ಮಲ್ಲಿಕಾರ್ಜುನ ದರಗಾದ 

ಹುನಗುಂದ(ಮಾ.13): ಪುರಸಭೆಗೆ ಚುನಾವಣೆ ಜರುಗಿ ಒಂದೂವರೆ ವರ್ಷದ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಮೂರು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. 2018 ಆಗಸ್ಟ್‌ನಲ್ಲಿ ಪುರಸಭೆ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಯಾವುದೇ ಪಕ್ಷಕ್ಕೆ ಸರಳ ಬಹುಮತ ಇಲ್ಲದ ಕಾರಣ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಮೂರು ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಪಕ್ಷವೇ ನಿರ್ಣಾಯಕ ಪಾತ್ರ ವಹಿಸಲಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 12, ಬಿಜೆಪಿ ೮ ಹಾಗೂ ಜೆಡಿಎಸ್ 3 ಸ್ಥಾನಗಳನ್ನು ಗೆದ್ದುಕೊಂಡಿದೆ. ಕ್ಷೇತ್ರದ ಶಾಸಕ ಮತ್ತು ಸಂಸದ ಸೇರಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ 25 ಜನರು ಮತದಾನದ ಹಕ್ಕು ಹೊಂದಿರುವುದರಿಂದ ಸರಳ ಬಹುಮತಕ್ಕೆ 13 ಸದಸ್ಯರ ಅವಶ್ಯಕತೆ ಇದೆ. ಕಾಂಗ್ರೆಸ್ ಪಕ್ಷ 12 ಸ್ಥಾನಗಳನ್ನು ಗೆದ್ದು ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದರೂ ಸರಳ ಬಹುಮತಕ್ಕೆ ಒಂದು

ಸ್ಥಾನದ ಕೊರತೆ ಇದೆ. 

ಇನ್ನು 8 ಸ್ಥಾನ ಗೆದ್ದಿರುವ ಬಿಜೆಪಿಗೆ ಸಂಸದ ಮತ್ತು ಶಾಸಕ ಅದೇ ಪಕ್ಷದವರಾಗಿದ್ದರಿಂದ ಆ ಪಕ್ಷದ ಸಂಖ್ಯಾಬಲ 10ಕ್ಕೆ ಏರಲಿದೆಯಾದರೂ ಸರಳ ಬಹುಮತಕ್ಕೆ ಇನ್ನೂ ಮೂರು ಸದಸ್ಯರ ಕೊರತೆ ಇದೆ. ಹೀಗಾಗಿ ಯಾರೇ ಅಧಿಕಾರದ ಚುಕ್ಕಾಣಿ ಹಿಡಿಯಬೇಕಾದರೂ ಮೂರು ಸ್ಥಾನ ಹೊಂದಿರುವ ಜೆಡಿಎಸ್ ಬೆಂಬಲ ಅನಿವಾರ್ಯ. 

ಜೆಡಿಎಸ್ ಬೆಂಬಲ ಯಾರಿಗೆ?: 

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಜೆಡಿಎಸ್ ಪಕ್ಷದ ಬೆಂಬಲ ಯಾರಿಗೆ ಎಂಬುದು ಸದ್ಯದ ಕುತೂಹಲ. ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಕಳೆದ ಹಲವು ತಿಂಗಳಿಂದ ಪಕ್ಷ ಸಂಘಟನೆ ಚಟುವಟಿಕೆಗಳಿಂದ ದೂರ ಉಳಿದಿದ್ದರೆ, ತಾಲೂಕು ಘಟಕದ ಅಧ್ಯಕ್ಷ ಜಬ್ಬಾರ ಕಲಬುರ್ಗಿ ಕೂಡ ಮಾನಸಿಕವಾಗಿ ಪಕ್ಷದಿಂದ ದೂರವಾಗಿ ಕಾಂಗ್ರೆಸ್‌ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆಪ್ತ ಬಳಗದಲ್ಲಿ ಬಹಿರಂಗವಾಗಿ ಗುರುತಿಸಿಕೊಂಡಿದ್ದಾರೆ. 

ಆಯ್ಕೆಯಾಗಿರುವ ಮೂವರು ಜೆಡಿಎಸ್ ಸದಸ್ಯರು ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಅವರ ಆಪ್ತರೇ ಆಗಿರುವುದರಿಂದ ಅವರು ತೆಗೆದುಕೊಳ್ಳುವ ನಿರ್ಧಾರ ಎರಡೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಆಡಳಿತದ ಭವಿಷ್ಯ ನಿರ್ಧರಿಸಲಿದೆ. 

ಸಮಾನಾಂತರ: 

ಎಸ್.ಆರ್. ನವಲಿಹಿರೇಮಠ ಅವರು ಶಾಸಕ ದೊಡ್ಡನಗೌಡ ಪಾಟೀಲ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರೊಂದಿಗೆ ಸಮಾನ ಅಂತರ ಕಾಯ್ದುಕೊಂಡಿದ್ದಾರೆ. ಪಕ್ಷದ ವರಿಷ್ಠರು ತೆಗೆದುಕೊಂಡ ನಿರ್ಧಾರ ಹಿನ್ನೆಲೆಯಲ್ಲಿ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ನವಲಿಹಿರೇಮಠ ಬೆಂಬಲಿಸಿದ್ದರೂ, ಇತ್ತೀಚೆಗಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ನವಲಿಹಿರೇಮಠ ಮತ್ತು ವಿಜಯಾನಂದ ಕಾಶಪ್ಪನವರ ಸಂಬಂಧ ಅಷ್ಟಕಷ್ಟೇ ಎನ್ನುವಂತಿದೆ. ಹೀಗಾಗಿ ಮುಂದೆ ನಡೆಯುವ ಹುನಗುಂದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಅತ್ಯಂತ ಕುತೂಹಲ ಮೂಡಿಸಿದೆ. 

ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆ: 

ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕ್ಷೇತ್ರದ ಕೇಂದ್ರ ಸ್ಥಾನ ಮತ್ತು ತಾಲೂಕು ಕೇಂದ್ರವಾಗಿರುವ ಹುನಗುಂದ ಪುರಸಭೆಯನ್ನು ವಶಕ್ಕೆ ಪಡೆಯಲು ಎರಡು ಪಕ್ಷದ ಮುಖಂಡರು ಶತಾಯ ಗತಾಯ ಪ್ರಯತ್ನ ಮಾಡುವುದನ್ನು ಅಲ್ಲಗಳೆಯುವಂತಿಲ್ಲ. ಈ ಜಿದ್ದಾ-ಜಿದ್ದಿಯಲ್ಲಿ ಸದಸ್ಯರ ಖರೀದಿ ಕಾರ್ಯ ಎರಡು ಪಕ್ಷಗಳ ಕಡೆಯಿಂದ ನಡೆದರೂ ಅಚ್ಚರಿ ಪಡಬೇಕಿಲ್ಲ. 

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮುಕ್ತವಾಗಿರುವುದರಿಂದ ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಆಕಾಂಕ್ಷಿಗಳು ಮುಖಂಡರ ಮೇಲೆ ಒತ್ತಡ ತರುವ ಕಾರ್ಯದಲ್ಲಿ ಈಗಿನಿಂದಲೇ ತೊಡಗಿದ್ದಾರೆ. ಈ ಪೈಪೋಟಿ ಎರಡು ಪಕ್ಷಗಳಲ್ಲಿ ಅಸಮಾಧಾನ ಭುಗಿಲೇಳುವಂತೆಯೂ ಮಾಡಬಹುದು. ಒಟ್ಟಾರೆ ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಕಾಂಗ್ರೆಸ್ ಎರಡು ಪಕ್ಷಗಳಿಗೂ ಜೆಡಿಎಸ್ ಬೆಂಬಲ ಅನಿವಾರ್ಯವಾಗಿರುವುದರಿಂದ ಆ ತೆಗೆದುಕೊಳ್ಳುವ ನಿರ್ಧಾರದ  ಮೇಲೆ ಭವಿಷ್ಯ ಅಡಗಿರವುದಂತೂ ಸತ್ಯ. 

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ ಈ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಲ್ಲಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದು ಸ್ಥಳೀಯ ಆಡಳಿತವಾಗಿರುವುದರಿಂದ ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸ್ಥಳೀಯ ಬಿಜೆಪಿ ಸದಸ್ಯರು ಮತ್ತು ಮುಖಂಡರು ಸೇರಿ ಈ ಕುರಿತು ನಿರ್ಧಾರ ಕೈಗೊಳ್ಳುತ್ತಾರೆ ಎಂದು  ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದ್ದಾರೆ. 

12 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಪುರಸಭೆಯಲ್ಲಿ ಅತಿ ದೊಡ್ಡ ಪಕ್ಷವಾಗಿದೆ. ಜ್ಯಾತ್ಯತೀತ ನಿಲುವಿನಲ್ಲಿ ನಂಬಿಕೆ ಇಟ್ಟಿರುವ ಜೆಡಿಎಸ್, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತದೆ ಎಂಬ ನಂಬಿಕೆ ಇದೆ. ಈ ಕುರಿತು ಬೆಂಬಲವನ್ನು ಕೋರಲಾಗುವುದು. ಯಾವುದೇ ಆತಂಕವಿಲ್ಲದೆ ಕಾಂಗ್ರೆಸ್ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ತಿಳಿಸಿದ್ದಾರೆ. 

ಜೆಡಿಎಸ್ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬ ನಿರ್ಧಾರವನ್ನು ಇನ್ನೂ ಕೈಗೊಂಡಿಲ್ಲ. ನಮ್ಮ ಸದಸ್ಯರ ಹಿತಾಸಕ್ತಿ, ಪಟ್ಟಣದ ಸಮಗ್ರ ಅಭಿವೃದ್ಧಿ ಆಧಾರದ ಮೆಲೆ ಯಾವ ಪಕ್ಷಕ್ಕೆ ಬೆಂಬಲ ನಿಡಬೇಕೆಂಬುವುದನ್ನು ಚುನಾವಣೆ ದಿನಾಂಕ ನಿಗದಿಯಾದ ಮೇಲೆ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ಹೇಳಿದ್ದಾರೆ.