ಪಾದಯಾತ್ರೆ ಟಿ.ಬಿ. ಕ್ರಾಸ್‌ ಬಿಟ್ಟು ನಂದಿಕಲ್‌ ಕೆರೆ ಗೇಟ್‌ ಸಮೀಪ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಉಚ್ಛಾಟಿತ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಿದರು.  

ತುಮಕೂರು (ಅ.09): ಪಾದಯಾತ್ರೆ ಟಿ.ಬಿ. ಕ್ರಾಸ್‌ ಬಿಟ್ಟು ನಂದಿಕಲ್‌ ಕೆರೆ ಗೇಟ್‌ ಸಮೀಪ ಬರುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಉಚ್ಛಾಟಿತ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರು ಯಾತ್ರೆಯಲ್ಲಿ ಪಾಲ್ಗೊಂಡು ರಾಹುಲ್‌ಗಾಂಧಿ ಜತೆ ಹೆಜ್ಜೆ ಹಾಕಿದರು.

ಪಾದಯಾತ್ರೆ ನಡುವೆಯೇ ಜೆಡಿಎಸ್‌ ಉಚ್ಛಾಟಿತ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ರನ್ನು ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ರಾಹುಲ್‌ಗಾಂಧಿಯವರಿಗೆ ಪರಿಚಯ ಮಾಡಿಕೊಟ್ಟರು.

ಪೂರ್ಣಕುಂಭ ಸ್ವಾಗತ : 

ಸಮಾಜದ ಸಾಮರಸ್ಯ ಹಾಗೂ ದೇಶವನ್ನು ಒಗ್ಗೂಡಿಸುವ ಘೋಷ ವಾಕ್ಯದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್‌ನ ಯುವರಾಜ ರಾಹುಲ್‌ಗಾಂಧಿ ಕೈಗೊಂಡಿರುವ ಭಾರತ್‌ ಜೋಡೋ ಪಾದಯಾತ್ರೆ ರಾಜ್ಯದಲ್ಲಿ 9ನೇ ದಿನಕ್ಕೆ ಕಾಲಿಟ್ಟಿದ್ದು ಶನಿವಾರ ಬೆಳಿಗ್ಗೆ ಕಲ್ಪತರುನಾಡು ತುಮಕೂರು ಜಿಲ್ಲೆಗೆ ಆಗಮಿಸಿತು.

ಶುಕ್ರವಾರ ರಾತ್ರಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಿ ಇಂದು ಬೆಳಿಗ್ಗೆ 6.30ಕ್ಕೆ ತುರುವೇಕೆರೆ ತಾಲೂಕಿನ ಮಾಯಸಂದ್ರಕ್ಕೆ ಆಗಮಿಸಿದ ರಾಹುಲ್‌ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆಯನ್ನು ಪೂರ್ಣಕುಂಭ ಕಳಸ ಹೊತ್ತ ಮಹಿಳೆಯರು ಅಭೂತಪೂರ್ವವಾಗಿ ಸ್ವಾಗತಿಸಿದರು.

ಇದೇ ವೇಳೆ ಮಾಯಸಂದ್ರ ಪ್ರವೇಶಿಸಿದ ತಮ್ಮ ನೆಚ್ಚಿನ ನಾಯಕ ರಾಹುಲ್‌ಗಾಂಧಿಯವರನ್ನು ಹಿರಿಯ ಕಾಂಗ್ರೆಸ್‌ ನಾಯಕರಾದ ಡಾ.ಜಿ. ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ವೆಂಕಟಮರಣಪ್ಪ, ಡಾ. ರಫೀಕ್‌ಅಹಮದ್‌, ಆರ್‌. ರಾಜೇಂದ್ರ ಸೇರಿದಂತೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ರಾಹುಲ್‌ಗಾಂಧಿಯವರೊಂದಿಗೆ ಕಾಂಗ್ರೆಸ್‌ ನಾಯಕರಾದ ಸುರ್ಜೇವಾಲಾ, ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ನಾಯಕರು, ಸಾವಿರಾರು ಮಂದಿ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಬೆಳಿಗ್ಗೆ 6.45ಕ್ಕೆ ಮಾಯಸಂದ್ರದ ಪೊಲೀಸ್‌ ಠಾಣೆ ಮುಂಭಾಗದಿಂದ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್‌ ಜೋಡೋ ಯಾತ್ರೆ ಪುನರಾರಂಭವಾಯಿತು. ಈ ಯಾತ್ರೆಯಲ್ಲಿ ರಾಹುಲ್‌ಗಾಂಧಿಯವರ ಎಡ ಮತ್ತು ಬಲ ಭಾಗದಲ್ಲಿ ಹೆಜ್ಜೆ ಹಾಕಲು ಜಿಲ್ಲಾ ಮಟ್ಟದ ನಾಯಕರು ಮುಗಿ ಬೀಳುತ್ತಿದ್ದ ದೃಶ್ಯಗಳು ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಕಂಡು ಬಂತು.

ಬೆಳಿಗ್ಗೆ 8.30ರಲ್ಲಿ ಯಡಗನಕಟ್ಟೆಸಮೀಪ ಕಾಂಗ್ರೆಸ್‌ ಕಾರ್ಯಕರ್ತ ಸುರೇಶ್‌ ಎಂಬುವರ ಮನೆಗೆ ತೆರಳಿದ ರಾಹುಲ್‌ಗಾಂಧಿ ಅವರು ಅಲ್ಲಿಯೇ ಚಹಾ ಸೇವಿಸಿದರು. ಜತೆಗೆ ಮನೆಯ ಹೊರಗಡೆ ಹಾಕಲಾಗಿದ್ದ ಚೇರ್‌ ಮೇಲೆ ಕುಳಿತು ಪಕ್ಷದ ನಾಯಕರಾದ ಸುರ್ಜೇವಾಲಾ, ವೇಣುಗೋಪಾಲ್‌, ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ರೊಂದಿಗೆ ಪಕ್ಷ ಸಂಘಟನೆ, ನಾಯಕತ್ವ ಕುರಿತು ಚರ್ಚೆ ನಡೆಸಿದರು.

ಪಾದಯಾತ್ರೆಯಲ್ಲಿ ತುಮಕೂರು, ಗುಬ್ಬಿ, ತುರುವೇಕೆರೆ, ತಿಪಟೂರು, ಕುಣಿಗಲ್‌ ಸೇರಿದಂತೆ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಹಾಗೂ ಭಾರತ್‌ ಜೋಡೋ ಯಾತ್ರೆಗೆ ಜೈಕಾರದ ಘೋಷಣೆಗಳನ್ನು ಕೂಗುತ್ತಾ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದ್ದು ಸಾಮಾನ್ಯ ದೃಶ್ಯವಾಗಿತ್ತು.

ಬೆಳಿಗ್ಗೆ 10.15ರ ವೇಳೆಗೆ ರಾಹುಲ್‌ಗಾಂಧಿಯವರ ಪಾದಯಾತ್ರೆ ತುರುವೇಕೆರೆ ತಾಲೂಕಿನ ಅರಳೀಕೆರೆ ಪಾಳ್ಯ ತಲುಪಿತು. ಅಲ್ಲಿಯೇ ವ್ಯವಸ್ಥೆ ಮಾಡಲಾಗಿದ್ದ ಉಪಹಾರವನ್ನು ರಾಹುಲ್‌ಗಾಂಧಿ ಸೇರಿದಂತೆ ಕಾಂಗ್ರೆಸ್‌ ನಾಯಕರು ಸೇವಿಸಿದರು.

ರೈತರೊಂದಿಗೆ ಸಂವಾದ:

ಉಪಹಾರ ಸೇವಿಸಿದ ಬಳಿಕ ರಾಹುಲ್‌ಗಾಂಧಿ ಅವರು ಅರಳೀಕೆರೆ ಪಾಳ್ಯದಲ್ಲಿ ತೆಂಗು-ಅಡಕೆ ಬೆಳೆಗಾರರೊಂದಿಗೆ ಸಂವಾದ ನಡೆಸಿದರು. ಸಂವಾದದ ವೇಳೆ ತೆಂಗು-ಅಡಕೆ ಬೆಳೆಗಾರರ ತಾವು ಅನುಭವಿಸಿರುವ ನಷ್ಟ, ಬೆಳೆ ಬೆಳೆಯಲು ತಗುಲುತ್ತಿರುವ ದುಬಾರಿ ವೆಚ್ಚದ ಬಗ್ಗೆಯೂ ರಾಹುಲ್‌ಗಾಂಧಿಯವರ ಗಮನಕ್ಕೆ ತಂದರು. ಬೆಳೆಗಾರರ ಸಮಸ್ಯೆಗಳ ವಾಸ್ತವತೆಯನ್ನು ಅರಿತ ರಾಹುಲ್‌ಗಾಂಧಿಯವರು ಈ ಬಗ್ಗೆ ಜತೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರೊಂದಿಗೆ ಚರ್ಚಿಸಿದರು. ರೈತರೊಂದಿಗೆ ಸಂವಾದ ನಡೆಸಿದ ಬಳಿ ಮಧ್ಯಾಹ್ನದ ಊಟವನ್ನು ಅರಳೀಕೆರೆ ಪಾಳ್ಯದಲ್ಲೇ ಸೇವಿಸಿದ ರಾಹುಲ್‌ಗಾಂಧಿ ಅವರು ಕೆಲ ಹೊತ್ತು ವಿಶ್ರಾಂತಿ ಪಡೆದರು.

ಮಧ್ಯಾಹ್ನ 3 ಗಂಟೆಗೆ ಮತ್ತೆ ಪಾದಯಾತ್ರೆ ಆರಂಭಗೊಂಡು ರಾತ್ರಿ ಬಾಣಸಂದ್ರ ಗ್ರಾಮ ಪ್ರವೇಶಿಸಲಿದ್ದು, ಗ್ರಾಮದ ವಿಎಎಸ್‌ಎಸ್‌ ಜೆಸಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡುವರು.

ಮಾಯಸಂದ್ರದಿಂದ ಬಾಣಸಂದ್ರದವರೆಗೆ ಸುಮಾರು 25 ಕಿಲೋ ಮೀಟರ್‌ ಪಾದಯಾತ್ರೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿರುವವರಿಗೆ 5 ಟನ್‌ ವಿವಿಧ ರೀತಿಯ ಹಣ್ಣು, 60 ಸಾವಿರ ಮಜ್ಜಿಗೆ ಪ್ಯಾಕೇಟುಗಳು, 1 ಲಾರಿ ಲೋಡ್‌ ತಂಪು ಪಾನೀಯ, 1 ಲಕ್ಷದ 30 ಸಾವಿರ ನೀರಿನ ಬಾಟಲ್‌ಗಳು, 40 ಸಾವಿರ ಬಿಸ್ಕೆಟ್‌ ಪ್ಯಾಕೆಟ್‌ಗಳು, 20 ಸಾವಿರ ಕೇಕ್‌, 1 ಲಾರಿ ಲೋಡ್‌ ಸೌತೆಕಾಯಿ, 3 ಕ್ವಿಂಟಾಲ್‌ ಕೊಬ್ಬರಿ, 50 ಸಾವಿರ ಕಡ್ಲೆಪುರಿ ಪ್ಯಾಕೇಟ್‌, ಚುರುಮುರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ವಿತರಿಸಲು 22 ಕಡೆಗಳಲ್ಲಿ ಮಳಿಗೆಗಳನ್ನು ತೆರೆಯಲಾಗಿತ್ತು.

ಗಮನ ಸೆಳೆದ ಗಾಂಧಿ ವೇಷಧಾರಿ: ಬೆಳಗ್ಗೆ ಮಾಯಸಂದ್ರದಿಂದ ಆರಂಭವಾದ ಭಾರತ್‌ ಜೋಡೋ ಪಾದಯಾತ್ರೆಯಲ್ಲಿ ವಿವಿಧ ವೇಷಭೂಷಣಗಳನ್ನು ತೊಟ್ಟು ಕಾರ್ಯಕರ್ತರು ಹೆಜ್ಜೆ ಹಾಕಿದರು. ಹಾಗೆಯೇ ಮುತ್ತುರಾಯಪ್ಪ ಎಂಬುವರು ಮಹಾತ್ಮ ಗಾಂಧೀಜಿ ವೇಷಧಾರಿಯಾಗಿ ಪಾಲ್ಗೊಂಡಿದ್ದು ನೋಡುಗರ ಗಮನ ಸೆಳೆಯಿತು. ತುರುವೇಕೆರೆಯ ಮಾಯಸಂದ್ರಕ್ಕೆ ಭಾರತ್‌ ಜೋಡೋ ಯಾತ್ರೆ ಆಗಮಿಸಿದ ಹಿನ್ನೆಲೆಯಲ್ಲಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್‌ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ನೇತೃತ್ವದಲ್ಲಿ ಪಾದಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಪೊಲೀಸ್‌ ಸರ್ಪಗಾವಲು ವ್ಯವಸ್ಥೆ ಮಾಡಲಾಗಿತ್ತು.