ಮೈಸೂರು (ಮಾ.12):  ಜಿ.ಟಿ. ದೇವೇಗೌಡರು ಎಲ್ಲಿದ್ದಾರೆ ಅಂತ ನನಗೆ ಗೊತ್ತಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮೈಸೂರಿನಲ್ಲಿ ಗುರುವಾರ ಸುದ್ದಿಗಾರರು ಜಿ.ಟಿ. ದೇವೇಗೌಡರು ಜೆಡಿಎಸ್‌ ಶಾಸಕರಲ್ಲವೇ? ಎಂದು ಪ್ರಶ್ನಿಸಿದಾಗ, ನನಗೆ ಗೊತ್ತಿಲ್ಲ ಬ್ರದರ್‌.ಅವರು ನಮ್ಮ ಪಕ್ಷದ ಸಿಂಬಲ್ನಿಂದ ಗೆದ್ದರಿಬಹುದು. ಚುನಾವಣೆಯಲ್ಲಿ ಗೆಲ್ಲಲು ನನ್ನ ಕಾಣಿಕೆಯೂ ಇರಬಹುದು. ಆದ್ರೆ ನಮ್ಮ ಸಭೆಗಳಿಗೆ ಬರ್ತಿಲ್ಲ, ನಮ್ಮ ಪಕ್ಷದ ಚಟುವಟಿಕೆಗಳಿಂದ ದೂರ ಇದ್ದಾರೆ. ಅವರು ಯಾವ ಪಾರ್ಟಿಯಲ್ಲಿದ್ದಾರೆ ಅಂತ ಅವರೇ ಹೇಳಬೇಕಿದೆ. ಈಗ ಎಲ್ಲಿದ್ದಾರೆ ಮುಂದೆ ಎಲ್ಲಿರ್ತಾರೆ ಅನ್ನೋದನ್ನ ಅವರೇ ಸ್ಪಷ್ಟಪಡಿಸಬೇಕು ಎಂದರು.

ರಾಸಲೀಲೆ ಸಿಡಿ ಪ್ರಕರಣ: ಇದು ತಿಪ್ಪೇಸಾರಿಸೋ ತನಿಖೆ, ಎಚ್‌ಡಿಕೆ .

ನಮ್ಮಲ್ಲಿ ಹೈಕಮಾಂಡ್‌ ಇಲ್ಲ :  ಜೆಡಿಎಸ್‌ನಲ್ಲಿ ಹೈಕಮಾಂಡ್‌ ಅನ್ನೋದೆ ಇಲ್ಲ. ನಮ್ಮದು ಲೋಕಮಾಂಡ್‌ ಪಾರ್ಟಿ. ನಮ್ಮಲ್ಲಿ ಎಲ್ಲರು ಹೈಕಮಾಂಡ್‌ಗಳೇ ಎಂದು ಅವರು ಹೇಳಿದರು.

ಜಿ.ಟಿ. ದೇವೇಗೌಡರನ್ನ ಪಾರ್ಟಿಯಿಂದ ಉಚ್ಚಾಟಿಸಲು ನಾವು ನಿರ್ಧಾರ ಮಾಡಿಲ್ಲ. ಜನರೇ ಅವರ ನಡವಳಿಕೆ ನೋಡಿ ನಿರ್ಧಾರ ಮಾಡಲಿ ಅಂತ ಬಿಟ್ಟಿದ್ದೇವೆ. ಅಂದು ಸಿದ್ದರಾಮಯ್ಯರನ್ನು ಸಹ ನಾವು ಉಚ್ಚಾಟಿಸಿರಲಿಲ್ಲ. ಕೇವಲ ಉಪಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದೇವು ಅಷ್ಟೇ ಎಂದು ಅವರು ಹೇಳಿದರು.

ಅವರು ಪಕ್ಷದಲ್ಲಿ ಅಲ್ಪಸಂಖ್ಯಾತ ಹಾಗೂ ಇತರೆ ಘಟಕ ಇದ್ದರೂ ಅಹಿಂದ ಕಟ್ಟಿದ್ದರು. ಪಕ್ಷಕ್ಕೆ ಪರ್ಯಾಯವಾಗಿ ಶಕ್ತಿ ಪ್ರದರ್ಶನ ಮಾಡಲು ಹೊರಟಿದ್ದರು. ಅದಕ್ಕಾಗಿ ಉಪ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಗಿತ್ತು. ಆಮೇಲೆ ಅವರು ಪಾರ್ಟಿ ಬಿಟ್ಟು ಹೋದರು. ಆದ್ರೆ ಜಿಟಿಡಿ ವಿಚಾರದಲ್ಲಿ ಜನರಿಗೆ ಕಾರ್ಯಕರ್ತರಿಗೆ ಅರ್ಥವಾಗಲಿ ಅಂತ ಸುಮ್ಮನೆ ಬಿಟ್ಟಿದ್ದೇವೆ ಎಂದರು.