ಮತ್ತೆ ಕೊರೋನಾ ಅಟ್ಟಹಾಸ: ಕರ್ನಾಟಕದ ಈ ಜಿಲ್ಲೆಯಲ್ಲೀಗ ಜನತಾ ಲಾಕ್‌ಡೌನ್‌..!


ಹೆಚ್ಚುತ್ತಿರುವ ಕೋವಿಡ್‌, ವಾರದಲ್ಲೇ 700 ದಾಟಿದ ಸೋಂಕಿತರು|ವಾರದಲ್ಲಿ ಸರಾಸರಿ ನಿತ್ಯ ಇಬ್ಬರ ಸಾವು| ಬಿಸಿ ಗಾಳಿ ಹಾಗೂ ಮಹಾಮಾರಿ ಕೊರೋನಾ ಮನೆ ಬಿಟ್ಟು ಹೊರಡೆ ಬಾರದ ಜನ| ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಕಳೆದೊಂದು ವಾರದಿಂದ ಬೆಳಗಿನ 11ರಿಂದ ಸಂಜೆ 5ರವರೆಗೂ ಜನರ ಸಂಚಾರವೇ ವಿರಳ| 
 

Janata Lockdown in Kalaburagi Due to Coronavirus and Temperature grg

ಕಲಬುರಗಿ(ಮಾ.29): ಬೇಸಿಗೆ ಉರಿ ಬಿಸಿಲು ಹಾಗೂ ಕೊರೋನಾ 2ನೇ ಅಲೆಯ ಆತಂಕ ಎರಡೂ ಸೇರಿ ಕಲಬುರಗಿ ನಗರವನ್ನು ‘ಜನತಾ ಲಾಕ್‌ಡೌನ್‌’ಗೆ ತಳ್ಳಿವೆ.

ಕಳೆದ 2 ದಿನದಿಂದ ಜನರೇ ಸ್ವಯಂ ಪ್ರೇರಿತರಾಗಿ ರಸ್ತೆ, ಮಾರುಕಟ್ಟೆಗಳಲ್ಲಿ ಗಿಜಿಗಿಜಿ ಎಂಬಂತೆ ಕಾಣುತ್ತಿಲ್ಲ. ವಾಹನ ಸಂಚಾರವೂ ತುಸು ತಗ್ಗಿದೆ. ಕಳೆದ 5 ದಿನದಿಂದ ಜಿಲ್ಲೆಯಲ್ಲಿ ಸತತ ಕೊರೋನಾ ಸೋಂಕು ಶತಕ ಬಾರಿಸುತ್ತಲೇ ಸಾಗಿದೆ. ಸಾವು- ನೋವಿನ ಸರಣಿಯೂ ಹಿಗ್ಗುತ್ತಿದೆ. ಈ ವರ್ಷದ ಎಲ್ಲಕ್ಕಿಂತ ಹೆಚ್ಚು ಕೊರೋನಾ ಸೋಂಕಿನ 149 ಪ್ರಕರಣಗಳು ದಾಖಲಾಗುವುರೊಂದಿಗೆ ನಿತ್ಯ ಸಾವಿನ ಪ್ರಕರಣಗಳೂ ವರದಿ ಆಗುತ್ತಿವೆ. ಈ ಬೆಳವಣಿಗೆ ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಲ್ಲಿ ಭೀತಿ ಸೃಷ್ಟಿಸಿದೆ.

ವಾರದಲ್ಲೇ 700 ಕೇಸ್‌:

2020ರ ಮಾಚ್‌ರ್‍ನಲ್ಲಿ ಕೊರೋನಾ ಸೋಂಕಿಗೆ ದೇಶದ ಮೊದಲ ಸಾವು ಸಂಭವಿಸುವ ಮೂಲಕ ಕಲಬುರಗಿ ಸುದ್ದಿಯಾಗಿತ್ತು. ಈ ತಿಂಗಳು ಕೊರೋನಾ ಇತಿಹಾಸದಲ್ಲಿ ದಾಖಲಾಗಿತ್ತು. ಈ ಬಾರಿಯೂ 2ನೇ ಅಲೆಯ ಆತಂಕ ಈ ತಿಂಗಳಲ್ಲೇ ದಟ್ಟವಾಗುತ್ತ ಸಾಗಿರೋದು ಆತಂಕಕ್ಕೆ ಕಾರಣವಾಗಿದೆ. ಕೇವಲ 6 ದಿನಗಳಲ್ಲಿ 700ಕ್ಕೂ ಹೆಚ್ಚು ಸೋಂಕು ಅಂಟಿಕೊಂಡಿದೆ. ನಿತ್ಯ ಸರಾಸರಿ ಇಬ್ಬರನ್ನು ಬಲಿ ಪಡೆಯುತ್ತಿರೋದು ನೋಡಿದರೆ ಸೋಂಕಿನ ಅಬ್ಬರ ಹೆಚ್ಚುವ ಎಲ್ಲಾ ಲಕ್ಷಣಗಳಿವೆ. ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಅರಿವು ಜನರಲ್ಲಿ ಮೂಡಿಸುವಲ್ಲಿ ಒತ್ತು ನೀಡುತ್ತಿದೆ.

ಕರ್ನಾಟಕಕ್ಕೆ ಕೊರೋನಾಘಾತ: ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ!

ಮಾ.29ರಂದು ಹೋಳಿ ಹಬ್ಬದ ಬಣ್ಣದಾಟ. ಈ ರಂಗಿನೋಕುಳಿಯಲ್ಲಿ ಕೈ ಕುಲುಕುವ, ಪರಸ್ಪರ ಮುಖಕ್ಕೆ ಬಣ್ಣ ಹಚ್ಚುವುದೇ ಹೆಚ್ಚು. ಇದರಿಂದ ಸೋಂಕು ಹೆಚ್ಚುವ ಅಪಾಯಗಳಿವೆ. ಸಾಮಾಜಿಕ ಅಂತರದಲ್ಲೇ ಹೋಳಿ ಆಟವಾಡಿರಿ, ಹೆಚ್ಚು ಗುಂಪುಗೂಡೋದು, ಪರಸ್ಪರ ಸ್ಪರ್ಶ ಬೇಡವೆಂಬ ಜಿಲ್ಲಾಡಳಿತ ಸಲಹೆ ನೀಡಿದೆ.

ತಗ್ಗುತ್ತಿದೆ ಗ್ರಾಹಕರ ಸಂಖ್ಯೆ

ಸೂಪರ್‌ ಮಾರ್ಕೆಟ್‌ನಲ್ಲಿ ಕಳೆದೊಂದು ವಾರದಿಂದ ಬೆಳಗಿನ 11ರಿಂದ ಸಂಜೆ 5ರವರೆಗೂ ಜನರ ಸಂಚಾರವೇ ವಿರಳವಾಗುತ್ತಿದೆ. ಬಿಸಿಲು ಹಾಗೂ ಸೋಂಕಿನ ಭೀತಿಯೇ ಕಾರಣ ಎನ್ನುತ್ತಿದ್ದಾರೆ ಇಲ್ಲಿನ ವರ್ತಕರು. ಕೊರೋನಾ ಸೋಂಕು ಹೆಚ್ಚುತ್ತಿರೋದು ಭೀತಿ ಹುಟ್ಟಿಸಿದೆ. ಬಿಸಿಲು ಬಸವಳಿಯುವಂತೆ ಮಾಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಜನ ಸಂಚಾರ ವಿರಳವಾಗಿದ್ದು, ಸಹಜವಾಗಿಯೇ ವ್ಯಾಪಾರ ತಗ್ಗಿದೆ ಎಂದು ಬಾಲಾಜಿ ಪೂನಮ್‌ ಚಂದ ಮಿಠಾಯಿ ಮಳಿಗೆಯ ಮಾಲೀಕರಾದ ರಾಜು ಹೇಳಿದ್ದಾರೆ.

ಕಲಬುರಗಿಯಲ್ಲಿ ಭೀತಿ ಕರಗಿಲ್ಲ

ಕಳೆದ ವರ್ಷದಂತೆ ಹೆಮ್ಮಾರಿ ಸೋಂಕು ನಗರದಲ್ಲಿ ಕುಣಿದರೆ ಹೇಗೆಂಬ ಭೀತಿಯಲ್ಲಿ ಜನತೆ ನಿಧಾನಕ್ಕೆ ಸಾಮಾಜಿಕ ಅಂತರ ಕಾಪಾಡುವ, ಮಾಸ್ಕ್‌ ಧಾರಿಗಳಾಗುವ, ಸ್ಯಾನಿಟೈಜರ್‌ ಕ್ರಮಗಳಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಬಿಸಿಲ ಉರಿಯೂ ಹೆಚ್ಚಿದೆ. ಬೆಳಗ್ಗೆ 8ಕ್ಕೇ ಸೂರ್ಯನ ಪ್ರಖರತೆಗೆ ಜನ ಕುಗ್ಗಿ ಹೋಗುತ್ತಿದ್ದಾರೆ. ಬಿಸಿ ಗಾಳಿಗೆ ಹೆದರಿ ಮನೆಯಿಂದ ಹೊರಗೆ ಬಾರದಂತಾಗಿದೆ. ಹೀಗಾಗಿ ಸದಾ ಜನ ಹಾಗೂ ವಾಹನಗಳಿಂದ ಗಿಜಿಗುಡುವ ಪ್ರಮುಖ ರಸ್ತೆಗಳು, ವೃತ್ತಗಳೂ ಬೆಳಗಿನ 11 ರಿಂದ ಸಂಜೆ 4ರವರೆಗೂ ಜನ- ವಾಹನ ಸಂಚಾರ ವಿರಳವಾಗಿ ಬಿಕೋ ಎನ್ನುತ್ತಿವೆ.
 

Latest Videos
Follow Us:
Download App:
  • android
  • ios