ಬೆಂಗಳೂರು(ಅ.04): ಕೋವಿಡ್‌ 19 ಸೋಂಕು ಹರಡುವ ಭೀತಿಯಿಂದ ಕಳೆದ ಆರು ತಿಂಗಳಿನಿಂದ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದ ಇಸ್ಕಾನ್‌ ದೇವಸ್ಥಾನ ಅ.5ರಿಂದ ಭಕ್ತರಿಗೆ ಮುಕ್ತವಾಗಲಿದೆ.

ವಾರದ ದಿನಗಳಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30, ಸಂಜೆ 4ರಿಂದ 8 ಗಂಟೆಯವರೆಗೆ ದರ್ಶನ ಪಡೆಯಬಹುದು. ವಾರಾಂತ್ಯದಲ್ಲಿ ಬೆಳಗ್ಗೆ 9.30ರಿಂದ ರಾತ್ರಿ 8 ಗಂಟೆಯವರೆಗೆ ಭಕ್ತರು ಶ್ರೀಕೃಷ್ಣನನ್ನು ಕಣ್ತುಂಬಿಕೊಳ್ಳಬಹುದು.
ಪ್ರತಿಯೊಬ್ಬರೂ ಮಾಸ್ಕ್‌ ಧರಿಸುವುದು ಕಡ್ಡಾಯ.10 ವರ್ಷದೊಳಗಿನ ಮಕ್ಕಳು ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟಹಿರಿಯರು, ಗರ್ಭಿಣಿಯರಿಗೆ ಸುರಕ್ಷತೆಯ ದೃಷ್ಟಿಯಿಂದ ದೇವಸ್ಥಾನ ಬರಲು ಅವಕಾಶವಿಲ್ಲ. ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಕುರಿತಂತೆ ಜನರಿಗೆ ಅರಿವು ಮೂಡಿಸಲು ಮಂದಿರದ ಮುಖ್ಯ ಸ್ಥಳಗಳಲ್ಲಿ ವಿಧ ವಿಧವಾದ ಗುರುತುಗಳನ್ನು ಮಾಡಲಾಗುತ್ತಿದೆ.

ಇಸ್ಕಾನ್ ಭಕ್ತರಿಗೆ ನಿರಾಸೆ; ಸದ್ಯಕ್ಕಿಲ್ಲ ಕೃಷ್ಣನ ದರ್ಶನ ಭಾಗ್ಯ

ದೇವಸ್ಥಾನದ ಆವರಣದಲ್ಲಿ ಪ್ರತಿ ಸಂದರ್ಶಕರು ಕೈ-ಕಾಲುಗಳನ್ನು ತೊಳೆಯಲು ವ್ಯವಸ್ಥೆ, ಸೋಂಕು ನಿವಾರಕ ದ್ರಾವಣಗಳನ್ನು ಸಿಂಪಡಣೆ, ಥರ್ಮಲ್‌ ಪರೀಕ್ಷೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಲಿಫ್ಟ್‌ಗಳು ಅವಶ್ಯಕತೆ ಇರುವ ಸೀಮಿತ ಸಾಮರ್ಥ್ಯದ ಜನರಿಗೆ ಮಾತ್ರ ಕಾರ್ಯ ನಿರ್ವಹಿಸಲಿವೆ. ಉಡುಗೊರೆಗಳು ಮತ್ತು ಪುಸ್ತಕ ಮಳಿಗೆಗಳು ತೆರೆದಿರುತ್ತವೆ. ದೇವಸ್ಥಾನದ ಕಲ್ಯಾಣ ಮಂಟಪ ಕೂಡ ಮುಂಗಡ ಕಾಯ್ದಿರಿಸಲು ಅವಕಾಶವಿದೆ.

ಭಕ್ತರು ಮಂದಿರದ ಅಧಿಕೃತ ವೆಬ್‌ಸೈಚ್‌ https://iskconbangalore.org ಗೆ ಭೇಟಿ ನೀಡುವ ಮೂಲಕ ನಿತ್ಯ ದರ್ಶನ ಪಡೆಯಬಹುದು. ಜತೆಗೆ ಶ್ರೀಭಗವದ್ಗೀತೆ ಮತ್ತು ಶ್ರೀಮದ್‌ ಭಾಗವತ ಪ್ರವಚನಗಳಲ್ಲಿ ಪಾಲ್ಗೊಳ್ಳಬಹುದು ಎಂದು ಬೆಂಗಳೂರು ಇಸ್ಕಾನ್‌ ದೇವಸ್ಥಾನದ ಅಧ್ಯಕ್ಷ ಮಧುಪಂಡಿತ ದಾಸ ಪ್ರಕಟಣೆಯಲ್ಲಿ ಹೇಳಿದ್ದಾರೆ.