ಕಾರವಾರ [ಡಿ.15]: ಮಾಜಿ ಸಚಿವ ಅಸ್ನೋಟಿಕರ್ ಪಕ್ಷ ತ್ಯಜಿಸುವ ಮಾತುಗಳನ್ನಾಡಿದ್ದಾರೆ. ನಮ್ಮ ಬೇಕು, ಬೇಡಿಕೆಗಳಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ 3 - 4 ತಿಂಗಳಲ್ಲಿ ಸ್ಪಂದಿಸದೆ ಇದ್ದಲ್ಲಿ ಕಾರ್ಯಕರ್ತರೊಂದಿಗೆ ಚರ್ಚಿಸಿ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ತಿಳಿಸಿದ್ದಾರೆ. ಆನಂದ್ ಹೀಗೆ ಹೇಳುತ್ತಲೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿ ಪ್ರಶಂಸಿಸಿರುವುದು, ಯಲ್ಲಾಪುರ ಉಪ ಚುನಾವಣೆಯಲ್ಲಿ ಗೆದ್ದ ಶಿವರಾಮ ಹೆಬ್ಬಾರ ಸಚಿವರಾದ ಮೇಲೆ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಹೊಗಳಿರುವುದನ್ನು ಗಮನಿಸಿದರೆ ಅವರ ಚಿತ್ತ ಬಿಜೆಪಿಯತ್ತ ನೆಟ್ಟಿದೆ ಎನ್ನುವುದು ಸ್ಪಷ್ಟವಾಗಿದೆ. 

ಜತೆಗೆ ಈ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸದೆ ಇದ್ದರೆ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಹಕಾರ ನೀಡಬಹುದು ಎಂಬ ಮಾತುಗಳನ್ನೂ ಆಡಿದ್ದಾರೆ. ಅಂದರೆ ಪರೋಕ್ಷವಾಗಿ ಬಿಜೆಪಿಗೆ ಬಂದು ಬೇರೆ ಕ್ಷೇತ್ರದಲ್ಲಿ ನೆಲೆಯಾಗುವ ಕನಸನ್ನೂ ಬಿತ್ತಿದ್ದಾರೆ. 

ಇದರ ಜತೆಗೆ ಕಾಂಗ್ರೆಸ್ ಮುಖಂಡರೊಬ್ಬರು ತೆರೆಯ ಮರೆಯಲ್ಲಿ ಬಿಜೆಪಿ ಸೇರ್ಪಡೆಗೆ ಪ್ರಯತ್ನ ಆರಂಭಿಸಿರುವ ಸುದ್ದಿಯೂ ಹರಿದಾಡುತ್ತಿದೆ. ಜೆಡಿಎಸ್ ಕಳೆದ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ಒಂದು ಸ್ಥಾನವನ್ನೂ ಗಳಿಸಲು ಸಾಧ್ಯವಾಗದೆ ಇರುವುದು, ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಇದ್ದರೂ ದೇವೇಗೌಡರಾಗಲಿ, ಕುಮಾರಸ್ವಾಮಿ ಯವರಾಗಲಿ ಪ್ರಚಾರಕ್ಕೆ ಬಾರದೆ ಇರುವುದು ಜಿಲ್ಲಾ ಜೆಡಿಎಸ್‌ನ ಹಲವರಲ್ಲಿ ಅನಾಥಪ್ರಜ್ಞೆ ಕಾಡುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ಕೆಲವು ಪದಾಧಿಕಾರಿಗಳು ಕಾಂಗ್ರೆಸ್ ಜತೆ ಕೈಜೋಡಿಸಿದರೆ, ಕೆಲವರು ಬಿಜೆಪಿಗೆ ಜೈ ಅಂದರು. 

ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಗತ್ಯ ಸಂಖ್ಯೆಯ ಸ್ಥಾನಗಳನ್ನು ಗೆಲ್ಲದೆ ಇದ್ದರೆ, ಆಗ ಜೆಡಿಎಸ್ ಆಡಿದ್ದೇ ಆಟವಾಗಿತ್ತು. ಆದರೆ, ಬಿಜೆಪಿಗೆ ಬಹುಮತ ದೊರಕಿರುವುದರಿಂದ ಜೆಡಿಎಸ್‌ನಲ್ಲಿ ಸದ್ಯಕ್ಕೆ ಭವಿಷ್ಯ ಇಲ್ಲ ಎಂದು ಆ ಪಕ್ಷದ ಕೆಲವರು ಹೇಳುತ್ತಿದ್ದಾರೆ. ಇನ್ನು ಕಾಂಗ್ರೆಸ್‌ದಲ್ಲೂ ಹೆಚ್ಚು ಕಡಿಮೆ ಇಂಥದ್ದೆ ಪರಿಸ್ಥಿತಿ ಇದೆ. ಇನ್ನು ಮೂರೂವರೆ ವರ್ಷ ಬಿಜೆಪಿಯದ್ದೆ ದರ್ಬಾರು. ಸದ್ಯಕ್ಕೆ ಸಿದ್ದರಾಮಯ್ಯಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಪಿಸಿಸಿ ಅಧ್ಯಕ್ಷ ಗುಂಡೂರಾವ್ ಸಹ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಮುಂದೇನು ಎಂಬ ಗೊಂದಲ ಕಾಡುತ್ತಿದೆ. ಜತೆಗೆ ಸರ್ಕಾರ ಭದ್ರವಾಗಿದೆ. ಕಾಂಗ್ರೆಸ್‌ನಲ್ಲಿ ಸದ್ಯಕ್ಕಂತೂ ಭವಿಷ್ಯ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿದೆ. ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವರಾಗಲಿರುವುದರಿಂದ ಅವರು ಬಿಜೆಪಿಯಲ್ಲಿ ಪ್ರಬಲರಾಗಲಿದ್ದಾರೆ.

ಅವರನ್ನು ಬಳಸಿಕೊಂಡು ಕೆಲವರು ಬಿಜೆಪಿಗೆ ಸೇರುವ ಉತ್ಸುಕತೆಯಲ್ಲಿ ತೆರೆಯ ಮರೆಯಲ್ಲಿ ಪ್ರಯತ್ನ ನಡೆಸುತ್ತಿರುವುದಂತೂ ಹೌದು. ಒಂದು ವೇಳೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಬಂದರೆ ಇದರಿಂದ ಬಿಜೆಪಿಯಲ್ಲಿ ಗೊಂದಲ ಉಂಟಾಗುವ ಸಾಧ್ಯತೆಯೂ ದಟ್ಟವಾಗಿದೆ.