ಹಾಸನ[ಅ.06] :  ನೆರೆ ಸಂತ್ರಸ್ತರ ನೆರವಿನ ಕೇಂದ್ರ ಬಿಡುಗಡೆ ಮಾಡಿರುವ ಪರಿಹಾರ ಹಣ 1200 ಕೋಟಿ ರು. ಏನೇನೂ ಸಾಲದು, ಕನಿಷ್ಠ 10 ಸಾವಿರ ಕೋಟಿ ರು. ಕೂಡಲೇ ಬಿಡುಗಡೆ ಮಾಡಬೇಕು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊನೆಗೂ ಜನಪ್ರತಿನಿಧಿಗಳ ಒತ್ತಡಕ್ಕಿಂತ ಹೆಚ್ಚಾಗಿ ಸಂತ್ರಸ್ತರು, ಜನಸಾಮಾನ್ಯರ ಒತ್ತಡಕ್ಕೆ ಮಣಿದು 1200 ಕೋಟಿ ರು. ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಒಪ್ಪಿದೆ. ಆದರೆ, ರಾಜ್ಯ ಸರ್ಕಾರ ಕೇಳಿದ್ದು 38 ಸಾವಿರ ಕೋಟಿ ರು. ಕೇಂದ್ರ ಬಿಡುಗಡೆ ಮಾಡಿರುವುದು ಕೇವಲ ಶೇ.3ರಷ್ಟು ಮಾತ್ರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಣವನ್ನು ಮನಸ್ಸಿಲ್ಲದೇ ಬಿಡುಗಡೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಕೊಡುತ್ತಿರುವ ಹಣ ಯಾವುದಕ್ಕೂ ಸಾಲದು. ನೆರೆ ಸಂತ್ರಸ್ತರ ಸ್ಥಳಕ್ಕೆ ಕನಿಷ್ಠ ಪ್ರಧಾನಿಯವರು ಬರಬೇಕಾಗಿತ್ತು. ಅಮೆರಿಕಕ್ಕೆ ಪ್ರವಾಸಕ್ಕೆಂದು ಪ್ರಧಾನಿ 8ರಿಂದ 9ದಿವಸ ಹೋಗುತ್ತಾರೆ. ಆದರೆ, ಕರ್ನಾಟಕಕ್ಕೆ ಭೇಟಿ ನೀಡಿ ನೆರೆ ಸಂತಸ್ತರ ಕಷ್ಟಅಳಲು ಕೇಳಲು ಅವರಿಗೆ ಸಮಯವಿಲ್ಲ ಎಂದು ಟೀಕಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಷ್ಟಕ್ಕೆ ರಾಜ್ಯ ಸರ್ಕಾರ ತೃಪ್ತಿಪಟ್ಟುಕೊಳ್ಳುವುದು ತಪ್ಪಾಗುತ್ತದೆ. ಪ್ರಕೃತಿ ಪರಿಹಾರ ನಿಧಿಯಿಂದಲೂ ರಾಜ್ಯ ಸರ್ಕಾರಕ್ಕೆ ಹಣ ಕೊಡಬಹುದು. ರಾಜ್ಯದಲ್ಲಿ 10ರಿಂದ 12 ಜಿಲ್ಲೆಗಳು ಜಲವೃತವಾಗಿ ನಷ್ಟವಾಗಿದೆ. ತುರ್ತಾಗಿ ಇನ್ನು ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಜೆಡಿಎಸ್‌, ಕಾಂಗ್ರೆಸ್‌ ಶಾಸಕರ ಅನುದಾನಕ್ಕೆ ತಡೆ :  ಬೊಕ್ಕಸದಲ್ಲಿ ಹಣ ಇಲ್ಲ ಎಂದು ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಹೇಳಿದ್ದಾರೆ. ಆದರೆ, ಜೆಡಿಎಸ್‌-ಕಾಂಗ್ರೆಸ್‌ ಶಾಸಕರ ಅನುದಾನವನ್ನು ತಡೆ ಹಿಡಿದಿದ್ದಾರೆ. ಹಿಂದಿನ ಸರ್ಕಾರದ ಬಜೆಟ್‌ನಲ್ಲಿ ಅಧಿಕೃತವಾಗಿ ಪ್ರತಿ ಕ್ಷೇತ್ರಕ್ಕೆ 200ರಿಂದ 300 ಕೋಟಿ ರು. ನಿಗದಿ ಮಾಡಲಾಗಿದೆ. ಈ ಹಣವನ್ನು ಪ್ರವಾಹ ಪೀಡಿತರಿಗೆ ಉಪಯೋಗಿಸಲು ಮುಂದಾಗಿದ್ದಾರೆ. ಅವರ ಕ್ಷೇತ್ರದ ಹಣವನ್ನು ವಾಪಸ್‌ ನೀಡಬೇಕು. ನಮ್ಮ ವಿಶೇಷ ಘಟಕ ಯೋಜನೆಯ ಸುಮಾರು 1150 ಕೋಟಿ ರು. ಹಿಂದಕ್ಕೆ ಪಡೆದು ಬೇರೆ ಉದ್ದೇಶ ಬಳಸಲು ಸರ್ಕಾರ ತೀರ್ಮಾನ ಮಾಡಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದು ಜರಿದರು.

ಅ.10ರಿಂದ ನಡೆಯುವ ಅಧಿವೇಶನದಲ್ಲಿ ಮತ್ತು ರಾಜ್ಯಾದ್ಯಂತ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆ ಮಾಡಲಾಗುವುದು. ಪರಿಶಿಷ್ಟಜಾತಿ ಮತ್ತು ವರ್ಗಗಳ ಅಭಿವೃದ್ಧಿಗೆ ಮೀಸಲಿಟ್ಟಹಣವನ್ನು ಬೇರೆಯ ಉದ್ದೇಶಕ್ಕೆ ಉಪಯೋಗಿಸಬಾರದು ಎಂದರು.

ಬಯಲು ಶೌಚ ಮುಕ್ತದೇಶ ಎಂದು ತಮ್ಮ ಭಾಷಣದಲ್ಲಿ ಪ್ರಧಾನಿಯವರು ಘೋಷಣೆ ಮಾಡಿದ್ದಾರೆ. ನಿಜಕ್ಕೂ ಭಾರತ ಬಯಲು ಮುಕ್ತ ದೇಶವಾಗಿದಿಯೇ? ಎಂಬುದಕ್ಕೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ದೇಶದಲ್ಲಿ 1 ವರ್ಷಕ್ಕೆ 5.80 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಶೇ.100ರಷ್ಟು ಬಯಲು ಶೌಚ ಮುಕ್ತ ಭಾರತವಾಗಿಲ್ಲ. ಪ್ರಧಾನಿ ಅವರು ಬಯಲು ಶೌಚಮುಕ್ತ ಭಾರತ ಎಂಬ ಹೇಳಿಕೆಯನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಮಾಜಿ ಸಚಿವ ಜಿ.ಟಿ. ದೇವೇಗೌಡರು ಬೇರೆ ಪಕ್ಷಕ್ಕೆ ಹೋಗುವ ಬಗ್ಗೆ ಮಾತನಾಡಿ, ಇತರೆ ಪಕ್ಷಕ್ಕೆ ಹೋಗಿ ಈಗಾಗಲೇ ಅನೇಕರು ಅನುಭವಿಸಿದ್ದಾರೆ ಎಂದು ಮಾತಿಗೆ ವಿರಾಮ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ನಾಗರಾಜು, ನಿರ್ದೇಶಕ ಜಯರಾಂ, ನಗರಸಭೆ ಮಾಜಿ ಅಧ್ಯಕ್ಷ ಸಯ್ಯಾದ್‌ ಅಕ್ಬರ್‌, ರಘು ಹೊಂಗೆರೆ ಇದ್ದರು.