ಬೆಂಗಳೂರು [ಅ.06]: ಮೈಸೂರು ಯುವ ದಸರಾ ವೇದಿಕೆಯಲ್ಲಿ ಪ್ರೇಮ ನಿವೇದನೆ ಮಾಡಿದ ಬಿಗ್‌ಬಾಸ್‌ ಖ್ಯಾತಿಯ ಚಂದನ್‌ ಶೆಟ್ಟಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ.

ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆ ಪದಾಧಿಕಾರಿಗಳು, ಚಂದನ್‌ ಶೆಟ್ಟಿ ಕುರಿತು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆ ಜಿಲ್ಲಾಧ್ಯಕ್ಷ ಕೆ.ಎನ್‌.ಜಗದೀಶ್‌ ಮಾತನಾಡಿ, ವಿಶ್ವ ವಿಖ್ಯಾತ ದಸರಾ ಅಂಗವಾಗಿ ನಡೆಯುತ್ತಿರುವ ಯುವ ದಸರಾ ಕಾರ್ಯಕ್ರಮವನ್ನು ಚಂದನ್‌ ಶೆಟ್ಟಿ ತಮ್ಮ ವೈಯಕ್ತಿಕ ವಿಚಾರಗಳಿಗೆ ಬಳಸಿಕೊಂಡಿದ್ದಾರೆ. ಅವರು ನಾಡಿನ ಸಂಸ್ಕೃತಿಯ ಪ್ರತೀಕವಾದ ದಸರಾದ ಸಾರ್ವಜನಿಕ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಚಂದನ್‌ಶೆಟ್ಟಿನಾಡಿನ ಜನರ ಕ್ಷಮೆ ಕೇಳಿದರೆ ಸರಿ ಹೋಗುವುದಿಲ್ಲ. ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು. ಇನ್ನು ಮುಂದೆ ಯಾವುದೇ ಕಾರ್ಯಕ್ರಮದಲ್ಲಿ ವೇದಿಕೆ ಹತ್ತಿದರೆ ಅವರ ಮುಖಕ್ಕೆ ಮಸಿ ಬಳಿಯುತ್ತೇವೆ. ಮೈಸೂರು ದಸರಾಕ್ಕೆ ಅವಮಾನ ಮಾಡಿರುವ ಚಂದನ್‌ಶೆಟ್ಟಿವಿರುದ್ಧ ಕೇಸು ದಾಖಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮತ್ತು ಜಿಲ್ಲಾಡಳಿತ ಯುವ ದಸರಾ ಉಪ ಸಮಿತಿ ಮತ್ತು ಚಂದನ್‌ ಶೆಟ್ಟಿ ವಿರುದ್ಧ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಯ ಕರ್ನಾಟಕ ಕಾರ್ಯಾಧ್ಯಕ್ಷ ಶ್ರೀನಿವಾಸ್‌, ಯೋಗಾನಂದ, ನಟರಾಜ್‌, ಪುಷ್ಪಾವತಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.