ಬಿಜೆಪಿಯಿಂದ ಬಂದಿತ್ತು ಆಮಿಷ : ಎಚ್‌ಡಿಕೆ ಬಾಂಬ್
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ...
ತುಮಕೂರು (ಅ.22): ನಮ್ಮ ಪಕ್ಷದ ಅಭ್ಯರ್ಥಿಯ ಮೇಲೆ ಬಿಜೆಪಿಯವರು ಹಲವಾರು ಆಮಿಷವೊಡ್ಡಿದ್ದರು. ಸ್ವತಃ ಡಿಸಿಎಂ ಅವರ ಮನೆ ಬಾಗಿಲಿಗೆ ಬಂದು ನಮ್ಮ ಪಕ್ಷಕ್ಕೆ ಬನ್ನಿ ಎಂದು ಒತ್ತಡ ಹೇರಿದ್ದರು. ಆದರೆ, ಅಮ್ಮಾಜಮ್ಮಾ ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಬಾರದು ಎಂದು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಶಿರಾದ ದೊಡ್ಡ ಆಲದಮರದ ಬಳಿ ಪಕ್ಷದ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿ, ಬಿಎಸ್‌ವೈ ಪುತ್ರ ಬಿ.ವೈ.ವಿಜಯೇಂದ್ರ ಹಣದ ತೈಲಿಯನ್ನೇ ಇಟ್ಟುಕೊಂಡು ಬಂದಿದ್ದಾರೆ. ಯುವಕರಿಗೆ ಆಮೀಷವೊಡ್ಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅವರು ಕಷ್ಟಪಟ್ಟು ಸಂಪಾದನೆ ಮಾಡಿ ಹಣ ತಂದಿಲ್ಲ. ಅದು ನಿಮ್ಮೆಲ್ಲರ ತೆರಿಗೆ ಹಣವಾಗಿದೆ. ನಿಮ್ಮದೇ ತೆರಿಗೆ ಹಣ ಸರ್ಕಾರದಲ್ಲಿ ಲೂಟಿ ಆಗುತ್ತಿದೆ. ಯುವಕರು ಬಿಜೆಪಿ, ಕಾಂಗ್ರೆಸ್‌ನ ಯಾವುದೇ ಆಮಿಷಗಳಿಗೆ ಬಲಿಯಾಗಬಾರದು. ಬಿಜೆಪಿಯವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣೆ ಮಾಡುತ್ತಿದ್ದಾರೆ ಎಂದರು.
RR ನಗರ ಉಪಚುನಾವಣೆ: ಮುನಿರಾಜುಗೆ ಮುನಿರತ್ನ ಗೆಲ್ಲಿಸುವ ಉಸ್ತುವಾರಿ .
ಇಂದು ಶಿರಾಗೆ ಬಂದಿರುವ ಮುಖ್ಯಮಂತ್ರಿ ಯಡಿಯೂರಪ್ಪನವರ ಮಗ ನಾಳೆ ಬೆಳಗ್ಗೆ ಈ ಕಡೆ ತಿರುಗಿಯೂ ನೋಡುವುದಿಲ್ಲ. ಆ ವ್ಯಕ್ತಿ ಬೆಂಗಳೂರಿನಲ್ಲಿ ಕುಳಿತು ಪ್ರತಿ ದಿನ ಹಣ ಲೂಟಿ ಮಾಡುತ್ತಿದ್ದಾರೆ. ಅವರ ಹಣಕ್ಕೆ ಮಾರು ಹೋಗದೆ ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದರು.