ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ಪುರಸಭೆ 3ನೇ ವಾರ್ಡ್‌ ಉಪ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಸೌಮ್ಯ ತಿರುಮಲಯ್ಯ 243 ಮತ ಪಡೆದು ಗೆಲುವು ಸಾಧಿಸುವ ಮೂಲಕ ಜೆಡಿಎಸ್‌ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದೆ.

ನಾಗಮಂಗಲ (ನ.01): ತೀವ್ರ ಕುತೂಹಲ ಕೆರಳಿಸಿದ್ದ ನಾಗಮಂಗಲ ಪುರಸಭೆ 3ನೇ ವಾರ್ಡ್‌ ಉಪ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಸೌಮ್ಯ ತಿರುಮಲಯ್ಯ 243 ಮತ ಪಡೆದು ಗೆಲುವು ಸಾಧಿಸುವ ಮೂಲಕ ಜೆಡಿಎಸ್‌ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದೆ.

ಸೌಮ್ಯ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಲಕ್ಷ್ಮಿ ರಂಗಪ್ಪ ಅವರನ್ನು 34 ಮತಗಳ ಅಂತರಿಂದ ಸೋಲಿಸಿ ಕಾಂಗ್ರೆಸ್‌ಗೆ ಮುಖಭಂಗವುಂಟು ಮಾಡಿದ್ದಾರೆ.

ಕಾಂಗ್ರೆಸ್‌ (Congress) ಬೆಂಬಲಿತ ಅಭ್ಯರ್ಥಿ ಲಕ್ಷ್ಮಿ ರಂಗಪ್ಪ 209 ಮತ ಪಡೆದರೆ, ಬಿಜೆಪಿ (BJP) ಬೆಂಬಲಿತ ಅಭ್ಯರ್ಥಿ ಶಶಿಕಲಾ ಚಂದ್ರಚಾರ್‌ ಕೇವಲ 5 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. 3ನೇ ವಾರ್ಡ್‌ ಈ ಹಿಂದಿನ ಕಾಂಗ್ರೆಸ್‌ ಸದಸ್ಯೆ ಇಂದಿರಾ ಕುಮಾರ್‌ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅ.28ರಂದು ಉಪ ಚುನಾವಣೆ ನಡೆದಿತ್ತು.

ಸಂಖ್ಯಾಬಲ ಹೆಚ್ಚಿಸಿಕೊಂಡ ಜೆಡಿಎಸ್‌:

3ನೇ ವಾರ್ಡ್‌ನ ಈ ಹಿಂದಿನ ಸದಸ್ಯೆ ಇಂದಿರಾ ಕುಮಾರ್‌ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ಎದುರಾಳಿ ಜೆಡಿಎಸ್‌ಗೆ ಸ್ಥಾನ ಬಿಟ್ಟು ಕೊಡಬಾರದೆಂದು ಕೈ ಮುಖಂಡರು ಉಪಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡಿದ್ದರು. ಆದರೆ, ಕೈ ಪಕ್ಷಕ್ಕೆ ಸೆಡ್ಡು ಹೊಡೆದು ನಿಂತ ಜೆಡಿಎಸ್‌ ಮುಖಂಡರು ಈ ಸ್ಥಾನವನ್ನು ಜೆಡಿಎಸ್‌ ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ಸಂಖ್ಯಾಬಲವನ್ನು 13 ಸ್ಥಾನಕ್ಕೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದಾರೆ.

ಪಟಾಕಿ ಸಿಡಿಸಿ ವಿಜಯೋತ್ಸವ:

ಜೆಡಿಎಸ್‌ ಅಭ್ಯರ್ಥಿ ಸೌಮ್ಯ ತಿರುಮಲಯ್ಯ ಗೆಲುವು ಸಾಧಿಸುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಬೃಹತ್‌ ಪಟಾಕಿ ಸಿಡಿಸಿ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ಶಾಸಕ ಸುರೇಶ್‌ಗೌಡ ಪರ ಜಯಘೋಷ ಮೊಳಗಿಸಿ ವಿಜಯೋತ್ಸವ ಆಚರಿಸಿದರು.

ನಂತರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಸುರೇಶ್‌ಗೌಡ, ಈ ಹಿಂದೆ ನಾನು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾಗಿನಿಂದಲೂ ಪಟ್ಟಣದ 3ನೇ ವಾರ್ಡ್‌ ಕಾಂಗ್ರೆಸ್‌ ಪಕ್ಷದ ಹಿಡಿತದಲ್ಲಿತ್ತು. ಈ ಬಾರಿ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದತ್ತ ಒಲವು ತೋರಿ ವಾರ್ಡ್‌ನ ಅಲ್ಪ ಸಂಖ್ಯಾತರೂ ಸೇರಿದಂತೆ ಎಲ್ಲ ಸಮುದಾಯದ ಮತದಾರರು ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೌಮ್ಯ ತಿರುಮಲಯ್ಯ ಗೆಲುವಿಗೆ ಶ್ರಮಿಸಿದ ಜೆಡಿಎಸ್‌ನ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಈ ವೇಳೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಡಿ.ಟಿ.ಶ್ರೀನಿವಾಸಯ್ಯ, ಪುರಸಭೆ ಸದಸ್ಯರಾದ ಶಂಕರಲಿಂಗೇಗೌಡ, ಚನ್ನಪ್ಪ, ವಿಜಯಕುಮಾರ್‌ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು. 

ಟಿಕೆಟ್ ಆಕಾಂಕ್ಷಿಗಳು ಹೆಚ್ಚಳ

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿತರ ಸಂಖ್ಯೆ ಹೆಚ್ಚಿದ್ದರೂ ನಮ್ಮ ನಡುವೆ ಯಾರಲ್ಲೂ ಗೊಂದಲವಿಲ್ಲ. ಮೂರು ಜನ ಟಿಕೆಟ್‌ ಆಕಾಂಕ್ಷಿಗಳಲ್ಲಿ ವರಿಷ್ಠರು ಯಾರಿಗೇ ಟಿಕೆಟ್‌ ನೀಡಿದರೂ ಅವರ ಗೆಲುವಿಗೆ ಶ್ರಮಿಸುತ್ತೇನೆ ಎಂದು ಜೆಡಿಎಸ್‌ ಪ್ರಬಲ ಟಿಕೆಟ್‌ ಆಕಾಂಕ್ಷಿತರಲ್ಲೊಬ್ಬರಾದ ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರು ಹೇಳಿದರು.

ತಾಲೂಕಿನ ಜಿ.ಹೊಸಹಳ್ಳಿ ಗ್ರಾಮದ ಶ್ರೀಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಮಂಡ್ಯ (Mandya) ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ (JDS) ಪಕ್ಷ ಸಂಘಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿಗಳಲ್ಲಿ ನಾನೂ ಒಬ್ಬ. ಟಿಕೆಟ್‌ ನೀಡುವುದು ಪಕ್ಷದ ವರಿಷ್ಠರಿಗೆ ಬಿಟ್ಟವಿಚಾರ. ಅದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಕ್ಷೇತ್ರದೊಳಗೆ ಪಕ್ಷ ಸಂಘಟನೆಗೆ ಮೊದಲ ಆದ್ಯತೆ ನೀಡುತ್ತಿದ್ದೇನೆ ಎಂದರು.

ನಾನು ಕ್ಷೇತ್ರಕ್ಕೆ ಹೊಸಬನೇನಲ್ಲ. ನಾನು ಹೋದೆಡೆಯಲ್ಲೆಲ್ಲಾ ಜನರು ನನ್ನನ್ನು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ. ನನ್ನ ಪರವಾಗಿ ಜನರ ಅಭಿಪ್ರಾಯ ಚೆನ್ನಾಗಿದೆ. ಪ್ರತಿ ಗ್ರಾಮದಲ್ಲಿ ಯುವಕರು ಜನರು ನನ್ನನ್ನು ಕೈಹಿಡಿದು ಮುನ್ನಡೆಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ನೀವೇ ಅಭ್ಯರ್ಥಿಯಾಗುವಂತೆ ಒತ್ತಡ ಹಾಕುತ್ತಿದ್ದಾರೆ. ವರಿಷ್ಠರು ಟಿಕೆಟ್‌ ನೀಡಿ ಕ್ಷೇತ್ರದ ಜನರು ನನ್ನನ್ನು ಆಯ್ಕೆ ಮಾಡಿದರೆ ಜನಸೇವಕನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಎಂದರು.

ಮಂಡ್ಯ ತಾಲೂಕಿನಲ್ಲಿ ಕಳೆದ 30 ವರ್ಷಗಳಿಂದ ನಾನು ವ್ಯಾಪಾರ ಮಾಡಿಕೊಂಡು, ಸಾಮಾಜಿಕ ಸೇವೆ ಮಾಡಿಕೊಂಡು ಜನರ ಜೊತೆ ಇದ್ದೇನೆ. ನಾನು ಮಂಡ್ಯದ ಕಲ್ಲಹಳ್ಳಿಯಲ್ಲಿ ವಾಸವಿದ್ದೇನೆ. ಆದರೂ ನನ್ನ ಬಗ್ಗೆ ಮತ್ತೋರ್ವ ಟಿಕೆಟ್‌ ಆಕಾಂಕ್ಷಿ ಎಚ್‌.ಎನ್‌.ಯೋಗೇಶ್‌ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೂ ನನಗೆ ಅವರ ಬಗ್ಗೆ ಬೇಜಾರಿಲ್ಲ. ಅವರು ನನ್ನ ಬ್ರದರ್‌ ಇದ್ದಂತೆ ಎಂದು ನಯವಾಗಿಯೇ ಚುಚ್ಚಿದರು.