ಕೆ.ಎನ್.ರಾಜಣ್ಣ ನಾಲಿಗೆ ಹಿಡಿದುಕೊಳ್ಳುವುದು ಒಳಿತು : ಜೆಡಿಎಸ್ ಮುಖಂಡ
ಹಕಾರ ಸಚಿವ ಕೆ.ಎನ್.ರಾಜಣ್ಣನವರು ನಾಲಿಗೆಯನ್ನು ಮನಸ್ಸಿಗೆ ಬಂದಂತೆ ಹರಿಯಬಿಡದೇ, ಬಹಳ ವಿವೇಕದಿಂದ ಬಳಸುವುದು ಒಳಿತು ಎಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದ್ದಾರೆ.
ತುರುವೇಕೆರೆ : ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ನಾಲಿಗೆಯನ್ನು ಮನಸ್ಸಿಗೆ ಬಂದಂತೆ ಹರಿಯಬಿಡದೇ, ಬಹಳ ವಿವೇಕದಿಂದ ಬಳಸುವುದು ಒಳಿತು ಎಂದು ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ರಾಜಣ್ಣನವರು ಪದೇ ಪದೇ ಲಘುವಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆಯೂ ದೇವೇಗೌಡರ ಬಗ್ಗೆ ಬಹಳ ಕೆಟ್ಟ ಪದಗಳನ್ನು ಬಳಸಿ, ರಾಜ್ಯದ ಜನರಿಂದ ಬೈಸಿಕೊಂಡಿದ್ದ ರಾಜಣ್ಣನವರು ತದ ನಂತರ ನೇರವಾಗಿ ದೇವೇಗೌಡರ ಕ್ಷಮೆಯಾಚಿಸುವುದಾಗಿ ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದರು.
ಪುನಃ ತಮ್ಮ ನಾಲಿಗೆಯನ್ನು ಹರಿಬಿಟ್ಟಿರುವ ರಾಜಣ್ಣನವರು ದೇವೇಗೌಡರ ಆಯಸ್ಸು ಮತ್ತು ವಯಸ್ಸಿನ ಬಗ್ಗೆ ಬಹಳ ಲಘುವಾಗಿ ಮಾತನಾಡಿ ತಮ್ಮ ಸಂಸ್ಕೃತಿ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ. ೯೨ ವರ್ಷ ವಯಸ್ಸಾಗಿದ್ದರೂ ಸಹ ದೇವೇಗೌಡರ ಜೀವ ಇಂದಿಗೂ ರಾಜ್ಯದ ರೈತರಿಗಾಗಿ ಮಿಡಿಯುತ್ತಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ದೇವೇಗೌಡರ ಕೊಡುಗೆ ಅಪಾರ. ಇಂತಹ ವ್ಯಕ್ತಿತ್ವವುಳ್ಳ ದೇವೇಗೌಡರ ಬಗ್ಗೆ ಮಾತನಾಡುವುದು ಸಚಿವ ಸ್ಥಾನಕ್ಕೆ ಗೌರವ ತರುವಂತಹುದಲ್ಲ ಎಂದು ದೊಡ್ಡಾಘಟ್ಟ ಚಂದ್ರೇಶ್ ಹೇಳಿದ್ದಾರೆ.
ರಾಜಣ್ಣ ನವರೇ ನಿಮಗೂ ವಯಸ್ಸಾಗುತ್ತೆ. ನೀವೂ ರಾಜಕೀಯದಲ್ಲಿ ಇದ್ದೇ ಇರುತ್ತೀರಿ. ಕುಟುಂಬ ರಾಜಕಾರಣದ ಬಗ್ಗೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುವ ನೀವು ನಿಮ್ಮ ಮಗನನ್ನು ರಾಜಕೀಯಕ್ಕೆ ತಂದಿಲ್ಲವೇ?. ನೀವೂ ಸಹ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕೊಡಿಸಬಹು ದಿತ್ತು. ಕೇವಲ ರಾಜಕೀಯ ಕಾರಣಕ್ಕಾಗಿ ದೇವೇಗೌಡರನ್ನು ಟೀಕಿಸುವುದು ಸರಿಯಲ್ಲ. ಅವರ ವಯಸ್ಸಿಗೆ ಬೆಲೆ ನೀಡಿ. ದೇವೇಗೌಡರ ಬಗ್ಗೆ ನೀವೆಷ್ಟೇ ದೂರಿದರೂ ಸಹ ಅವರಿಗೆ ಕಿಂಚಿತ್ ತಟ್ಟುವುದಿಲ್ಲ. ಆಕಾಶಕ್ಕೆ ಉಗಿದರೆ ನಮಗೇ ಬೀಳುತ್ತೆ ಎಂಬಂತೆ ನೀವು ದೇವೇಗೌಡರ ಬಗ್ಗೆ ಮಾತನಾಡಿದಷ್ಟೂ ನಿಮ್ಮ ಅಧಃಪತನ ಗ್ಯಾರಂಟಿ.
ಕಳೆದ ಬಾರಿ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ವೇಳೆ ಮೈತ್ರಿಯ ಧರ್ಮ ಪಾಲಿಸದೇ ದೇವೇಗೌಡರನ್ನು ಸೋಲಿಸಲೇಬೆಂಕೆಂದು ಪಣತೊಟ್ಟವರು ನೀವು. ಅಂದೇ ಮೈತ್ರಿ ಧರ್ಮ ಪಾಲಿಸದ ನಿಮ್ಮಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿಯ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ನವರ ಗೆಲುವು ನೂರಕ್ಕೆ ನೂರು ಸತ್ಯ. ಸೋಮಣ್ಣ ನವರು ಗೆದ್ದರೆ ತಮ್ಮ ಸಚಿವ ಸ್ಥಾನಕ್ಕೆ ಎಲ್ಲಿ ಕುತ್ತು ಬರುವುದೋ ಎಂಬ ಆತಂಕ ಮನೆ ಮಾಡಿದೆ. ಹಾಗಾಗಿ ರಾಜಣ್ಣನವರು ಮನಸ್ಸು ವಿಕಲ್ಪ ಹೊಂದಿದವರಂತೆ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ದೊಡ್ಡಾಘಟ್ಟ ಚಂದ್ರೇಶ್ ಕಿಡಿಕಾರಿದ್ದಾರೆ.
ಕೆ.ಎನ್.ರಾಜಣ್ಣನವರು ಪದೇ ಪದೇ ದೇವೇಗೌಡರ ಬಗ್ಗೆ ಕೀಳುಭಾಷೆಯಲ್ಲಿ ಮಾತನಾಡಿದರೆ ರಾಜಣ್ಣ ನವರು ತುರುವೇಕೆರೆ ತಾಲೂಕಿಗೆ ಆಗಮಿಸಿದ ವೇಳೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನೂ ಸಹ ದೊಡ್ಡಾಘಟ್ಟ ಚಂದ್ರೇಶ್ ನೀಡಿದ್ದಾರೆ. ಇನ್ನು ಮುಂದಾದರೂ ರಾಜಣ್ಣ ನವರು ದೇವೇಗೌಡರ ಬಗ್ಗೆ ವೈಯಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಈ ಕುರಿತು ಕಾಂಗ್ರೆಸ್ ನ ಧುರೀಣರು ರಾಜಣ್ಣನವರಿಗೆ ಬುದ್ಧಿವಾದ ಹೇಳಬೇಕೆಂದೂ ಸಹ ದೊಡ್ಡಾಘಟ್ಟ ಚಂದ್ರೇಶ್ ಕಿವಿಮಾತು ಹೇಳಿದ್ದಾರೆ.