲ್ ಅನ್ಸಾರಿ ಕಾಂಗ್ರೆಸ್‌ನಲ್ಲಿದ್ದಾರೆ. ಬರುವ ಚುನಾವಣೆಯಲ್ಲಿ ಇಬ್ಬರೂ ಒಂದಾಗಬಹುದು, ಇಲ್ಲವೇ ವಿರುದ್ಧವಾಗಬಹುದು. ಚುನಾವಣೆ ಸಂದರ್ಭದಲ್ಲಿ ಆ ಪ್ರಶ್ನೆ ಉದ್ಭವಿಸುತ್ತದೆ. ತಾವು ಚುನಾವಣೆ ಸ್ಪರ್ಧಿಸುವ ಕುರಿತಾದ ಪ್ರಶ್ನೆಗೆ, ತಮ್ಮ ತಂದೆ ನೀಡುವ ಮಾರ್ಗದರ್ಶನದಲ್ಲಿ ಮುಂದೆ ಹೋಗುವುದಾಗಿ ಹೇಳಿದರು. ಇಕ್ಬಾಲ್ ಅನ್ಸಾರಿ ಜೆಡಿಎಸ್ ಸೇರುವುದು, ಶ್ರೀನಾಥ ಕಾಂಗ್ರೆಸ್ ಸೇರುವುದು ಗಾಳಿಸುದ್ದಿಯಾಗಿದೆ ಎಂದರು.