ಹುಬ್ಬಳ್ಳಿ :  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯೂ ಸೇರಿದಂತೆ ಜೆಡಿಎಸ್‌- ಕಾಂಗ್ರೆಸ್‌ ಪಕ್ಷದ ಮುಖಂಡರು ತಂಗಿದ್ದ ಡೆನಿಸನ್ಸ್‌ ಹಾಗೂ ಕಾಟನ್‌ ಕೌಂಟಿ ಕ್ಲಬ್‌ ಹೋಟೆಲ್‌ ಮೇಲೆ ಸೋಮವಾರ ರಾತ್ರಿ 9.30ಕ್ಕೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಮತ್ತು ಎಫ್‌ಎಸ್‌ಟಿ ಅಧಿಕಾರಿಗಳು ತಡರಾತ್ರಿ 2 ಗಂಟೆಯವರೆಗೂ ಪರಿಶೀಲನೆ ನಡೆಸಿ ಹಲವು ಸಾಮಗ್ರಿ ವಶಕ್ಕೆ ಪಡೆದಿದ್ದಾರೆ.

ಈ ವೇಳೆ ಗೋಕುಲ ರಸ್ತೆಯ ಕಾಟನ್‌ ಕೌಂಟಿ ಕ್ಲಬ್‌ ನ ಕೊಠಡಿ ಸಂಖ್ಯೆ 307ರಲ್ಲಿ ಇರಿಸಲಾಗಿದ್ದ, ಸಿ.ಎಸ್‌. ಶಿವಳ್ಳಿ ಅವರ 11 ಭಾವಚಿತ್ರ, ಬಂಗಾರದ ಬಣ್ಣ ಲೇಪಿಸಿರುವ 50 ಅರಿಷಿಣ, ಕುಂಕುಮದ ತಟ್ಟೆಗಳು, ಕುಂದಗೋಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 51ರಿಂದ 57ರವರೆಗಿನ ಒಟ್ಟು 7 ಮತದಾರರ ಪಟ್ಟಿಗಳು ಹಾಗೂ ಕಾಂಗ್ರೆಸ್‌ ಪಕ್ಷದ ಚಿಹ್ನೆ ಹೊಂದಿದ್ದ ಕೇಸರಿ, ಬಿಳಿ, ಹಸಿರು ವರ್ಣದ ಟೊಪ್ಪಿ ವಶಪಡಿಸಿಕೊಳ್ಳಲಾಗಿದೆ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರ ಪರವಾಗಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಇವುಗಳನ್ನು ಸಂಗ್ರಹಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಶಿವಕುಮಾರ ಚಂದ್ರಶೇಖರ್‌ ಗೋಕಾವಿ ಎಂಬುವವರ ವಿರುದ್ಧ ಗೋಕುಲ ರಸ್ತೆಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.