15 ವರ್ಷದ ಬಳಿಕ ಜೆಡಿಎಸ್‌ಗೆ ಭರ್ಜರಿ ಲಾಟರಿ : ಅಧಿಕಾರ ಚುಕ್ಕಾಣಿ
ಬರೋಬ್ಬರಿ 15 ವರ್ಷಗಳ ಬಳಿಕ ಜೆಡಿಎಸ್ ಗೆದ್ದು ಅಧಿಕಾರಿ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಭರ್ಜರಿ ಲಾಟರಿ ಪಡೆದಂತಾಗಿದೆ.
ತುಮಕೂರು(ಸೆ.30): ತಾಲೂಕಿನ ಹರಳೂರು ಗ್ರಾಪಂ ಚುನಾವಣೆಯಲ್ಲಿ 15 ವರ್ಷದ ನಂತರ ಜೆಡಿಎಸ್ ಕೊನೆಗೂ ‘ಲಾಟರಿ’ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ.
16 ಸದಸ್ಯ ಬಲದ ಗ್ರಾಪಂನಲ್ಲಿ 10 ಬಿಜೆಪಿ, ಆರು ಜೆಡಿಎಸ್ ಸದಸ್ಯರು ಆಯ್ಕೆಯಾಗಿದ್ದರು, ಅಧ್ಯಕ್ಷೆಯಾಗಿದ್ದ ಅನಸೂಯ ಅವರ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಶಾಂತಲಾ ಅವರು ಆಯ್ಕೆಯಾಗಿದ್ದಾರೆ.
15 ವರ್ಷಗಳಿಂದ ಹರಳೂರು ಗ್ರಾಪಂನಲ್ಲಿ ಅಧಿಕಾರ ಹಿಡಿಯಲು ಆಗದ ಜೆಡಿಎಸ್‌ಗೆ ಈ ಬಾರಿ ಯಶಸ್ಸು ಸಿಕ್ಕಿದೆ. ಗ್ರಾಮಾಂತರ ಶಾಸಕ ಗೌರಿಶಂಕರ್ ಅವರ ಜನಪ್ರಿಯ ಕಾರ್ಯಕ್ರಮಗಳಿಗೆ ಬೆಂಬಲ ಸೂಚಿಸಿ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರು ಜೆಡಿಎಸ್‌ಗೆ ಬೆಂಬಲ ಸೂಚಿಸಿ ಮತ ಹಾಕಿದ್ದಾರೆ.
ಇದರಿಂದಾಗಿ ಬಿಜೆಪಿ ಬೆಂಬಲಿತ ಲಕ್ಷ್ಮಮ್ಮ ಹಾಗೂ ಜೆಡಿಎಸ್ ಬೆಂಬಲಿತ ಶಾಂತಲಾ ತಲಾ ಎಂಟು ಮತಗಳನ್ನು ಪಡೆದಿದ್ದರು. ಈ ವೇಳೆ ಲಾಟರಿ ಮೂಲಕ ಶಾಂತಲಾ ಅಧ್ಯಕ್ಷರ ಆಯ್ಕೆ ಆಗಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಶಾಂತಲಾ ಹಾಗೂ ಜೆಡಿಎಸ್ ಮುಖಂಡರನ್ನು ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ತಮ್ಮ ಕಚೇರಿಯಲ್ಲಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮುಖಂಡರಾದ ಹಿರೇಹಳ್ಳಿ ಮಹೇಶ್, ಪಾಲಾಕ್ಷಯ್ಯ, ಗ್ರಾಪಂ ಉಪಾಧ್ಯಕ್ಷ ರೇಣುಕಯ್ಯ, ಸದಸ್ಯರಾದ ಗಂಗಾಧರ್, ಜಯಮ್ಮ ಅಡವೀಶಯ್ಯ, ನಾಗರಾಜಯ್ಯ, ಲಕ್ಷ್ಮಕ್ಕ, ಯಲ್ಲಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು