'JDS ನಲ್ಲಿದ್ದವರಿಗೆ ಕೈ ಟಿಕೆಟ್ : ಕಾಂಗ್ರೆಸ್ನಲ್ಲಿದ್ದವರಿಗೆ ಬಿಜೆಪಿ ಟಿಕೆಟ್'
ಶೀಘ್ರದಲ್ಲೇ ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು ಇನ್ನು ರಾಜಕೀಯ ಚಟುವಟಿಕೆಗಳ ಅಬ್ಬರ ಜೋರಾಗಿದೆ.
ಹಾಸನ (ಅ.18): ಕಳೆದ ಹಲವಾರು ತಿಂಗಳಿನಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಆಸ್ತಿಪಾಸ್ತಿ ನಷ್ಟವಾಗಿದೆ. ಜನರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರ ಮಾತ್ರ ಇದ್ಯಾವುದರ ಅರಿವೇ ಇಲ್ಲದೆ ಜಿಲ್ಲೆಗೆ ಅನುದಾನ ನೀಡುವಲ್ಲಿ ತಾರತಮ್ಯ ಎಸಗುತ್ತಿದೆ. ಹಾಗಾಗಿ, ಹಾಸನ ಜಿಲ್ಲೆ ಕರ್ನಾಟಕ ರಾಜ್ಯದಲ್ಲೇ ಇದೆಯೋ ಇಲ್ಲವೋ ಎನ್ನುವ ಅನುಮಾನ ಮೂಡುತ್ತದೆ ಎಂದು ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದರು.
ಹಾಸನ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೆಡೆ ಕೊರೋನಾದಿಂದ ಜನತೆ ತತ್ತರಿಸಿ ಹೋಗಿದ್ದಾರೆ. ಮತ್ತೊಂದೆಡೆ ಮಳೆಯಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಹಾಸನ, ಬೇಲೂರು ತಾಲೂಕುಗಳನ್ನು ಮಳೆಹಾನಿ ಪ್ರದೇಶಗಳ ಪಟ್ಟಿಗೆ ಸೇರಿಸಿದ್ದು, ಈ ಬಾರಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 350ಕೋಟಿ ರೂ. ನಷ್ಟಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಬೈ ಎಲೆಕ್ಷನ್‌ನಲ್ಲಿ ಜಾತಿ ವಾರ್: ಹಳೆ ಜೋಡೆತ್ತುಗಳ ನಡುವೆ ಶುರುವಾಯ್ತು ಕಾದಾಟ
ಇನ್ನು ರಾಜ್ಯದಲ್ಲಿ 4,500 ಕೋಟಿ ರೂ. ನಷ್ಟವಾಗಿದೆ. ಹಾಸನ ಜಿಲ್ಲೆಯ ಐದು ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಿದ್ದಾರೆ. ಆದರೆ, ಇದುವರೆಗೂ ಒಂದು ರುಪಾಯಿ ಪರಿಹಾರದ ಹಣ ಬಿಡುಗಡೆ ಮಾಡಿರುವುದಿಲ್ಲ. ಸುಮ್ಮನೆ ನಾಮಕಾವಸ್ತೆಗೆ ಹಾಸನ ಜಿಲ್ಲೆಯ ಐದು ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶವೆಂದು ಘೋಷಿಸಿದ್ದಾರೆ. ತಕ್ಷಣ ಹಾಸನ ಜಿಲ್ಲೆಯ ನಷ್ಟದ ಪರಿಹಾರ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯು ಕರ್ನಾಟಕ ರಾಜ್ಯದಲ್ಲಿ ಇದೆಯೋ ಇಲ್ಲವೋ ಗೊತ್ತಿಲ್ಲ. ಕರ್ನಾಟಕದಲ್ಲಿ ಇದೊಂದು ಅನಾಥ ಜಿಲ್ಲೆಯಾಗಿದೆ. ಹಾಸನ ಜಿಲ್ಲೆಯನ್ನು ಕಪ್ಪುಪಟ್ಟಿಗೆ ಸೇರಿಸಿ ಎಂದು ವ್ಯಂಗ್ಯವಾಡಿದರು.
ಶಿರಾ, ಆರ್.ಆರ್. ನಗರ ಉಪಚುನಾವಣೆ ವಿಚಾರವಾಗಿ ಮಾತನಾಡಿ, ನಮ್ಮದು ರಾಷ್ಟ್ರೀಯ ಪಕ್ಷ ಅಲ್ಲ. ಪ್ರಾದೇಶಿಕ ಪಕ್ಷ. ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಗಳೇ ಇಲ್ಲ. ನಮ್ಮದ 150 ವರ್ಷಗಳ ಇತಿಹಾಸವಿಲ್ಲ. ನೆಹರು, ಮಹಾತ್ಮಗಾಂಧಿ ಕಟ್ಟಿದ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ. ನಮ್ಮ ಪಕ್ಷದವರನ್ನು ಕರೆದುಕೊಂಡು ಹೋಗಿ ಟಿಕೆಟ್ ನೀಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದಲ್ಲಿದ್ದ ವೈದ್ಯರನ್ನು ಬಿಜೆಪಿಯವರು ಕರೆದುಕೊಂಡು ಹೋಗಿ ಟಿಕೆಟ್ ಕೊಟ್ಟಿದ್ದಾರೆ. ಈ ಎಲ್ಲವನ್ನು ಜನತೆ ತೀರ್ಮಾನಕ್ಕೆ ಬಿಟ್ಟು ನೋಡುತ್ತೇನೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಆಡಳಿತದಲ್ಲಿ ಸಾಲ ಮನ್ನಾ ಸೇರಿದಂತೆ ಹಲವಾರು ಒಳ್ಳೆಯ ಕೆಲಸ ನಡೆದಿತ್ತು. ಅಕ್ಟೋ್ಬರ್ 23ರ ನಂತರ ಚುನಾವಣಾ ಪ್ರಚಾರ ಮಾಡಲು ಪ್ರವಾಸ ಮಾಡುವುದಾಗಿ ಹೇಳಿದರು.