ಧೈರ್ಯವಿದ್ದರೆ ರಾಜಕೀಯವಾಗಿ ಎದುರಿಸಿ. ಅದನ್ನು ಬಿಟ್ಟು ಕಾರ್ಯಕ್ರಮದ ವೇಳೆ ವಿದ್ಯುತ್‌ ಸ್ಥಗಿತಗೊಳಿಸುವ ಕೆಲಸಗಳನ್ನು ಮಾಡಬೇಡಿ ಎಂದು ಮಾಜಿ ಸಚಿವ ವತೂರು ಪ್ರಕಾಶ್‌ ಅವರಿಗೆ ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಎಚ್ಚರಿಕೆ ನೀಡಿದರು.

ಕೋಲಾರ (ನ.01): ಧೈರ್ಯವಿದ್ದರೆ ರಾಜಕೀಯವಾಗಿ ಎದುರಿಸಿ. ಅದನ್ನು ಬಿಟ್ಟು ಕಾರ್ಯಕ್ರಮದ ವೇಳೆ ವಿದ್ಯುತ್‌ ಸ್ಥಗಿತಗೊಳಿಸುವ ಕೆಲಸಗಳನ್ನು ಮಾಡಬೇಡಿ ಎಂದು ಮಾಜಿ ಸಚಿವ ವತೂರು ಪ್ರಕಾಶ್‌ ಅವರಿಗೆ ವಿಧಾನಪರಿಷತ್‌ ಸದಸ್ಯ ಇಂಚರ ಗೋವಿಂದರಾಜು ಎಚ್ಚರಿಕೆ ನೀಡಿದರು.

ತಾಲೂಕಿನ ದಿಂಬ ಚಾಮನಹಳ್ಳಿಯಲ್ಲಿ ಜೆಡಿಎಸ್‌ (jDS) ಪಕ್ಷದ ಮುಖಂಡರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೆಡಿಎಸ್‌ ಅನ್ನು ರಾಜಕೀಯವಾಗಿ (Politics) ಎದುರಿಸುವ ಶಕ್ತಿ ಇಲ್ಲದೆ ಪಕ್ಷದ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ವಿದ್ಯುತ್‌ ಸ್ಥಗಿತಗೊಳಿಸುವ ನೀಚ ಕೃತ್ಯಕ್ಕೆ ವರ್ತೂರು ಪ್ರಕಾಶ್‌ ಇಳಿದಿದ್ದರು. ಅವರ ಆಟ ಏನಿದ್ದರೂ 6 ತಿಂಗಳು ಮಾತ್ರ ಎಂದು ಎಂದು ಗೋವಿಂದರಾಜು ಭವಿಷ್ಯ ನುಡಿದರು.

ಇನ್ನು ಆರು ತಿಂಗಳು ಕಾಯಬೇಕು

ಕೋಲಾರ ಕ್ಷೇತ್ರದಲ್ಲಿ ಕಳೆದ 14 ವರ್ಷದಿಂದ ಶಾಸಕರ ಸ್ಥಾನದಲ್ಲಿ ನರಕಾಸುರರನ್ನು ನೋಡಿದ್ದು, ಮುಂದಿನ ಚುನಾವಣೆಯಲ್ಲಿ ಕೆಳಗಿಳಿಸಬೇಕು. ವರ್ತೂರು ಪ್ರಕಾಶ್‌ರ 10 ವರ್ಷದ ಸಾಧನೆಯನ್ನು ನಿಮ್ಮೂರಿನ ರಸ್ತೆ ನೋಡಿದರೆ ಗೊತ್ತಾಗುತ್ತದೆ. ಕತ್ತಲು ಸರಿದು ಬೆಳಕು ಚೆಲ್ಲುವ ಮೂಲಕ ಕಾಲ ನಿಮ್ಮ ಗ್ರಾಮಕ್ಕೆ ಬಂದಿದೆ. 6 ತಿಂಗಳು ಕಾಯಬೇಕು ಅಷ್ಟೇ ರಾಜ್ಯದಲ್ಲಿ ಕುಮಾರಸ್ವಾಮಿ ಸಿಎಂ, ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿ ಶಾಸಕರಾಗುತ್ತಾರೆ. ಎಲ್ಲ ಸಮಸ್ಯೆ ಬಗೆಹರಿಸಿ, ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಸಿಎಂಆರ್‌ ಶ್ರೀನಾಥ್‌ ಮಾತನಾಡಿ, ಪ್ರಾದೇಶಿಕ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿದ್ದು, ಜಿಲ್ಲೆಯ ಆರು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲ್ಲಬೇಕು. ನ.1ರಂದು ಮುಳಬಾಗಿಲಿನಲ್ಲಿ ಆರಂಭಗೊಳ್ಳಲಿರುವ ಪಂಚರತ್ನ ರಥಯಾತ್ರೆ ನ.4ರಂದು ಕೋಲಾರಕ್ಕೆ ಬರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ತಾಲೂಕು ಅಧ್ಯಕ್ಷೆ ಕುರ್ಕಿ ರಾಜೇಶ್ವರಿ ಮಾತನಾಡಿದರು. ಹಿರಿಯ ವಕೀಲ ಕೆ.ವಿ.ಶಂಕರಪ್ಪ, ದೊಡ್ಡಹಸಾಳ ಗ್ರಾಪಂ ಉಪಾಧ್ಯಕ್ಷ ಗ್ಯಾಸ್‌ ನಾರಾಯಣಸ್ವಾಮಿ ಜೆಡಿಎಸ್‌ಗೆ ಸೇರ್ಪಡೆಯಾದರು ವೇದಿಕೆಯಲ್ಲಿ ಜೆಡಿಎಸ್‌ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್‌, ಮುಖಂಡರಾದ ಸಿಎಂಆರ್‌ ಹರೀಶ್‌, ಡಿವಿ ರಾಮಚಂದ್ರಪ್ಪ, ದಿಂಬ ನಾಗರಾಜಗೌಡ, ಛತ್ರಕೋಡಿಹಳ್ಳಿ ಕುಮಾರ್‌, ಗ್ರಾಪಂ ಸದಸ್ಯರಾದ ಶೋಭಾ, ರಾಜಣ್ಣ, ಇದ್ದರು.

ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು ಹೆಚ್ಚಳ 

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತರ ಸಂಖ್ಯೆ ಹೆಚ್ಚಿದ್ದರೂ ನಮ್ಮ ನಡುವೆ ಯಾರಲ್ಲೂ ಗೊಂದಲವಿಲ್ಲ. ಮೂರು ಜನ ಟಿಕೆಟ್‌ ಆಕಾಂಕ್ಷಿಗಳಲ್ಲಿ ವರಿಷ್ಠರು ಯಾರಿಗೇ ಟಿಕೆಟ್‌ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಜೆಡಿಎಸ್‌ ಪ್ರಬಲ ಟಿಕೆಟ್‌ ಆಕಾಂಕ್ಷಿತರಲ್ಲೊಬ್ಬರಾದ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಹೇಳಿದರು.

ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಮಂಡ್ಯ (Mandya) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ (JDS) ಪಕ್ಷ ಸಂಘಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ. ಟಿಕೆಟ್‌ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ. ಅದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದೊಳಗೆ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ ಎಂದರು.

ನಾನು ಕ್ಷೇತ್ರಕ್ಕೆ ಹೊಸಬನೇನಲ್ಲ. ನಾನು ಹೋದೆಡೆಯಲ್ಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ನನ್ನ ಪರವಾಗಿ ಜನರ ಅಭಿಪ್ರಾಯ ಚೆನ್ನಾಗಿದೆ. ಪ್ರತಿ ಗ್ರಾಮದಲ್ಲಿ ಯುವಕರು ಜನರು ನನ್ನನ್ನು ಕೈಹಿಡಿದು ಮುನ್ನಡೆಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ನೀವೇ ಅಭ್ಯರ್ಥಿಯಾಗುವಂತೆ ಒತ್ತಡ ಹಾಕುತ್ತಿದ್ದಾರೆ. ವರಿಷ್ಠರು ಟಿಕೆಟ್‌ ನೀಡಿ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದರೆ ಜನಸೇವಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.

ಮಂಡ್ಯ ತಾಲೂಕಿನಲ್ಲಿ ಕಳೆದ 30 ವರ್ಷಗಳಿಂದ ನಾನು ವ್ಯಾಪಾರ ಮಾಡಿಕೊಂಡು, ಸಾಮಾಜಿಕ ಸೇವೆ ಮಾಡಿಕೊಂಡು ಜನರ ಜೊತೆ ಇದ್ದೇನೆ. ನಾನು ಮಂಡ್ಯದ ಕಲ್ಲಹಳ್ಳಿಯಲ್ಲಿ ವಾಸವಿದ್ದೇನೆ. ಆದರೂ ನನ್ನ ಬಗ್ಗೆ ಮತ್ತೋರ್ವ ಟಿಕೆಟ್‌ ಆಕಾಂಕ್ಷಿ ಎಚ್‌.ಎನ್‌.ಯೋಗೇಶ್‌ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೂ ನನಗೆ ಅವರ ಬಗ್ಗೆ ಬೇಜಾರಿಲ್ಲ. ಅವರು ನನ್ನ ಬ್ರದರ್‌ ಇದ್ದಂತೆ ಎಂದು ನಯವಾಗಿಯೇ ಚುಚ್ಚಿದರು.