ಬೆಂಗಳೂರು(ಫೆ.12): ಕಳೆದ ಒಂದೂವರೆ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ನ ಅಂಡರ್‌ ಪಾಸ್‌ ನಿರ್ಮಿಸುವ ಕಾಮಗಾರಿ ಆರಂಭ ಇನ್ನೂ ನಾಲ್ಕು ತಿಂಗಳು ವಿಳಂಬವಾಗಲಿದೆ!

ರಾಷ್ಟ್ರೀಯ ಹೆದ್ದಾರಿ 4ರ ಜಾಲಹಳ್ಳಿ ಕ್ರಾಸ್‌ ಜಂಕ್ಷನ್‌ ಬಳಿ ಭಾರೀ ಪ್ರಮಾಣ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಪೀಣ್ಯ ಕೈಗಾರಿಕಾ ಪ್ರದೇಶ ಎರಡನೇ ಹಂತದ ರಿಂಗ್‌ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆ (ಎಂ.ಎಸ್‌.ರಸ್ತೆ)ಯಲ್ಲಿ ಸಾರ್ವಜನಿಕರು ಪ್ರತಿನಿತ್ಯ ಭಾರೀ ಸಂಚಾರ ದಟ್ಟಣ ಎದುರಿಸಬೇಕಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ 2016-17 ಹಾಗೂ 2017-18ನೇ ಸಾಲಿನ ರಾಜ್ಯ ಸರ್ಕಾರದ .57 ಕೋಟಿ ಅನುದಾನದಲ್ಲಿ ಗ್ರೇಡ್‌ ಸಪರೇಟರ್‌ (ಅಂಡರ್‌ ಪಾಸ್‌) ನಿರ್ಮಿಸುವ ಕಾಮಗಾರಿ ಕೈಗೊಳ್ಳುವುದಕ್ಕೆ ತೀರ್ಮಾನಿಸಿತ್ತು.

ಶವ ಸಂಸ್ಕಾರಕ್ಕೆ ಮೃತ ವ್ಯಕ್ತಿಯ ಆಧಾರ್‌ ಕಡ್ಡಾಯವಲ್ಲ: ಸ್ಪಷ್ಟನೆ

ಭೂ ಸ್ವಾದೀನ ಪ್ರಕ್ರಿಯೆ ವಿಳಂಬವಾದ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಕಾಮಗಾರಿ ಆರಂಭಿಸುವುದಕ್ಕೆ ಸಾಧ್ಯವಾಗಿಲ್ಲ. ಕಳೆದ ಜನವರಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅವಶ್ಯಕವಾಗಿರುವ ಭೂಮಿಯನ್ನು ಬಿಬಿಎಂಪಿ ಗುರುತಿಸಿ 49 ಆಸ್ತಿ ಮಾಲಿಕರಿಗೆ ನೊಟೀಸ್‌ ನೀಡಿದೆ.

ಆಸ್ತಿಗೆ ಸಂಬಂಧಿಸಿದ ದಾಖಲೆಗಳಾದ ಆಸ್ತಿಯ ಟೈಟಲ್‌, ಸಂಪೂರ್ಣ ಖಾತಾ ಸರ್ಟಿಫಿಕೇಟ್‌ ಹಾಗೂ ಖಾತಾ ಎಕ್ಸ್‌ಟ್ರಾಕ್ಟ್, ಮ್ಯುಟೀಷನ್‌ ಪತ್ರ, ತೆರಿಗೆ ಪಾವತಿಸಿದ ರಸೀದಿ, ಕೃಷಿಯೇತರ ಬಳಕೆಗಾಗಿ ಭೂ ಪರಿವರ್ತನಾ ಆದೇಶ ಪ್ರತಿ, ಕಂದಾಯ ನಕ್ಷೆ, ಆಕಾರ್‌ ಬಂದ್‌ ಹಾಗೂ ಮಂಜುರಾದ ಕಟ್ಟಡ ನಕ್ಷೆಯನ್ನು ಫೆ.3ರೊಳಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಎಲ್ಲ ಪ್ರಕ್ರಿಯೆ ಪೂರ್ಣಕ್ಕೆ ಇನ್ನೂ 4 ತಿಂಗಳು ಬೇಕಾಗಲಿದೆ. ಬಳಿಕ ಕಾಮಗಾರಿ ಆರಂಭಿಸುವುದಾಗಿ ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದಾಯ 3 ಲಕ್ಷಕ್ಕೂ ಕಡಿಮೆಯಾ..? ಕೋರ್ಟ್ ವ್ಯವಹಾರ ಫ್ರೀ

ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರಿಸುವ ಪರ್ಯಾಯ ಮಾರ್ಗಗಳ ಅಭಿವೃದ್ಧಿ ಉದ್ದೇಶದಿಂದ ಸಹ ಈ ಅಂಡರ್‌ ಪಾಸ್‌ ನಿರ್ಮಾಣ ಮಹತ್ವ ಪಡೆದು ಕೊಂಡಿದೆ. ನಗರದ ಪಶ್ಚಿಮ ಭಾಗದ ಜನರು ವಿಮಾನ ನಿಲ್ದಾಣಕ್ಕೆ ತೆರಳುವುದಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಬಿಬಿಎಂಪಿ ಜಾಲಹಳ್ಳಿ ಕ್ರಾಸ್‌ ವೃತ್ತದಲ್ಲಿ ಕೆಳಸೇತುವೆ ನಿರ್ಮಾಣ, ಸುಬ್ರತೋ ಮುಖರ್ಜಿ ಮುಖ್ಯ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಂಡಿತ್ತು.

 

ಪಿಜಿಬಿ ಎಂಜಿನಿಯರಿಂಗ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕಳೆದ 2019ರ ಜೂನ್‌ನಲ್ಲಿ ಕಾರ್ಯಾದೇಶ ನೀಡಲಾಗಿದೆ. ಯೋಜನೆಗೆ ಬೇಕಾದ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭವಾಗಿಲ್ಲ. ನಾಲ್ಕು ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಆರ್‌.ಆರ್‌.ನಗರ ವಲಯ ರಸ್ತೆ ಮೂಲ ಸೌಕರ್ಯ ವಿಭಾಗದ ಸಹಾಯಕ ಕಾರ್ಯಪಾಲ ಎಂಜಿನಿಯರ್‌ ನಂದೀಶ್‌ ತಿಳಿಸಿದ್ದಾರೆ.

ಯೋಜನೆ ವಿವರ

ಯೋಜನಾ ಮೊತ್ತ: .57.22 ಕೋಟಿ

ಒಟ್ಟು ಪಥ: 4

ಅಂಡರ್‌ ಉದ್ದ: 70 ಮೀ.

ಅಂಡರ್‌ ಪಾಸ್‌ ಎತ್ತರ: 4.5 ಮೀ.

ಅಂಡರ್‌ ಪಾಸ್‌ ರಾರ‍ಯಂಪ್‌ನ ಒಟ್ಟು ಉದ್ದ: 306.16 ಮೀ.

ಭೂಮಿ ಸ್ವಾಧೀನ : 10,432.78 ಚದರ ಅಡಿ

ಇತರೆ: 4 ಬಸ್‌ ನಿಲ್ದಾಣ, 2 ಶೌಚಾಲಯ, ಎರಡು ಭಾಗದಲ್ಲಿ ಸರ್ವಿಸ್‌ ರಸ್ತೆ.

ವಾಹನ, ಪಾದಚಾರಿಗಳ ಸಮೀಕ್ಷೆ ವಿವರ

*ಬೆಳಗ್ಗೆ 9ರಿಂದ 10ರವರೆಗೆ ಪಿಕ್‌ ಅವರ್‌ನಲ್ಲಿ ಗಂಟೆಗೆ 15,457 ವಾಹನ, 4,832 ಪಾದಚಾರಿಗಳು ಸಂಚಾರ

*ಸಂಜೆ 6ರಿಂದ 7ರ ಅವಧಿಯಲ್ಲಿ 15,934 ವಾಹನ, ಸಾವಿರಕ್ಕೂ ಹೆಚ್ಚು ಪಾದಚಾರಿಗಳು ಸಂಚಾರ

*ಬೆಳಗ್ಗೆ 6ರಿಂದ ರಾತ್ರಿ 10ರ ಅವಧಿಯಲ್ಲಿ ಗಂಟೆಗೆ 10 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚಾರ

*ಪಿಕ್‌ ಅವಧಿಯಲ್ಲಿ ಜಂಕ್ಷನ್‌ನಲ್ಲಿ ವಾಹನ ವೇಗ ಗಂಟೆಗೆ 15 ರಿಂದ 20 ಕಿ.ಮೀ. ಇಳಿಕೆ

*ಪೀಣ್ಯ ಕೈಗಾರಿಕಾ ಪ್ರದೇಶ ಎರಡನೇ ಹಂತದ ರಿಂಗ್‌ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆ (ಎಂ.ಎಸ್‌.ರಸ್ತೆ)ಯ 150 ರಿಂದ 180 ಮೀಟರ್‌ ಉದ್ದ ರಸ್ತೆಯಲ್ಲಿ ಗಂಟೆಗೆ 2,803 ವಾಹನಗಳು ಸಂಚಾರ.

-ವಿಶ್ವನಾಥ ಮಲೇಬೆನ್ನೂರು