ಬಾಗಲಕೋಟೆ(ಜ.14): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿರುವ ಪಾದಯಾತ್ರೆ ರದ್ದು ಮಾಡುವುದಾಗಿ ಕೂಡಲಸಂಗಮದ ಜಯಮೃತ್ಯುಂಜಯ ಶ್ರೀಗಳು ಸಮ್ಮತಿಸಿದ್ದಾರೆಂಬ ನೂತನ ಸಚಿವ ಮುರುಗೇಶ್‌ ನಿರಾಣಿ ಅವರ ಹೇಳಿಕೆ ಈಗ ಗೊಂದಲಕ್ಕೆ ಕಾರಣವಾಗಿದೆ. ಏತನ್ಮಧ್ಯೆ, ಯಾವುದೇ ಕಾರಣಕ್ಕೂ ಪಾದಯಾತ್ರೆ ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಜಯಮೃತ್ಯುಂಜಯ ಶ್ರೀ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮವದರೊಂದಿಗೆ ಬುಧವಾರ ಮಾತನಾಡಿರುವ ಮುರಗೇಶ ನಿರಾಣಿ ಅವರು, ಕೂಡಲಸಂಗಮ ಶ್ರೀಗಳೊಂದಿಗೆ ಮಾತನಾಡಿರುವೆ. ಅವರು ಪಾದಯಾತ್ರೆ ರದ್ದು ಮಾಡುವುದಾಗಿ ತಿಳಿಸಿದ್ದಾರೆ ಎಂದಿದ್ದರು. ಈ ಕುರಿತು ನಂತರ ಸ್ಪಷ್ಟನೆ ನೀಡಿರುವ ಶ್ರೀಗಳು, ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಪಾದಯಾತ್ರೆಗೂ ಮುರುಗೇಶ ನಿರಾಣಿಗೆ ಸಚಿವ ಸ್ಥಾನ ನೀಡಿದ್ದಕ್ಕೂ ಯಾವುದೇ ಸಂಬಂಧ ಇಲ್ಲ. ಪಂಚಮಸಾಲಿ ಸಮುದಾಯದವರಾದ ನಿರಾಣಿ ಅವರಿಗೆ ಸಚಿವ ಸ್ಥಾನ ಸಿಕ್ಕಿದ್ದು ಸಂತೋಷ. ನಿರಾಣಿ ಕರೆ ಮಾಡಿ ಮಾತನಾಡಿದ್ದು ನಿಜ. ಆದರೆ ಮೀಸಲಾತಿಗಾಗಿ ನಡೆದಿರುವ ಹೋರಾಟ ಅಂತ್ಯವಾಗಬೇಕಾದರೆ ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆ ಮಾಡಬೇಕು ಎಂದರು.

ಪಂಚಮಸಾಲಿ 2 ಎ ಮೀಸಲಾತಿ: ಅಧಿವೇಶನ ವೇಳೆ ವಿಧಾನಸೌಧ ಮುತ್ತಿಗೆಗೆ ನಿರ್ಧಾರ

ಪಾದಯಾತ್ರೆ ನಿಶ್ಚಿತ-ಕಾಶಪ್ಪನವರ್‌:

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಒತ್ತಾಯಿಸಿ ಕೂಡಲಸಂಗಮದಿಂದ ಜ.14ರಂದು ಪಾದಯಾತ್ರೆ ನಡೆಯಲಿದೆ. ಇದು ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್‌ ಕೂಡ ಸ್ಪಷ್ಟಪಡಿಸಿದ್ದಾರೆ.

ನಾನಾಗಲಿ, ಶ್ರೀಗಳಾಗಲಿ ಪಾದಯಾತ್ರೆ ರದ್ದಾಗಿದೆ ಎಂದು ಎಲ್ಲೂ ಹೇಳಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು. ಸರ್ಕಾರ ಮೀಸಲಾತಿ ಕುರಿತು ಘೋಷಣೆ ಮಾಡಲಿ. ಇಲ್ಲವಾದಲ್ಲಿ ಹೋರಾಟ ನಿಲ್ಲುವ ಪ್ರಶ್ನೆಯೇ ಇಲ್ಲ ಎಂದು ಪಂಚಮಸಾಲಿ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕಾಶಪ್ಪನವರ್‌ ತಿಳಿಸಿದ್ದಾರೆ.