ಹುಬ್ಬಳ್ಳಿ(ಮಾ.08):  ಬಿಜೆಪಿ ಸರ್ಕಾರ 20 ಪರ್ಸೆಂಟೇಜ್ ಸರ್ಕಾರವಾಗಿದೆ. ಪ್ರತಿಯೊಂದು ಕೆಲಸಕ್ಕೂ ಪರ್ಸಂಟೇಜ್ ಮೇಲೆ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದ್ದಾರೆ.

ಶನಿವಾರ ಇಲ್ಲಿನ ಗೋಕುಲ ರಸ್ತೆಯಲ್ಲಿನ ವಾಸವಿ ಮಹಲ್‌ನಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ಸರ್ಕಾರವಿದ್ದಾಗ ಪ್ರಧಾನಿ ಮೋದಿ ಅವರು 10 ಪರ್ಸೆಂಟೇಜ್ ಸರ್ಕಾರ ಎಂದು ಟೀಕಿಸುತ್ತಿದ್ದರು. ಆದರೆ ಇದೀಗ ಶೇ. 20ರಷ್ಟು ಹಣ ನೀಡದೇ ಯಾವುದೇ ಕೆಲಸವಾಗುತ್ತಿಲ್ಲ. ಭ್ರಷ್ಟಾಚಾರ ಎಂಬುದು ಸರ್ಕಾರದಲ್ಲಿ ತುಂಬಿ ತುಳುಕುತ್ತಿದೆ. ಇದಕ್ಕೆ ಮೋದಿ ಏನನ್ನುತ್ತಾರೆ ಎಂದು ಪ್ರಶ್ನಿಸಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೇಶದಲ್ಲಿ ಕೇಜ್ರಿವಾಲ್ ಸರ್ಕಾರ ಮಾದರಿಯಾಗಿದೆ. ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರ ಪಕ್ಷವಾಗಿರುವ ಆಪ್ ಯಾವ ರೀತಿ ಪಕ್ಷ ಸಂಘಟನೆ ಮಾಡಿದೆಯೋ ಅದೇ ರೀತಿ ಜೆಡಿಎಸ್‌ನ್ನು ನಾವು ಸಂಘಟಿಸಬೇಕಿದೆ. ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಅದು ಅಲ್ಲಿ ಬೆಳೆದಿದೆ. ಇಲ್ಲಿ ನಾವು ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸಲು ಕಾರ್ಯಕರ್ತರು ಮುಂದಾಗಬೇಕಿದೆ ಎಂದರು. ಯಾವುದೇ ಫಲಾಪೇಕ್ಷೆಯಿಲ್ಲದೇ ಜೆಡಿಎಸ್‌ನ್ನು ಕಟ್ಟೋಣ. ಒಂದು ಸಲ ಪಕ್ಷ ಸಂಘಟನೆಯಾದರೆ ತಾನಾಗಲೇ ಅಧಿಕಾರವೂ ಸಿಗುತ್ತದೆ. ಕಾರ್ಯಕರ್ತರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ ಎಂದರು.