Asianet Suvarna News Asianet Suvarna News

ಕುಮಾರಸ್ವಾಮಿಗೆ ಜನಾಂಗೀಯ ನಿಂದನೆ ಮಾಡಿದ ಜಮೀರ್‌ ಮನೆಗೆ ಮುತ್ತಿಗೆ ಯತ್ನ

ಕುಮಾರಸ್ವಾಮಿಗೆ ಜನಾಂಗೀಯ ನಿಂದನೆ ಮಾಡಿದ ಜಮೀರ್‌ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ ಜೆಡಿಎಸ್‌ ಕಾರ್ಯಕರ್ತರು| ಜಮೀರ್‌ ವಿರುದ್ಧ ಘೋಷಣೆ ಕೂಗಿ ಆಕ್ರೋಶ| ಪೊಲೀಸರ ಮನವಿಗೆ ಸ್ಪಂದಿಸಿ  ಪ್ರತಿಭಟನೆ ಹಿಂಪಡೆದ ಕಾರ್ಯಕರ್ತರು| 

JDS Activists Held Protest Against Zameer Ahmad Khan at Bengaluru grg
Author
Bengaluru, First Published Apr 5, 2021, 9:31 AM IST

ಬೆಂಗಳೂರು(ಏ.05):  ಬಸವಕಲ್ಯಾಣ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಣಾ ಪ್ರಚಾರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಯುವ ಜನತಾ ದಳದ ಕಾರ್ಯಕರ್ತರು ಭಾನುವಾರ ಕಾಂಗ್ರೆಸ್‌ ಶಾಸಕ ಜಮೀರ್‌ ಅಹ್ಮದ್‌ ಖಾನ್‌ ಅವರ ನಿವಾಸಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದಾರೆ. 

ಬೆಳಗ್ಗೆ 8.30ಕ್ಕೆ ಬಂದ ಸುಮಾರು 50ಕ್ಕೂ ಹೆಚ್ಚು ಯುವ ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿಗಳನ್ನು ಜನಾಂಗೀಯ ನಿಂದನೆ ಮಾಡಿರುವ ಜಮೀರ್‌ ಅಹ್ಮದ್‌ ಖಾನ್‌ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿ ಜಮೀರ್‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಜಮೀರ್‌ ಗೆಲ್ಲಿಸಲು ಹಣ ಕೊಟ್ಟಿದ್ಯಾರು?: ಎಚ್‌ಡಿಕೆ

ಈ ವೇಳೆ ಮಾತನಾಡಿದ ಬೆಂಗಳೂರು ನಗರ ಯುವ ಘಟಕದ ಅಧ್ಯಕ್ಷ ಪ್ರವೀಣ್‌, ಜೆಡಿಎಸ್‌ ಪಕ್ಷದಲ್ಲಿ ಬೆಳೆದ ಜಮೀರ್‌ ಅಹ್ಮದ್‌ ಖಾನ್‌ ಇಂದು ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಬಸವಕಲ್ಯಾಣದ ಚುನಾವಣಾ ಪ್ರಚಾರದಲ್ಲಿ ಕಾಲಾ ಕುಮಾರಸ್ವಾಮಿ(ಕರಿಯ) ಎಂದು ಹೇಳುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ. ತಕ್ಷಣ ಅವರು ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಈ ಸಂಬಂಧ ಸೋಮವಾರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗುವುದು. ದೂರಿನ ಸಂಬಂಧ ಎಫ್‌ಐಆರ್‌ ದಾಖಲಿಸುವವರೆಗೂ ಠಾಣೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕೊರೋನಾ ನಿಯಮಾವಳಿಗಳ ಪ್ರಕಾರ ಮುತ್ತಿಗೆ, ಪ್ರತಿಭಟನೆ ನಡೆಸುವುದಕ್ಕೆ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಬೇಕು ಎಂದು ಮನವಿ ಮಾಡಿದರು. ಬಳಿಕ ಮನವಿಗೆ ಸ್ಪಂದಿಸಿದ ಕಾರ್ಯಕರ್ತರು ಪ್ರತಿಭಟನೆ ಹಿಂಪಡೆದರು.
 

Follow Us:
Download App:
  • android
  • ios