ಬೆಂಗಳೂರು(ಜು.09): ಕೊರೋನಾ ವೈರಸ್‌ ಸೋಂಕು ಹರಡುವಿಕೆ ಸಂದರ್ಭದಲ್ಲಿ ರಾಜಕೀಯ ದುರುದ್ದೇಶದಿಂದ ಒಂದು ಕೋಮಿನ ವಿರುದ್ಧ ಆರೋಪ ಮಾಡಲಾಗಿತ್ತು. ಅದಕ್ಕೆ ಅವಕಾಶ ನೀಡುವುದಿಲ್ಲ. ಎಲ್ಲರ ಹಿತ ಕಾಯಲು ಕಾಂಗ್ರೆಸ್‌ ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬುಧವಾರ ನಗರದ ನಾಗವಾರದಲ್ಲಿರುವ ಅರೇಬಿಕ್‌ ಕಾಲೇಜಿನಲ್ಲಿ ಮುಸ್ಲಿಂ ಧರ್ಮಗುರು ಕರ್ನಾಟಕದ ಅಮಿರ್‌-ಇ-ಷರಿಯತ್‌ ಮುಫ್ತಿ ಸಗೀರ್‌ ಅಹಮದ್‌ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ವಿಶ್ವವನ್ನು ಕಾಡುತ್ತಿರುವ ಕೊರೋನಾ ಮಹಾಮಾರಿಯಿಂದ ಮುಕ್ತಿ ನೀಡುವಂತೆ ಧರ್ಮಗುರುಗಳು ಅಲ್ಲಾಹುವನ್ನು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಕೊರೋನಾ ಆರ್ಭಟ: ಹೋಟೆಲ್ ಬಂದ್‌ ಮಾಡಲು ನಿರ್ಧಾರ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್‌ ಅವರು, ಸಮಾಜದ ಎಲ್ಲಾ ವರ್ಗದವರನ್ನು ಒಂದೇ ರೀತಿ ಕಾಣಬೇಕು. ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈ ಗೊಳ್ಳುತ್ತದೆ ಎಂದು ಹೇಳಿದರು.

ಅರೇಬಿಕ್‌ ವಿದ್ಯಾ ಸಂಸ್ಥೆ ಧರ್ಮ ಹಾಗೂ ಶಾಂತಿಯನ್ನು ಕಾಪಾಡಲು ಇರುವ ಪವಿತ್ರ ಸಂಸ್ಥೆಯಾಗಿದೆ. ನಾನು ಎಲ್ಲ ಧರ್ಮಗಳನ್ನು ನಂಬಿ ಗೌರವಿಸುತ್ತ ಬಂದಿದ್ದು, ಜಾತ್ಯತೀತ ತತ್ವಕ್ಕೆ ಒತ್ತುಕೊಟ್ಟಿದ್ದೇನೆ.

'ಕೊರೋನಾ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಆಸ್ಪತ್ರೆ'

ಎಲ್ಲ ಧರ್ಮಗುರುಗಳ, ಗುರು ಹಿರಿಯರ ಆಶೀರ್ವಾದ ಪಡೆದಿದ್ದೇನೆ ಎಂದ ಅವರು, ಕೊರೋನಾ ಕಾಲದಲ್ಲಿ ಮನುಕುಲದ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ. ಎಲ್ಲ ಧರ್ಮದ ಉತ್ತಮ ವಿಚಾರ, ಭಾವನೆ ಜತೆ ಕಾಂಗ್ರೆಸ್‌ ನಿಲ್ಲುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.