ಧಾರವಾಡ(ಮೇ.21): ಕಾರ್ಮಿಕ ವಿರೋಧಿ ಅಲ್ಲದೇ, ಕಾರ್ಪೋರೇಟ್‌ ಕಂಪನಿ ಹಾಗೂ ಮಾಲೀಕರ ತಾಳಕ್ಕೆ ಕುಣಿಯುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಗಳ ಜಂಟಿ ಸಮಿತಿ(ಜೆಸಿಟಿಯು) ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಗೆ ಪೂರ್ಣ ವೇತನ ನೀಡಬೇಕು, ಗುತ್ತಿಗೆ ಕಾರ್ಮಿಕರನ್ನು ಒಳಗೊಂಡು ಯಾವುದೇ ಕಾರ್ಮಿಕರನ್ನು ವಜಾಗೊಳಿಸಬಾರದು. ಮಾಲೀಕರಿಗೆ ವಿನಾಯ್ತಿ ನೀಡಿ ಕಾರ್ಮಿಕರ ಹಕ್ಕು ಕಸಿಯುವ ಕೈಗಾರಿಕಾ ವಿವಾದ ಕಾಯ್ದೆಯ 5(ಬಿ) ಯ ತಿದ್ದುಪಡಿ ಕೈಬಿಡುವುದು, ಎಪಿಎಂಸಿ ಸುಗ್ರೀವಾಜ್ಞೆ ಮುಂತಾದ ರಾಜ್ಯ ಸರ್ಕಾರದ ಕಾರ್ಮಿಕ ವಿರೋಧಿ ಕ್ರಮಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಯ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕೊರೋನಾ ಕಾಟ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಮುಂದಕ್ಕೆ?

ಈ ವೇಳೆ ಮಾತನಾಡಿದ ಸಿಐಟಿಯು ಹಿರಿಯ ಕಾರ್ಮಿಕ ಮುಖಂಡ ಪೂಜಾರ, ಕೆಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಕಾರ್ಮಿಕ ಕಾನೂನುಗಳ ಅನುಷ್ಠಾನಕ್ಕೆ ಸಂಪೂರ್ಣ ರಜೆ ಘೋಷಿಸಿವೆ. ಇಂತಹ ಪ್ರತಿಗಾಮಿ ಕ್ರಮದಿಂದ ಕನಿಷ್ಠ ವೇತನ ಪಾವತಿ ಕಾಯ್ದೆಯ ಸೌಲಭ್ಯವೂ ಕಾರ್ಮಿಕರಿಗೆ ಸಿಗುವುದಿಲ್ಲ. ನಮ್ಮ ರಾಜ್ಯ ಸರ್ಕಾರವೂ ಸಹ ಇದೇ ದಾರಿಯಲ್ಲಿ ಸಾಗಿ ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ ಮತ್ತು ಗುತ್ತಿಗೆ ಕಾರ್ಮಿಕರ ಕಾಯ್ದೆಗಳ ಕಾರ್ಮಿಕ-ವಿರೋಧಿ ತಿದ್ದುಪಡಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ ಎಂದರು.

ಎಐಯುಟಿಯುಸಿ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳು ಕೈಗೊಳ್ಳುತ್ತಿರುವ ಕಾರ್ಮಿಕ ಕಾನೂನುಗಳಿಂದ ಮಾಲೀಕರಿಗೆ ರಿಯಾಯಿತಿ ನೀಡುವ ಕ್ರಮಗಳ ಭಾಗವಾಗಿ ರಾಜ್ಯ ಸರ್ಕಾರವು ಕೂಡ, ದಿನದ ಕೆಲಸದ ಅವಧಿಯನ್ನು ಹಾಲಿ 8 ಗಂಟೆಯಿಂದ 12 ಗಂಟೆಗೆ ಹೆಚ್ಚಳ ಮಾಡುತ್ತಿರುವ ಕ್ರಮ ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಎಐಟಿಯುಸಿ ನಾಯಕರಾದ ಎನ್‌.ಎಂ. ಇನಾಮ್‌ದಾರ್‌, ರಮೇಶ ಹೊಸಮನಿ, ಸಿಐಟಿಯು ಮುಖಂಡ ಎ.ಎಂ. ಖಾನ್‌ ಹಾಗೂ ರಫಿಕ್‌ ಕಣಕಿ, ಮಹ್ಮದ್‌ಶೋಯಭ್‌ ಪೀರ್‌ಜಾಧೆ, ಮಹ್ಮದ್‌ ಜಾಫರ್‌ ಖಾಜಿ, ರಿಯಾಜ್‌ಅಹ್ಮದ್‌ ತಡಕೋಡ, ಜಲಾನಿ ಪೆಂಡಾರಿ ಇದ್ದರು.