ಹುಬ್ಬಳ್ಳಿ(ಡಿ.22): ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ತರುವ ಮುನ್ನ ಎಲ್ಲ ರಾಜ್ಯಗಳ ಅಭಿಪ್ರಾಯ ಪಡೆದು ಅದರ ಸಾಧಕ ಬಾಧಕವನ್ನು ಕ್ರೋಢಿಕರಿಸಿ ಪರಿಶೀಲನೆ ನಡೆಸದೆ ದಿಢೀರ್‌ ನಿರ್ಣಯ ಕೈಗೊಂಡಿರುವ ಕೇಂದ್ರ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರವು ಆನೆ ನಡೆದಿದ್ದೇ ದಾರಿ ಎಂಬುವಂತೆ ವರ್ತಿಸುತ್ತಿರುವುದು ಸರಿಯಲ್ಲ. ಪ್ರಧಾನಿ ಹಾಗೂ ಗೃಹ ಸಚಿವರು ಈ ಕುರಿತು ಜಾಗೃತಿ ವಹಿಸಬೇಕಿತ್ತು. ಒಂದು ಸಮುದಾಯವನ್ನು ಬಿಟ್ಟು ಕಾಯಿದೆ ರೂಪಿಸಲಾಗಿದೆ ಎಂದರೆ ಸಾಮಾನ್ಯವಾಗಿ ಬೇರೆ ಭಾವನೆ ಮೂಡಲು ಕಾರಣವಾಗುತ್ತದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಂಗಳೂರು ಗೋಲಿಬಾರ್‌ ಪ್ರಕರಣಕ್ಕೆ ಪ್ರತಿಕ್ರಿಯಿಸಿ, ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್‌ ನಡೆದಿರುವುದು ದುರ್ದೈವದ ಸಂಗತಿ. ಆತ್ಮರಕ್ಷಣೆಗೆ ಮಾಡಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ, ಪರಿಸ್ಥಿತಿ ಹೇಗಿದೆ ಎಂದು ನೋಡಿಕೊಳ್ಳಬೇಕಿದೆ.

ಹಿಂದೆ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಗೊಬ್ಬರಕ್ಕಾಗಿ ನಡೆದ ಪ್ರತಿಭಟನೆ ವೇಳೆ ಹಾವೇರಿಯಲ್ಲಿ ಗೋಲಿಬಾರ್‌ ಆಗಿತ್ತು. ಇದರಿಂದ ಜನತೆಗೆ ಸರ್ಕಾರದ ಮೇಲಿರುವ ನಂಬಿಕೆ ಹೊರಟು ಹೋಗುತ್ತದೆ ಎಂದರು.

ಯಾವ ಪಕ್ಷ ಅಧಿಕಾರಲ್ಲಿದ್ದರೂ ಇದೇ ರೀತಿ ವರ್ತಿಸುತ್ತವೆ. ಒಂದು ವೇಳೆ ಕಾಂಗ್ರೆಸ್‌ ಆಡಳಿತ ನಡೆಸುತ್ತಿದ್ದರೂ ಇದೇ ಆಗಿರುತ್ತಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಪಕ್ಷ ರಾಜಕಾರಣದಿಂದ ಯಾವುದೇ ದೇಶ ಉದ್ಧಾರ ಆಗಲ್ಲ ಎಂದು ಹೇಳಿದರು. ಯಾವುದೆ ಪಕ್ಷದಲ್ಲಿ ಮೌಲ್ಯ ಎಂಬುದಿಲ್ಲ ಎಂದರು.