* ನೂತನ ಸಚಿವ ಸಂಪುಟದಲ್ಲಿ ಹಿರಿಯರಿಗೂ ಸ್ಥಾನಮಾನ * ಅರವಿಂದ ಬೆಲ್ಲದ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ: ಶೆಟ್ಟರ್‌ *  ಬಸವರಾಜ ಬೊಮ್ಮಾಯಿ ಸಹ ಉತ್ತಮ ಕೆಲಸ ಮಾಡಲಿದ್ದಾರೆ 

ಹುಬ್ಬಳ್ಳಿ(ಆ.08):ಬಿಜೆಪಿಯಲ್ಲಿ ಹಿರಿಯರನ್ನು ಕಡೆಗಣಿಸಿಲ್ಲ. ಅವರಿಗೂ ಅನೇಕ ಸ್ಥಾನಮಾನ ನೀಡಿದ್ದಾರೆ. ಹೀಗಾಗಿ ಹಿರಿಯರನ್ನು ಕಡೆಗಣಿಸುತ್ತಿದ್ದಾರೆ ಎನ್ನುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ. 

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೂತನ ಸಚಿವ ಸಂಪುಟದಲ್ಲಿ ಹಿರಿಯರಿಗೂ ಸ್ಥಾನಮಾನ ನೀಡಲಾಗಿದೆ. ಆರ್‌. ಅಶೋಕ, ಈಶ್ವರಪ್ಪ ಸೇರಿದಂತೆ ಹಲವರಿಗೆ ಸಚಿವ ಸ್ಥಾನ ನೀಡಲಾಗಿದೆ. ಬಿ.ಎಸ್‌. ಯಡಿಯೂರಪ್ಪ ಅವರು ಈ ವರೆಗೂ ಜನಪರವಾದ ಆಡಳಿತ ನೀಡಿದ್ದಾರೆ. ಅದರ ಅಡಿಯಲ್ಲಿ ಬಸವರಾಜ ಬೊಮ್ಮಾಯಿ ಸಹ ಉತ್ತಮ ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಕಾಂಗ್ರೆಸ್ ನಾಯಕರ ಜೊತೆ ಶೆಟ್ಟರ್‌ ಗೌಪ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

ಬಿಜೆಪಿಗೆ ತನ್ನದೇ ಆದಂತಹ ತತ್ವ-ಸಿದ್ಧಾಂತವಿದೆ. ಅದರ ಅಡಿಯಲ್ಲೇ ಬೊಮ್ಮಾಯಿ ಅವರು ಕೆಲಸ ಮಾಡಲಿ. ಬರುವ ದಿನಗಳಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಅಭಿವೃದ್ಧಿ ಮಾಡಲಿ. ರಾಜ್ಯದಲ್ಲಿ ಅಪೂರ್ಣವಾದಂತಹ ಕೆಲಸಗಳನ್ನು ಮುಂದುವರಿಸುವಂತೆ ಸಿಎಂ ಬೊಮ್ಮಾಯಿ ಅವರಿಗೆ ನಿರ್ದೇಶನ ನೀಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

ಮುರುಗೇಶ ನಿರಾಣಿ ಹಾಗೂ ಶಂಕರ ಪಾಟೀಲ ಮುನೇನಕೊಪ್ಪ ಸಚಿವರಾದ ಆನಂತರ ಪ್ರಥಮ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದಾರೆ. ಹೀಗಾಗಿ ಅವರಿಗೆ ನಾನು ಸಹ ಅಭಿನಂದನೆ ಸಲ್ಲಿಸಿದ್ದೇನೆ. ಶಾಸಕ ಅರವಿಂದ ಬೆಲ್ಲದ ಅಸಮಾಧಾನದ ಹೇಳಿಕೆ ನೀಡುತ್ತಿರುವ ಹಿನ್ನೆಲೆ, ಈ ಬಗ್ಗೆ ನಾನು ಯಾವುದೇ ಚರ್ಚೆ ಮಾಡಲ್ಲ. ಆ ಕುರಿತು ಪ್ರತಿಕ್ರಿಯೆಯನ್ನು ನೀಡಲ್ಲ ಎಂದು ತಿಳಿಸಿದ್ದಾರೆ.