'ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕಿಂತ ಆರ್‌ಎಸ್ಸೆಸ್ ಆಡಳಿತ ಹೆಚ್ಚು'
* ಆರ್ಎಸ್ಎಸ್ನಲ್ಲಿ ಮೊದಲಿನ ಮೌಲ್ಯಗಳು ಈಗಿನವರಿಗಿಲ್ಲ
* ಆರ್‌ಎಸ್‌ಎಸ್, ಮೋದಿ, ಬಿಜೆಪಿ ಹೆಸರು ಹೇಳಿದರೆ ಮಾತ್ರ ರಾಷ್ಟ್ರಪ್ರೇಮಿ
* ಹಿಂದುತ್ವ ಹೆಸರು ಹೇಳಿಕೊಂಡು ಅಧಿಕಾರ ಮಾಡುತ್ತಿರುವ ಬಿಜೆಪಿ
ಧಾರವಾಡ(ಅ.08): ರಾಜ್ಯದಲ್ಲಿ ರಾಜಕೀಯ, ಶಿಕ್ಷಣ ಸೇರಿದಂತೆ ಎಲ್ಲ ರಂಗಗಳಲ್ಲಿ ಸರ್ಕಾರಕ್ಕಿಂತ ಆರ್‌ಎಸ್‌ಎಸ್ ಆಡಳಿತ ಹೆಚ್ಚಾಗಿದ್ದು, ಆರ್‌ಎಸ್‌ಎಸ್ ಧೋರಣೆ ನಿಲ್ಲದೇ ಹೋದಲ್ಲಿ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಜೆಡಿಎಸ್(JDS) ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ(Gururaj Hunasimarad) ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಆರ್‌ಎಸ್‌ಎಸ್(RSS) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೊದಲು ಆರ್‌ಎಸ್‌ಎಸ್ ಬಗ್ಗೆ ನಮಗೂ ಗೌರವ ಇತ್ತು. ಅಂತಹ ಮಹಾನ್ ವ್ಯಕ್ತಿಗಳು ಸರಳ-ಪ್ರಾಮಾಣಿಕವಾಗಿ ಸಂಘದಲ್ಲಿದ್ದರು. ಇದೀಗ ಆರ್‌ಎಸ್‌ಎಸ್ ಮುಖಂಡರು ಅಧಿಕಾರ, ಆಡಳಿತ ಹಾಗೂ ಹಣದ ಆಸೆಗಾಗಿ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕ ವಿವಿ ಇಂಗ್ಲೀಷ ವಿಭಾಗಕ್ಕೆ ಶ್ರೀದೇವಿ ಎಂಬುವರು 2014ರಲ್ಲಿ ನೇಮಕಗೊಂಡಿದ್ದರು. ಇದೇ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಎಲ್ಲ ರೀತಿಯ ದಾಖಲೆ ಪರಿಶೀಲನೆ ನಡೆಸಿ ನೇಮಕಾತಿ ಮಾಡಿಕೊಂಡಿತ್ತು. ಆದರೆ, ಆರ್‌ಎಸ್‌ಎಸ್ ವ್ಯಕ್ತಿ ಜಯಂತ ಕೆ.ಎಸ್. ಎಂಬುವರು ಈ ನೇಮಕಾತಿ ಕಾನೂನು ಬಾಹಿರವೆಂದು ಅನವಶ್ಯಕವಾಗಿ ಜಯಶ್ರೀ ಅವರ ನೇಮಕಾತಿ ಪ್ರಶ್ನಿಸಿ ನ್ಯಾಯಾಲಯದ ಮೂಲಕ ನೇಮಕಾತಿ ರದ್ಧತಿಗೆ ತೀವ್ರ ಪ್ರಯತ್ನ ನಡೆಸಿದರು. ನೇಮಕಾತಿ ಮಾಡಿಕೊಂಡ ವಿಶ್ವವಿದ್ಯಾಲಯ ತನ್ನ ಪ್ರಾಧ್ಯಾಪಕರ ಪರವಾಗಿ ನಿಲ್ಲುವುದನ್ನು ಬಿಟ್ಟು ಆರ್‌ಎಸ್‌ಎಸ್ ಮುಖಂಡನ ಪರವಾಗಿ ನಿಂತು ಅವರನ್ನು ಹೊರ ಹಾಕಲು ಮುಂದಾಗಿತ್ತು. ಇದನ್ನು ಪ್ರಶ್ನಿಸಿ ಶ್ರೀದೇವಿ ಮತ್ತೇ ನ್ಯಾಯಾಲಯದ ಬಾಗಿಲು ತಟ್ಟಿದಾಗ ಅದೃಷ್ಟವಶಾತ್ ಮೊದಲಿನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದ್ದರಿಂದ ಈಗ ಮತ್ತೆ ಕಾರಾರಯರಂಭ ಮಾಡಿದ್ದಾರೆ. ಕರ್ನಾಟಕ ವಿವಿ ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ವಿವಿಗಳ ಕುಲಪತಿಗಳು ಆರ್‌ಎಸ್‌ಎಸ್ ಕೈಗೊಂಬೆಯಾಗಿ ಕುಣಿಯುತ್ತಿದ್ದಾರೆ ಎಂದು ಹುಣಸೀಮರದ ಆರೋಪಿಸಿದರು.
ಸೇವೆ, ಸಂಸ್ಕಾರ RSS ಗುತ್ತಿಗೆಯಲ್ಲ... ದೇಶಕ್ಕಾಗಿ ನಿಮ್ಮ ಕೊಡುಗೆ, ತ್ಯಾಗ ಏನು?
ಬಿಜೆಪಿ(BJP) ಶಾಸಕರು, ಮಂತ್ರಿಗಳು ವರ್ಗಾವಣೆ ಸೇರಿದಂತೆ ಇತರೆ ಕೆಲಸ-ಕಾರ್ಯಗಳಿಗೆ ಶಿಫಾರಸು ಪತ್ರ ಕೊಡಲು ಆರ್‌ಎಸ್‌ಎಸ್ ಕಚೇರಿಯಿಂದ ಆದೇಶ ಬರಬೇಕು. ಆರ್‌ಎಸ್‌ಎಸ್ ಆದೇಶದಂತೆ ಸರ್ಕಾರ ನಡೆಯುತ್ತಿದ್ದು, ಹೀಗಾದರೆ ಮತದಾರರು ಆರ್ಎಸ್ಎಸ್ಗೆ ಮತ ಹಾಕಿದ್ದಾರೋ ಅಥವಾ ಜನಪ್ರತಿನಿಧಿಗಳಿಗೆ ಮತ ಹಾಕಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಪಾಲಿಕೆ ಚುನಾವಣೆಯಲ್ಲೂ ಅಭ್ಯರ್ಥಿಗಳಿಗೆ ಟಿಕೆಟ್ ಅನ್ನು ಶಾಸಕರು ನೀಡದೆ ಆರ್‌ಎಸ್‌ಎಸ್ ಕಚೇರಿಯಿಂದ ನೀಡಲಾಗಿದೆ. ಆರ್‌ಎಸ್‌ಎಸ್ ಅಧಿಕಾರ, ಆಡಳಿತಕ್ಕಾಗಿ ಏನೆಲ್ಲಾ ಮಾಡಲು ಸಿದ್ಧವಿದೆ. ಈ ಎಲ್ಲ ದೃಷ್ಟಿಯಿಂದಲೇ ಎಚ್.ಡಿ. ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಂಡರು.
ಪಶುಸಂಗೋಪನಾ ಮಂತ್ರಿ ಪ್ರಭು ಚಹ್ವಾಣ ಸೇರಿದಂತೆ ಬಿಜೆಪಿ ಮುಖಂಡರು ಆರ್‌ಎಸ್‌ಎಸ್ ಇಲ್ಲದೇ ಹೋದಲ್ಲಿ ಭಾರತ ಪಾಕಿಸ್ತಾನ ಆಗಲಿದೆ ಎಂದು ಹೇಳಿದ್ದು, ಅದು ಹೇಗೆ ಭಾರತ ಪಾಕಿಸ್ತಾನ ಆಗಲಿದೆ ಎಂದು ಪ್ರಶ್ನಿಸಿದ ಹುಣಸೀಮರದ, ಹಿಂದೂ ಪರವಾಗಿ ಬಿಜೆಪಿ, ಮುಸ್ಲಿಂ ಪರವಾಗಿ ಕಾಂಗ್ರೆಸ್ ದೇಶದ ಜನತೆಗೆ ಭಯ ಹುಟ್ಟಿಸುವ ರೀತಿಯಲ್ಲಿ ವರ್ತನೆ ತೋರುತ್ತಿದ್ದಾರೆ. ಆರ್‌ಎಸ್‌ಎಸ್, ಮೋದಿ, ಬಿಜೆಪಿ ಹೆಸರು ಹೇಳಿದರೆ ಮಾತ್ರ ರಾಷ್ಟ್ರಪ್ರೇಮಿ. ಹಾಗಾದರೆ ಉಳಿದವರು ದೇಶದ್ರೋಹಿಗಳೇ? ಹಿಂದುತ್ವ ಹೆಸರು ಹೇಳಿಕೊಂಡು ಅಧಿಕಾರ ಮಾಡುತ್ತಿರುವ ಬಿಜೆಪಿ, ಆರ್‌ಎಸ್‌ಎಸ್ ಸುಳ್ಳು ಹೇಳುವುದನ್ನು ಇನ್ನಾದರೂ ಬಿಡಬೇಕು. ಬಿಜೆಪಿ ಢೋಂಗಿನತ ಜನ ಸಮುದಾಯಕ್ಕೂ ಗೊತ್ತಾಗಿದ್ದು, ಬಿಜೆಪಿಗೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.