ಹುಣಸೂರು [ನ.27]:  ಹುಣಸೂರು ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ಅವರನ್ನು ಕ್ಷೇತ್ರದ ಮತದಾರರು ಆಯ್ಕೆ ಮಾಡಿ ಅರ್ಹ ಜನಪ್ರತಿನಿಧಿ ಎಂದು ವಿಧಾನಸೌಧಕ್ಕೆ ಕಳುಹಿಸಿದರಾದರೂ ವೈಯಕ್ತಿಕ ಆಸೆಗೆ ಅನರ್ಹ ಪಟ್ಟಅಂಟಿಸಿಕೊಂಡರು ಎಂದು ಜೆಡಿಎಸ್‌ ವಕ್ತಾರ ಭೋಜೇಗೌಡ ಟೀಕಿಸಿದರು.

ವಿಶ್ವನಾಥ್‌ ಜನಾದೇಶ ಪಡೆದು ಅರ್ಹರಾಗಿ ವಿಧಾನಸಭೆ ಪ್ರವೇಶಿಸಿ ಎರಡನೇ ಇನಿಂಗ್ಸ್‌ ರಾಜಕೀಯ ಜೀವನ ಆರಂಭಿಸುವ ಹೊತ್ತಿನಲ್ಲೇ ಎಡವಿ ಸಮ್ಮಿಶ್ರ ಸರ್ಕಾರ ಪತನಕ್ಕೆ ಕಳ ನಾಯಕರಾದರು. ಈಗ ಮತ್ತೊಮ್ಮೆ ಗೆದ್ದ ಕ್ಷೇತ್ರದಲ್ಲೇ ಸ್ಪರ್ಧಿಸಿ ತಾವೂ ಯಾವುದೇ ತಪ್ಪು ಮಾಡಿಲ್ಲ ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಕೈ ಮುಗಿದು ಮನೆ ಬಾಗಿಲಿಗೆ ತೆರಳುತ್ತಿರುವುದು ವಿಪರ್ಯಾಸ ಎಂದರು.

‘ಅನರ್ಹ’ ವಿಶ್ವನಾಥ್‌ ಎಂಬ ಹೆಸರು ಕಾಯಂ ಉಳಿಯಲಿದ್ದು, ಅವರು ಮಾಡಿಕೊಂಡ ಎಡವಟ್ಟಿಗೆ ಅವರು ಪಶ್ಚಾತಾಪ ಪಡುವುದಲ್ಲದೆ ರಾಜ್ಯದ ಜನತೆಗೂ ಸಮಸ್ಯೆ ತಂದಿಟ್ಟರು. ಅನೈತಿಕ ರಾಜಕಾರಣ ಮಾಡಿದವರಿಗೆ ಕ್ಷೇತ್ರದ ಮತದಾರ ಎಂದಿಗೂ ಕ್ಷಮಿಸುವುದಿಲ್ಲ. ಜೆಡಿಎಸ್‌ ಹೊಸ ಮುಖ ಸ್ಥಳಿಯ ವ್ಯಕ್ತಿ ಕೈ ಹಿಡಿಯುವುದು ಖಚಿತ ಎಂದರು.

ಕಾಂಗ್ರೆಸ್‌ನಿಂದ ಹೊರ ಬಂದ ವಿಶ್ವನಾಥ್‌ ಅವರಿಗೆ ದೇವೇಗೌಡರು ರಾಜಕೀಯ ಮರುಜನ್ಮ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಗೌರವಿಸಿತ್ತು. ಪಕ್ಷ ನೀಡಿದ ಸ್ಥಾನವನ್ನೇ ಸರಿಯಾಗಿ ನಿಭಾಯಿಸದೇ ಅಸಮರ್ಥರಾಗಿದವರನ್ನು ಮತ್ತೊಮ್ಮೆ ಜನರು ಕೈ ಹಿಡಿಯುತ್ತಾರೆ ಎಂದು ಹಗಲುಗನಸು ಕಾಣುತ್ತಿರುವ ಬಿಜೆಪಿ ಸಚಿವ ಸ್ಥಾನ ಬುಕ್‌ ಮಾಡಿಕೊಂಡಿದೆ ಎಂದು ಕುಟುಕಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಲಿಸಿ

ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್‌ಗೆ ರಾಜೀನಾಮೆ ನೀಡಿದಾಗ ಯಾವುದೇ ಕಾರ್ಯಕರ್ತ ಗಂಭೀರವಾಗಿ ಪ್ರತಿಕ್ರಿಯಸಲಿಲ್ಲ, ಕಾರಣ ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಆಗುತ್ತದೆ ಎಂಬ ಉತ್ತಮ ಆಲೋಚನೆ. ಈಗ ಮತದಾರರು ವಿಶ್ವನಾಥ್‌ ಪ್ರಚಾರದಲ್ಲಿ ಪ್ರಶ್ನಿಸಿ ಗ್ರಾಮಗಳಿಗೆ ಪ್ರವೇಶಿಸುವುದನ್ನೇ ನಿರ್ಬಂಧಿಸುತ್ತಿದ್ದಾರೆ ಎಂದರು.

ವಿಶ್ವನಾಥ್‌ ಪೊಲೀಸ್‌ ರಕ್ಷಣೆಯಲ್ಲಿ ಸ್ವಕ್ಷೇತ್ರದಲ್ಲಿ ಪ್ರಚಾರ ನಡೆಸುವ ಪರಿಸ್ಥಿತಿ ಸೃಷ್ಠಿಸಿಕೊಂಡಿದ್ದು, ಕಣದಿಂದ ಹಿಂದೆ ಸರಿಯುವುದು ಒಳ್ಳೆಯ ತೀರ್ಮಾನ ಎಂದರು. ಹುಣಸೂರು ಕ್ಷೇತ್ರದ ಪ್ರಭಾವಿ ರಾಜಕಾರಣಿ ಜಿ.ಟಿ. ದೇವೇಗೌಡ ಈ ಚುನಾವಣೆ ಪ್ರಚಾರದಿಂದ ಹಿಂದೆ ಉಳಿದಿದ್ದಾರೆ ಪಕ್ಷದ ವರಿಷ್ಠರು ಕಡೆ ಎರಡು ದಿನಗಳು ಸ್ಟಾರ್‌ ಪ್ರಚಾರಕರನ್ನಾಗಿ ಕರೆ ತರಲಿದ್ದಾರೆ ಅವರು ಹೇಳಿದರು.

ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.