ಹಾಸನ [ನ.16]: ಅನರ್ಹ ಶಾಸಕ ರೋಷನ್ ಬೇಗ್ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ. 

ಹಾಸನದಲ್ಲಿ ಮಾತನಾಡಿದ ಎಚ್.ಡಿ ರೇವಣ್ಣ, ದೇವೇಗೌಡರು ರಾಜ್ಯದ ಸಿಎಂ ಆಗಿದ್ದಾಗ (1994-1996) ರೋಷನ್ ಬೇಗ್ ನಮ್ಮ ಜೊತೆಯಲ್ಲಿಯೇ ಇದ್ದರು. ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಹೋದರು ಎಂದರು

ರೋಷನ್ ಬೇಗ್ ಅವರಿಗೆ ಬಡವರ ಬಗ್ಗೆ ಕಾಳಜಿ ಇದೆ. ಕಾಂಗ್ರೆಸಿನವರು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವರು ರಾಜ್ಯದಲ್ಲಿ ಇದೇ ಡಿಸೆಂಬರ್ 5 ರಂದು ನಡೆಯುತ್ತಿರುವ ಉಪಚುನಾವಣೆಯಲ್ಲಿ ನಿಂತು ಗೆದ್ದರೆ ಸಂತೋಷ ಎಂದರು.

ಜೆಡಿಎಸ್ ಬಿಟ್ಟು ಹೋದ ಮೇಲೆ ರೋಷನ್ ಬೇಗ್ ಒಮ್ಮೆಯೂ ಕೂಡ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಬಗ್ಗೆ ಒಂದೂ ಮಾತು ಆಡಲಿಲ್ಲ. ಅವರು ಜೆಡಿಎಸ್ ಗೆ ಮತ್ತೆ ವಾಪಸ್ ಬಂದರೆ ಸ್ವಾಗತ. ನನ್ನ ಭೇಟಿ ಮಾಡಲು ಬಂದರೆ ಈ ಬಗ್ಗೆ ಮಾತನಾಡುವೆ  ಎಂದು ರೋಷನ್ ಬೇಗ್ ಅವರನ್ನು ಗುಣಗಾನ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮ್ಮಿಶ್ರ ಸರ್ಕಾರ ಬೀಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಹೇಳಿದವರೇ ಬೇಗ್. ಪ್ರಾಮಾಣಿಕವಾಗಿ ನಮ್ಮ ಮನಗೇ ಬಂದು ಹೇಳಿದರು ಎಂದು ರೇವಣ್ಣ ವಿಷಯ ಬಹಿರಂಗ ಪಡಿಸಿದ್ದಾರೆ.  ರೇವಣ್ಣ ಕುಮಾರಸ್ವಾಮಿಗೆ ಯಾರು ಟೋಪಿ ಹಾಕಿ ಹೋಗಿದ್ದಾರೋ ಅವರಿಗೆ ದೇವರೇ ಶಿಕ್ಷೆ‌ಕೊಡುವ ಕಾಲ ಬರಲಿದೆ. ದೇವೇಗೌಡರು, ಕುಮಾರಸ್ವಾಮಿಯಿಂದ ಬೆಳೆದವರೇ ತೊಂದರೆ‌ ನೀಡಿದ್ದಾರೆ ಎಂದರು. 

ಇನ್ನು ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರಿಗೆ ಬೆಂಬಲ ನೀಡಿದರೆ ತಪ್ಪಿಲ್ಲ. ಬಿಜೆಪಿಗೆ ಸಿದ್ಧಾಂತ ಏನಿದೆ..? ಉಪ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ ಎಂದು ರೇವಣ್ಣ ಹೇಳಿದರು.

ರಾಜ್ಯದಲ್ಲಿ ಇದೇ ಡಿಸೆಂಬರ್ 5 ರಂದು ಉಪ ಚುನಾವಣೆ ನಡೆಯಲಿದ್ದು, 9 ರಂದು ಫಲಿತಾಂಶ ಪ್ರಕಟವಾಗಲಿದೆ.