ಬೆಳಗಾವಿ(ಜ.17): ಗೋಕಾಕ ತಾಲೂಕಿನಲ್ಲಿ ಜಾರಕಿಹೊಳಿ ಸಹೋದರರ ಸರ್ವಾಧಿಕಾರ ಧೋರಣೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ. ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಗೋಕಾಕ ಕ್ಷೇತ್ರ ಜಾರಕಿಹೊಳಿ ಕುಟುಂಬ ಹೊರತುಪಡಿಸಿ ಬೇರೆ ಯಾರೂ ಶಾಸಕರಾಗಬಾರದೆಂಬ ವ್ಯವಸ್ಥೆಯಿದೆ. ಜಾರಕಿಹೊಳಿ ವಿರುದ್ಧ ಜಾರಕಿಹೊಳಿ ಎಂಬ ಪರಿಸ್ಥಿತಿ ನಿರ್ಮಿಸಿ ವಿರೋಧಿಗಳನ್ನು ಹತ್ತಿಕ್ಕುವ ಕುತಂತ್ರ ನಡೆಯುತ್ತಿದೆ ಎಂದು ಜೆಡಿಎಸ್‌ ಮುಖಂಡ ಅಶೋಕ ಪೂಜಾರಿ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳನ್ನು ಒಂದೇ ಕುಟುಂಬ ನಿಯಂತ್ರಣ ಮಾಡುತ್ತಿದೆ. ಜಾರಕಿಹೊಳಿ ಸಹೋದರರಲ್ಲಿ ನಿಜವಾಗಿಯೂ ಕಲಹ ಇಲ್ಲ. ಅವರೆಲ್ಲ ಸಹೋದರರು ಒಂದೇ. ಚುನಾವಣೆ ವೇಳೆ ಜಾರಕಿಹೊಳಿ ವಿರುದ್ಧ ಜಾರಕಿಹೊಳಿ ಎಂಬ ಪರಿಸ್ಥಿತಿ ನಿರ್ಮಿಸುವ ಮೂಲಕ ವಿರೋಧಿಗಳನ್ನು ಹತ್ತಿಕ್ಕಿ ತಮ್ಮ ಕುಟುಂಬದ ಸದಸ್ಯರೇ ಗೋಕಾಕನಲ್ಲಿ ಗೆಲ್ಲಬೇಕು ಎಂಬ ತಂತ್ರ ಹೆಣೆದಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಗೋಕಾಕ ಉಪಚುನಾವಣೆಯಲ್ಲಿ ನಾನು ಸೋತಿರುವುದು ವಿರೋಧಿಗಳ ವಾಮಮಾರ್ಗದಿಂದ. ವಾಮ ಮಾರ್ಗದಿಂದಾಗಲಿ, ನೈತಿಕ ಮಾರ್ಗದಿಂದ ಸೋಲಾಗಲಿ, ಸೋಲು ಸೋಲೇ. ಜನರ ತೀರ್ಪಿಗೆ ನಾನು ತಲೆಬಾಗುತ್ತೇನೆ. ಚುನಾವಣೆಯಲ್ಲಿ ಸೋತಿದ್ದರೂ ನಮ್ಮ ಹೋರಾಟವನ್ನು ನಾವು ಕೈಬಿಡುವುದಿಲ್ಲ. ಗೋಕಾಕ ವ್ಯವಸ್ಥೆ ಬದಲಾವಣೆಗೆ ನಮ್ಮ ಸಂಕಲ್ಪ ನಿರಂತರವಾಗಿದೆ. ನಾವು ಜಾರಕಿಹೊಳಿ ಸಹೋದರರು ವೈಯಕ್ತಿಕವಾಗಿ ಒಳ್ಳೆಯ ಸ್ನೇಹಿತರು. ಆದರೆ, ಅವರ ಸರ್ವಾಧಿಕಾರಿ ವ್ಯವಸ್ಥೆ ವಿರುದ್ಧ ನಮ್ಮ ಹೋರಾಟ ನಿರಂತರವಾಗಿದೆ ಎಂದರು.