Asianet Suvarna News Asianet Suvarna News

ಮಾಜಿ ಸಚಿವ ಎಚ್‌.ಡಿ.ರೇವಣ್ಣರಿಂದ ಖಡಕ್ ಎಚ್ಚರಿಕೆ !

ಮಾಜಿ ಸಚಿವ ಎಚ್ ಡಿ ರೇವಣ್ಣ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಧರಣಿ ಮಾಡುವುದಾಗಿ ಎಚ್ಚರಿಸಿದ್ದಾರೆ. 

JDS Leader HD Revanna Warns over Nambihalli case
Author
Bengaluru, First Published Dec 19, 2019, 9:57 AM IST

ಹಾಸನ [ಡಿ.19]:  ಚನ್ನರಾಯಪಟ್ಟಣ ತಾಲೂಕಿನ ನಂಬಿಹಳ್ಳಿಯಲ್ಲಿ ಕೆ.ಆರ್‌.ಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಜೆಡಿಎಸ್‌ ಪಕ್ಷದವರನ್ನು ಮಾತ್ರ ಬಂಧಿಸಿದ್ದು, ಬಿಜೆಪಿಯವರನ್ನು ಬಂಧಿಸಿಲ್ಲ ಹಾಗೂ ಚನ್ನರಾಯಪಟ್ಟಣದ ಸಿಪಿಐ ವರ್ಗಾವಣೆ ಕುರಿತು ಇನ್ನು ಎರಡು ದಿವಸದಲ್ಲಿ ಸರಿಪಡಿಸದಿದ್ದರೇ ಎಸ್ಪಿ ಕಚೇರಿ ಮುಂದೆ ಧರಣಿ ಮಾಡುವುದಾಗಿ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಎಚ್ಚರಿಸಿದರು.

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್‌.ಪೇಟೆ ಉಪಚುನಾವಣೆ ಸಂಭಂದ ನಂಬಿಹಳ್ಳಿಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಗಲಾಟೆ ನಡೆದಿದ್ದು, ಈ ವೇಳೆ ನಮ್ಮ ಕಾರ್ಯಕರ್ತರನ್ನು ಮಾತ್ರ ಪೊಲೀಸರು ಬಂಧಿಸಿ, ಬಿಜೆಪಿಯವರ ಯಾರನ್ನು ಬಂಧಿಸಿರುವುದಿಲ್ಲ. ಬಿಜೆಪಿಯ ಕೆಲವು ರೌಡಿ ಶೀಟರ್‌ಗಳು ಇದ್ದು, ಅವರನ್ನ ಬಂಧಿಸಬೇಕು ಎಂದು ಆಗ್ರಹಿಸಿದರು.

ಪ್ರಕರಣದ ತನಿಖೆ ನಡೆಸುತ್ತಿರುವಾಗ ಚನ್ನರಾಯಪಟ್ಟಣ ಸಿಪಿಐರನ್ನು ಸರ್ಕಾರ ವರ್ಗಾಯಿಸಿದೆ ಎಂದು ಸಿಡಿಮಿಡಿಗೊಂಡ ಅವರು, ಈ ಬಗ್ಗೆ ತನಿಖೆ ಮಾಡಲು ಮನವಿ ಮಾಡಿದರೂ ಇದುವರೆಗೂ ಯಾವ ಕ್ರಮಕೈಗೊಂಡಿರುವುದಿಲ್ಲ. ಜಿಲ್ಲೆಯ ಅಧಿಕಾರಿಗಳು ಬಿಜೆಪಿಯ ಕೈಗೊಂಬೆಯಾಗಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್ ಇಭ್ಭಾಗ ಆಗುವ ಆತಂಕ: ಕಾಂಗ್ರೆಸ್, ಬಿಜೆಪಿಯತ್ತ ಹಿರಿಯ ನಾಯಕರ ದಂಡು?...

ಜೆಡಿಎಸ್‌ ಪಕ್ಷದಿಂದ ಎಸ್ಪಿ ಕಚೇರಿ ಮುಂದೆ ಮೊದಲೆ ಪ್ರತಿಭಟನೆ ಮಾಡಲು ಮುಂದಾಗಿದ್ದೇವು. ಆದರೆ, ಎಸ್ಪಿಯವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಧರಣಿ ಕೈಬಿಡಲಾಗಿತ್ತು ಎಂದರು. ಇನ್ನು ಎರಡು ದಿನದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ನ್ಯಾಯಯುತವಾಗಿ ಕ್ರಮಕೈಗೊಳ್ಳದಿದ್ದರೇ ಎಸ್ಪಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದರಲ್ಲಿ 6 ಜನ ಶಾಸಕರು, ಸಂಸದರು ಹಾಗೂ ಕಾರ್ಯಕರ್ತರು ಭಾಗವಹಿಸಿ ಶಾಂತಿಯುತವಾಗಿ ಧರಣಿ ಮಾಡಲಾಗುವುದು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಕೊನೆಗೆ ಕಾನೂನು ಹೋರಾಟ ಮಾಡಲು ಮುಂದಾಗುವುದಾಗಿ ಎಚ್ಚರಿಸಿದರು.

ಸಕಲೇಶಪುರದಲ್ಲಿ 1000 ಎಕರೆ ಅಕ್ರಮ ಮಂಜೂರು ಪ್ರಕರಣ ಹಿನ್ನೆಲೆಯಲ್ಲಿ ಅಕ್ರಮದ ಬಗ್ಗೆ ದೂರು ನೀಡಿದ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಹಾಸನ ತಹಸೀಲ್ದಾರ್‌ರಿಗೆ ಕೆಲವರು ಧಮ್ಕಿ ಹಾಕಿದ್ದಾರೆಂದು ಆರೋಪ ಕೇಳಿ ಬಂದಿದೆ. ತಹಸೀಲ್ದಾರ್‌ ಮೇಘನಾ ಅವರಿಗೆ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ ಎಂದ ಅವರು, ಈಗಾಗಲೇ ಹಾಸನ ತಹಸೀಲ್ದಾರ್‌ರನ್ನು ಸರ್ಕಾರ ವರ್ಗಾವಣೆ ಮಾಡಿದೆ ಎಂದು ಘಟನೆ ವಿವರಿಸಿದರು.

Follow Us:
Download App:
  • android
  • ios