ಜಾರಕಿಹೊಳಿ ಕುಟುಂಬಕ್ಕೆ ತಪ್ಪಿದ ಮಂತ್ರಿಸ್ಥಾನ
* ಯಾವುದೇ ಸರ್ಕಾರವಿದ್ದರೂ ಜಾರಕಿಹೊಳಿ ಕುಟುಂಬಕ್ಕೆ ದಕ್ಕಿತ್ತು ಸಚಿವ ಸ್ಥಾನ
* ರಾಜ್ಯ ರಾಜಕೀಯದಲ್ಲೂ ಪ್ರಭಾವಿ ಕುಟುಂಬ
* ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಜಾರಕಿಹೊಳಿ ಸಹೋದರ ಶ್ರಮ ಅಲ್ಲಗಳೆಯುವಂತಿಲ್ಲ
ಭೀಮಶಿ ಭರಮಣ್ಣವರ
ಗೋಕಾಕ(ಆ.05): 2004ರಿಂದ ರಾಜ್ಯದಲ್ಲಿ ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬರಲಿ ಆ ಸರ್ಕಾರದಲ್ಲಿ ಜಾರಕಿಹೊಳಿ ಕುಟುಂಬದ ಒಬ್ಬರಾದರೂ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುತ್ತಲೇ ಬಂದಿದ್ದರು. ಆದರೆ ಪ್ರಥಮ ಬಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರಿಗೆ ಸಚಿವ ಸ್ಥಾನ ಕೈ ತಪ್ಪಿ ಹೋಗಿದ್ದು, ಇದು ರಾಜಕೀಯ ವಲಯದಲ್ಲಿ ಬಹಳಷ್ಟು ಚರ್ಚೆ ಹುಟ್ಟುಹಾಕಿದೆ.
ಜಾರಕಿಹೊಳಿ ಸಹೋದರರು ಬೆಳಗಾವಿ ಜಿಲ್ಲಾ ರಾಜಕೀಯದಲ್ಲಿ ಅಷ್ಟೇ ಅಲ್ಲ, ರಾಜ್ಯ ರಾಜಕೀಯದಲ್ಲೂ ಪ್ರಭಾವಿ ಕುಟುಂಬ. ಜಾರಕಿಹೊಳಿ ಕುಟುಂಬದ 5 ಜನ ಸಹೋದರರಲ್ಲಿ ಮೂರು ಜನ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿ ಬಿಜೆಪಿ ಶಾಸಕರಾಗಿದ್ದರೆ, ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಶಾಸಕರಷ್ಟೇ ಅಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸತೀಶ ಜಾರಕಿಹೋಳಿ ಸಚಿವರಾಗುತ್ತಲೇ ಬಂದಿದ್ದಾರೆ. ಇನ್ನು ಬಿಜೆಪಿ ಸರ್ಕಾರ ಬಂದರೆ ಬಾಲಚಂದ್ರ ಜಾರಕಿಹೊಳಿ ಸಚಿವರಾಗುತ್ತಲೇ ಬಂದಿದ್ದಾರೆ. ಇತ್ತೀಚೆಗೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಯಾದರೂ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದ್ರೂ ಜಾರಕಿಹೊಳಿ ಕುಟುಂಬದವರು ಸಚಿವರಾಗುವ ಪ್ರತೀತಿ ಬೆಳೆದುಕೊಂಡು ಬಂದಿತ್ತು. ಆದ್ರೆ ಈ ಪ್ರತೀತಿ ಸುಳ್ಳಾಗಿದ್ದು ಇಂದು ಹೊಸದಾಗಿ ರಚನೆಗೊಂಡ ಸಿಎಂ ಬಸವರಾಜ ಬೊಮ್ಮಯಿ ನೇತೃತ್ವದ ಸರ್ಕಾರದಲ್ಲಿ.
ಜಾರಕಿಹೊಳಿ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಎಂಟ್ರಿ..?
ಇನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಜಾರಕಿಹೊಳಿ ಸಹೋದರ ಶ್ರಮ ಅಲ್ಲಗಳೆಯುವಂತಿಲ್ಲ. ಇಂತಹ ಸಂದರ್ಭದಲ್ಲಿ ಕಾನೂನು ತೊಡಕು ಇರುವುದರಿಂದ ರಮೇಶ ಜಾರಕಿಹೊಳಿ ಬದಲು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ ಅದೂ ಸಹ ಹುಸಿಯಾಗಿದೆ.
ಸದ್ಯ ರಮೇಶ ಜಾರಕಿಹೋಳಿ ಸಿಡಿ ಪ್ರಕರಣ ಕೋರ್ಟ್‌ನಲ್ಲಿದ್ದು ಅದು ಕೆಲವೇ ದಿನಗಳಲ್ಲಿ ಇತ್ಯರ್ಥ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಮುಂದಿನ ಹಂತದ ಸಚಿವ ಸಂಪುಟದಲ್ಲಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಆಶ್ವಾಸನೆಯನ್ನು ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ. ಬೊಮ್ಮಾಯಿ ಸರ್ಕಾರದಲ್ಲಿ ಜಾರಕಿಹೊಳಿ ಸಹೋದರರು ಮತ್ತೆ ಸಚಿವರಾಗುತ್ತಾರಾ ಅಥವಾ ಇಲ್ಲವಾ ಎಂಬುದನ್ನು ಕಾಲವೇ ಉತ್ತರಿಸಲಿದೆ.
ಜಾರಕಿಹೋಳಿ ಕುಟುಂಬದವರು ಪಡೆದ ಖಾತೆಗಳ ವಿವಿರ
2004- ಜವಳಿ ಖಾತೆ. ಸತೀಶ್ ಜಾರಕಿಹೊಳಿ
2006-ಸಮಾಜ ಕಲ್ಯಾಣ ಖಾತೆ. ಬಾಲಚಂದ್ರ ಜಾರಕಿಹೊಳಿ
2008-ಪೌರಾಡಳಿತ ಖಾತೆ- ಬಾಲಚಂದ್ರ ಜಾರಕಿಹೊಳಿ
2011- ಪೌರಾಡಳಿತ ಖಾತೆ- ಬಾಲಚಂದ್ರ ಜಾರಕಿಹೊಳಿ
2012- ಪೌರಾಡಳಿತ ಖಾತೆ- ಬಾಲಚಂದ್ರ ಜಾರಕಿಹೊಳಿ
2013-ಸಣ್ಣ ಕೈಗಾರಿಕೆ ಖಾತೆ- ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ
2018-ಪೌರಾಡಳಿತ ಖಾತೆ- ರಮೇಶ್ ಜಾರಕಿಹೊಳಿ
2019-ಜನಸಂಪನ್ಮೂಲ ಖಾತೆ- ರಮೇಶ್ ಜಾರಕಿಹೊಳಿ
2021-ಯಾವ ಸಚಿವ ಸ್ಥಾನ ಇಲ್ಲ