ಯಾದಗಿರಿಯಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ, ಕಾರು, ಬೈಕ್ ರ್‍ಯಾಲಿ, ರಾಜೂಗೌಡ ಸಖತ್ ಡ್ಯಾನ್ಸ್
* ಯಾದಗಿರಿಯಲ್ಲಿ ಅದ್ದೂರಿ ಬಸವೇಶ್ವರ ಜಯಂತಿ ಆಚರಣೆ
* ಶಾಸಕ ರಾಜೂಗೌಡ ಸಖತ್ ಡ್ಯಾನ್ಸ್
* ಬೃಹತ್ ಕಾರು ರ್‍ಯಾಲಿ ಮೂಲಕ ಬಸವೇಶ್ವರ ಭಾವಚಿತ್ರ ಮೆರವಣಿಗೆ
ವರದಿ: ಪರಶುರಾಮ್ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ, (ಮೇ.03): ಇಂದು(ಮಂಗಳವಾರ) ಜಗಜ್ಯೋತಿ ಬಸವೇಶ್ವರ ಜಯಂತ್ಯೋತ್ಸವ ಅದ್ಧೂರಿಯಾಗಿ ನಡೆದಿದೆ. ದಗಿರಿಯಲ್ಲಿಯೂ ಕೂಡ ಬಸವ ಜಯಂತಿ ಅದ್ದೂರಿಯಾಗಿ ಜರುಗಿತು. ಯಾದಗಿರಿ ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ ಹುಣಸಗಿ ಹಾಗೂ ವಡಿಗೇರಾ ತಾಲೂಕಿನಲ್ಲಿ ಬಸವೇಶ್ವರ ಭಾವಚಿತ್ರವನ್ನು ಬೃಹತ್ ಮೆರವಣಿಗೆ ಮಾಡಿ ಬಸವಾಭಿಮಾನಿಗಳು ಬಸವ ಜಯಂತಿ ಆಚರಿಸಿದರು.
ಸುರಪುರದ ಶಾಸಕ ರಾಜೂಗೌಡ ಸಖತ್ ಡ್ಯಾನ್ಸ್
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ರಂಗಂಪೇಠೆಯಲ್ಲಿ ತಾಲೂಕಾ ವೀರಶೈವ ಲಿಂಗಾಯತ ಮಹಾಸಭಾದ ವತಿಯಿಂದ ಬಸವೇಶ್ವರ ಜಯಂತಿಯನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುರಪುರ ಶಾಸಕ ರಾಜೂಗೌಡ ಹಲವು ಮುಖಂಡರೊಂದಿಗೆ ಸಖತ್ ಸ್ಟೇಪ್ ಹಾಕಿದರು. ಇದೇ ರೀತಿಯಲ್ಲಿ ಹುಣಸಗಿ ತಾಲೂಕಿನಲ್ಲಿಯೂ ಕೂಡ ಟ್ರ್ಯಾಕ್ಟರ್ ನಲ್ಲಿ ಬಸವೇಶ್ವರ ಭಾವಚಿತ್ರ ಮೆರವಣಿಗೆ ಮಾಡಿದರು. ಇವತ್ತು ರಂಜಾನ್ ಹಬ್ಬವೂ ಇರುವುದರಿಂದ ಬಸವನ ಭಕ್ತರು ಮತ್ತು ಮುಸಲ್ಮಾನ ಬಾಂಧವರ ಪರಸ್ಪರ ಕೈ ಬೀಸಿ ಶುಭಾಶಯ ಕೋರಿದರು.
ಗುಲಾಬಿ ಹೂವು ನೀಡಿ ರಂಜಾನ್ ಶುಭ ಕೋರಿದ ಹಿಂದುಗಳು ,ಯಾದಗಿರಿಯಲ್ಲಿ ಭಾವೈಕ್ಯತೆ ಸಂದೇಶ
ಗಮನಸೆಳೆದ ಕಾರು ರ್‍ಯಾಲಿ
ಯಾದಗಿರಿ ನಗರದಲ್ಲಿ ಸಂಭ್ರಮದ ಬಸವ ಜಯಂತಿ ಆಚರಣೆ ಮಾಡಲಾಯಿತು. ಯಾದಗಿರಿ ನಗರದ ಪ್ರಮುಖ ಬೀದಿಗಳಾದ ಗಂಜ್ ಸರ್ಕಲ್ ನಿಂದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಲ್, ಸುಭಾಶ್ ಸರ್ಕಲ್ ಹಾಗೂ ಡಿಗ್ರಿ ಕಾಲೇಜು ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಕಾರು ರ್‍ಯಾಲಿ ನಡೆಯಿತು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ನಗರಸಭೆ ಅಧ್ಯಕ್ಷ ಸುರೇಶ್ ಅಂಬಿಗೇರ್ ಸೇರಿದಂತೆ ಸಾವಿರಾರು ಯುವಕರು ಕಾರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ಬಸವೇಶ್ವರರ ಭಾವಚಿತ್ರ ಅದ್ದೂರಿ ಮೆರವಣಿಗೆ ಮಾಡಲಾಯಿತು. ಯಾದಗಿರಿ ಜಿಲ್ಲಾಡಳಿತ ವತಿಯಿಂದಲೂ ಬಸವೇಶ್ವರ ಜಯಂತ್ಯೋತ್ಸವ ಆಚರಣೆ ಮಾಡಲಾಯಿತು. ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ್, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಬಸವ ಭಕ್ತರು ಭಾಗವಹಿಸಿದ್ದರು.
ಶಹಾಪುರದಲ್ಲಿ ಬೈಕ್ ರ್‍ಯಾಲಿ
ಇವತ್ತು ಯಾದಗಿರಿ ಜಿಲ್ಲೆಯಾದ್ಯಂತ ಬಸವ ಜಯಂತಿಯ ಹಬ್ಬದ ಸಡಗರ ಮನೆ ಮಾಡಿತ್ತು. ಅದೇ ರೀತಿಯಲ್ಲಿ ಶಹಾಪುರ ನಗರದಲ್ಲಿ ನೂರಾರು ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಶಹಾಪುರ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ಮೂಲಕ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಿದರು. ಬಸವ ಜಯಂತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಿಡಿದು ಅಪ್ಪು ಅಭಿಮಾನಿಗಳು ಅಭಿಮಾನ ಮೆರೆದರು.