ಬೆಂಗಳೂರು [ಜು.29]:  ನಗರದ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಮೆಟ್ರೋ ಮಾರ್ಗದ ನಿರ್ಮಾಣದ ಹಿನ್ನೆಲೆಯಲ್ಲಿ ನಗರದ ಜಯದೇವ ಜಂಕ್ಷನ್‌ನ ಮೇಲ್ಸೇತುವೆ ಲೂಪ್‌ ಭಾಗ ತೆರವು ಕಾಮಗಾರಿ ಭರದಿಂದ ಸಾಗಿದೆ.

ಒಮ್ಮೆಗೆ ಮೇಲ್ಸೇತುವೆ ತೆರವು ಕಾಮಗಾರಿ ಆರಂಭಿಸುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ಆದ್ದರಿಂದ ಬಿಎಂಆರ್‌ಸಿಎಲ್‌ ವಿವಿಧ ಹಂತಗಳಲ್ಲಿ ಕಾಮಗಾರಿ ಕೈಗೊಂಡಿದೆ. ಜು.15ರಿಂದಲೇ ಮೇಲ್ಸೇತುವೆ ತೆರವು ಮಾಡುವ ಕಾಮಗಾರಿ ಆರಂಭವಾಗಿದ್ದು, ಬನ್ನೇರುಘಟ್ಟ ಕಡೆಯಿಂದ ಸೆಂಟ್ರಲ್‌ ಸಿಲ್ಕ್ ಬೋರ್ಡ್‌ ಕಡೆ ಹೋಗುವ ಮೇಲ್ಸೇತುವೆಯ ಲೂಪ್‌ ಭಾಗವನ್ನು ಕೆಡವಲಾಗುತ್ತಿದೆ. ಈ ಕಾಮಗಾರಿ ಹಿನ್ನೆಲೆಯಲ್ಲಿ ಜಯದೇವ ಅಂಡರ್‌ಪಾಸ್‌ ಪಕ್ಕದ ಸರ್ವಿಸ್‌ ರಸ್ತೆಯನ್ನು ಬಂದ್‌ ಮಾಡಿ ಸಂಚಾರ ಮಾರ್ಗ ಬದಲಿಸಲಾಗಿದೆ. ಆದರೆ ಅಂಡರ್‌ಪಾಸ್‌ನಲ್ಲಿ ಸಂಚಾರ ಎಂದಿನಂತೆ ಮುಂದುವರಿದಿದೆ. ಈ ಕಾಮಗಾರಿಯಿಂದ ಈ ಜಂಕ್ಷನ್‌ ಸುತ್ತಮುತ್ತ ಶಬ್ಧ ಹಾಗೂ ವಾಯು ಮಾಲಿನ್ಯ ಹೆಚ್ಚಾಗಿದ್ದು, ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಅನುಭವಿಸುವಂತಾಗಿದೆ.

ಸವಾರರ ಪರದಾಟ:

ಮೇಲ್ಸೇತುವೆ ತೆರವು ಕಾಮಗಾರಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ಲಕ್ಷಾಂತರ ಸವಾರರಿಗೆ ಅನಾನುಕೂಲವಾಗಲಿದೆ. ಬನ್ನೇರುಘಟ್ಟರಸ್ತೆಯಿಂದ ಸಿಲ್ಕ್ ಬೋರ್ಡ್‌ ಕಡೆ ಹೋಗುವವರಿಗೆ ಮೇಲ್ಸೇತುವೆಯ ಲೂಪ್‌ನ ಸಂಚಾರ ನಿರಾಳವಾಗಿತ್ತು. ಮೇಲ್ಸೇತುವೆಯಾಗಿರುವುದರಿಂದ ಕಡಿಮೆ ಸಮಯದಲ್ಲಿ ಸಿಲ್ಕ್ ಬೋರ್ಡ್‌ ತಲುಪಬಹುದಿತ್ತು. ಇನ್ನು ಮುಂದೆ ಮೇಲ್ಸೇತುವೆಯನ್ನು ಬಿಟ್ಟು ಕೆಳಗಿನ ಪರ್ಯಾಯ ರಸ್ತೆಗಳಲ್ಲಿ ಸಂಚರಿಸಬೇಕಿದೆ. ಎಲ್ಲ ವಾಹನಗಳು ಇದೇ ಮಾರ್ಗದಲ್ಲಿ ಸಂಚರಿಸುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಲಿದೆ. ಇದೇ ರೀತಿ ಸಿಲ್ಕ್ ಬೋರ್ಡ್‌ನಿಂದ ಬನ್ನೇರುಘಟ್ಟರಸ್ತೆ ಕಡೆ ಬರುವವರು ದಟ್ಟಣೆಯಲ್ಲಿ ಸಿಲುಕುವುದು ಅನಿವಾರ್ಯವಾಗಿದೆ.

ಜಯದೇವ ಮೇಲ್ಸೇತುವೆ ಬಳಿ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ- ನಾಗವಾರ ಮಾರ್ಗಗಳ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣವಾಗಲಿದೆ. ಇದಕ್ಕಾಗಿ ಮೇಲ್ಸೇತುವೆ ತೆರವು ಅನಿವಾರ್ಯವಾಗಿದೆ. ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟಕಡೆ ಹೋಗುವ ಅಂಡರ್‌ಪಾಸ್‌ನ ಮೇಲೆ ಒಂದೇ ಕಂಬಗಳಲ್ಲಿ ಮೆಟ್ರೊ ಹಾಗೂ ರಸ್ತೆ ಮಾರ್ಗ ನಿರ್ಮಾಣವಾಗಲಿದೆ.