ತುಮಕೂರು(ಆ.27): ಗೊಲ್ಲ (ಯಾದವ) ಸಮುದಾಯವನ್ನು ಪರಿಶಿಷ್ಟವರ್ಗ (ಎಸ್‌ಟಿ)ದ ವ್ಯಾಪ್ತಿಗೆ ಸೇರಿಸುವ ನನ್ನ ಯತ್ನಕ್ಕೆ ಈಗ ರಹದಾರಿ ಸಿಕ್ಕಿದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಯಾದವ ಸಂಘದಿಂದ ಆಯೋಜಿಸಿದ್ದ ಶ್ರೀಕೃಷ್ಣಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಶ್ರೀಕೃಷ್ಣನ ಸಂದೇಶವನ್ನು ಪಾಲಿಸಬೇಕಿದೆ. ಎಲ್ಲಿ ಅಧರ್ಮ ಮೆರೆಯುತ್ತದೆಯೋ ಅಲ್ಲಿ ಧರ್ಮ ಪ್ರತಿಷ್ಠಾಪನೆಗಾಗಿ ಮತ್ತೆಮತ್ತೆ ಹುಟ್ಟುತ್ತೇನೆ ಎಂಬ ಕೃಷ್ಣನ ಸಂದೇಶ ಎಲ್ಲರಿಗೂ ಅನ್ವಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಎಸ್‌ಟಿ ಮೀಸಲಾತಿಯಡಿ ಸೌಲಭ್ಯ:

ಯಾದವ ಜನಾಂಗವನ್ನು ಎಸ್‌ಟಿ ಮೀಸಲಾತಿಯಡಿ ತರಬೇಕೆನ್ನುವ ನನ್ನ ಪ್ರಯತ್ನ ಬಹುದಿನಗಳ ಕನಸು. ಹಟ್ಟಿಗಳು ಈಗಲೂ ಶತಮಾನದ ಹಿಂದಿನ ಸ್ಥಿತಿಯಲ್ಲಿವೆ. ಮೀಸಲಾತಿಯಡಿ ಈ ಸಮುದಾಯಕ್ಕೆ ಸೌಲಭ್ಯ ಸಿಗಬೇಕಿರುವುದು ನ್ಯಾಯಸಮ್ಮತ. ಜನಾಂಗದ ಧಾರ್ಮಿಕ ಆಚರಣೆಯಿಂದ ಎಸ್‌ಟಿ ವ್ಯಾಪ್ತಿಗೆ ಸೇರಿಸುವಲ್ಲಿ ಗೊಂದಲವಿದೆ. ಆದರೆ ಈ ಬಾರಿ ರಾಜ್ಯಹಾಗೂ ಕೇಂದ್ರ ಸರ್ಕಾರ ನಮ್ಮದೆ ಇರುವುದರಿಂದ ಮೀಸಲಾತಿ ವ್ಯಾಪ್ತಿಗೆ ಸೇರಿಸಲು ರಹದಾರಿ ದೊರೆತಿದೆ ಎಂದರು.

ಕೇಂದ್ರದ ನೆರೆ ಪರಿಹಾರಕ್ಕೆ ನಮ್ಮ ವರದಿ ಬೇಕು:

ರಾಜ್ಯದಲ್ಲಿ ಎಂದೂ ಕಂಡರಿಯದ ನೆರೆಯಿಂದ ಉತ್ತರ ಕನ್ನಡ ಜಿಲ್ಲೆ ತತ್ತರಿಸಿದೆ. ಕೇಂದ್ರ ಸರ್ಕಾರವು ನೆರೆ ಹಾವಳಿಯಿಂದಾದ ಹಾನಿ ಅಂದಾಜಿನ ಅಧಿಕೃತ ವರದಿಯನ್ನು ನಾವು ಸಲ್ಲಿಸಿದ ನಂತರ ಪರಿಹಾರ ಘೋಷಣೆ ಮಾಡಲಿದೆ. ಇದಕ್ಕಾಗಿ ಶಾಸಕರ ತಂಡಗಳನ್ನು ರಚಿಸಿ ನೆರೆಪೀಡಿತ ಪ್ರದೇಶಗಳಿಗೆ ಕಳಿಸಲಾಗಿತ್ತು. ಈಗ ವರದಿ ಸಿದ್ಧಗೊಂಡಿದೆ ಎಂದರು.

ತುಮಕೂರು ಜಿಲ್ಲೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎತ್ತಿನಹೊಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆ ಈ ತಾಲೂಕಿನಲ್ಲಿ ಸಾಗಿದ್ದರೂ ತಾಲೂಕಿಗೆ ವಂಚಿಸಿ ಬೇರೆಡೆ ಕೊಂಡೊಯ್ಯುವ ಕ್ರಮಕ್ಕೆ ನಾವು ತಡೆಹಾಕಿ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಈಗ ಸರ್ಕಾರ ಬದಲಾದ ನಂತರ ಮಾತುಕತೆಗೆ ಬಂದಿದ್ದು, ಕ್ಷೇತ್ರದ ಬೋರಣಕಣಿವೆ ಹಾಗೂ ಬುಕ್ಕಾಪಟ್ಟಣ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸುವ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ತಾಪಂ ಅಧ್ಯಕ್ಷೆ ಚೇತನಾ ಗಂಗಾಧರ್‌, ಮಾಜಿ ಶಾಸಕ ಬಿ.ಲಕ್ಕಪ್ಪ, ಯಾದವ ಯುವ ಸೇನೆ ಅಧ್ಯಕ್ಷ ಶಿವಣ್ಣ, ಯಶೋದಮ್ಮ, ಈಶ್ವರಯ್ಯ ಮುಂತಾದವರಿದ್ದರು.

ಶೀಘ್ರದಲ್ಲಿ ಹೇಮಾವತಿ ನೀರು

ತಾಲೂಕಿನ 26 ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ನೆನೆಗುದಿಗೆ ಬಿದ್ದಿದೆ. ನಾನು ಶಾಸಕನಾದ ನಂತರ ಹಲವು ಅಡತಡೆಗಳನ್ನು ಮೀರಿ ಕಾಮಗಾರಿ ಚುರುಕಿಗೆ ಯತ್ನಿಸಿದ್ದೆ. ಈಗ ಸರ್ಕಾರ ನಮ್ಮದಿದೆ. ನಮಗೆ ಹೆಚ್ಚಿನ ಅಧಿಕಾರವೂ ಸಿಕ್ಕಿದೆ. ಒಂದೆರಡು ತಿಂಗಳಲ್ಲಿ ತಾಲೂಕಿನ ಸಾಸಲು ಕೆರೆಗೆ ಹೇಮಾವತಿ ನೀರು ಹರಿಸಲಿದ್ದೇವೆ. ಇನ್ನುಳಿದ ಯೋಜನೆ ಪೂರ್ಣಗೊಳಿಸಲು ಅರಣ್ಯ ಇಲಾಖೆ ಜಮೀನನ್ನು ಸ್ವಾಧೀನಕ್ಕೆ ಪಡೆಯಬೇಕು ಹಾಗೂ ಪರ್ಯಾಯವಾಗಿ ಕಂದಾಯ ಜಮೀನನ್ನು ನೀಡುವ ಪ್ರಕ್ರಿಯೆಯಿದ್ದು, ಮುಂದಿನ ವರ್ಷದಲ್ಲಿ ಉಳಿದ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಮಾಧುಸ್ವಾಮಿ ಭರವಸೆ ನೀಡಿದರು.