ಕನಕಪುರ (ನ.29):  ನಾನು ಪ್ರಧಾನ ಮಂತ್ರಿ ಮಗನೂ ಅಲ್ಲ. ಮುಖ್ಯಮಂತ್ರಿಯ ಮಗನೂ ಅಲ್ಲ ನಾನೊಬ್ಬ ಸಾಮಾನ್ಯ ಜನಸೇವಕ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ಟೀಕೆಗೆ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ತಿರುಗೇಟು ನೀಡಿದರು.

ತಾಲೂಕಿನ ಮರಳವಾಡಿ ಹೋಬಳಿಯ ಯಲಚವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾರ್ಯಕರ್ತರ ಸಮಸ್ಯೆ ಆಲಿಸಿ ನಂತರ ಕಲ್ಲನಕುಪ್ಪೆ ಗ್ರಾಮದಲ್ಲಿ ಜನಸಂಪರ್ಕ ಸಭೆ ನಡೆಸಿ ಮಾತನಾಡಿ, ಶಾಸಕಿ ಅನಿತಾ ಕುಮಾರಸ್ವಾಮಿ ಕ್ಷೇತ್ರದ ಬಗ್ಗೆ ಮಾತ​ನಾ​ಡಲು ನನ್ನನ್ನು ಜನಪ್ರತಿನಿಧಿಯೇ ಅಥ​ವಾ ಶಾಸಕರೇ ಎಂದು ಪ್ರಶ್ನಿ​ಸಿ​ದ್ದಾರೆ. ನಾನು ಯಾವ ಶಾಸಕನೂ ಅಲ್ಲ. ಆದರೆ, ಈ ಜಿಲ್ಲೆಯ ಹಾಗೂ ತಾಲೂಕಿನ ಮನೆ ಮಗ. ಜಿಲ್ಲೆಯ ಜನರ ಕಷ್ಟಸುಖವನ್ನು ಆಲಿಸುವುದು ನನ್ನ ಕರ್ತವ್ಯ. ನಮ್ಮ ಕಾರ್ಯಕರ್ತರು ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದು ಅವರ ಪರವಾಗಿ ಧ್ವನಿ ಎತ್ತುವುದು ಮತ್ತು ಸೇವೆ ಮಾಡುವುದು ನನ್ನ ಕರ್ತವ್ಯ ಎಂದರು.

ನನ್ನ ವಿರುದ್ಧ ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ : ಅನಿತಾ ಕುಮಾರಸ್ವಾಮಿ ಅಸಮಾಧಾನ ...

ಜಿಲ್ಲೆಯಲ್ಲಿ ಒಂದು ಬಾರಿ ಜಿಪಂ ಅಧ್ಯಕ್ಷನಾಗಿ ಕೆಲಸ ಮಾಡಿದ್ದು ಜನರ ಸೇವೆ ಮಾಡಿದ್ದೇನೆ. ಇಡೀ ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಜೊತೆಗೆ ಕ್ಷೇತ್ರದಲ್ಲಿ 70 ಸಾವಿರ ಜನರು ನನ್ನ ಪರವಾಗಿ ಮತ ಚಲಾಯಿಸಿದ್ದಾರೆ. ಅವರ ಸೇವೆ ಮಾಡಲು ನನಗೆ ಅಧಿಕಾರವೇ ಬೇಕೆಂದಿಲ್ಲ. ಈ ಜಿಲ್ಲೆಯಲ್ಲಿ ನನಗೆ ಜನ ಅಣ್ಣ ತಮ್ಮನಂತೆ ನೋಡುತ್ತಿದ್ದು, ನನಗೆ ಬೆಂಬಲವಾಗಿ ನಿಂತಿದ್ದಾರೆ. ಅಭಿವೃದ್ಧಿ ಮಾಡುತ್ತಾನೆ ಎಂಬ ಭರವಸೆ ಇದೆ. ಇವರ ಪ್ರೀತಿ ವಿಶ್ವಾಸವೇ ಸಾಕು ಇವರ ಸೇವೆ ಮಾಡಲು ಕಾಂಗ್ರೆಸ್‌ ಪಕ್ಷ ಅವಕಾಶ ನೀಡಿದ ಸಂದರ್ಭದಲ್ಲಿ ನನಗೆ ಬೆಂಬಲವಾಗಿ ನಿಂತಿದ್ದಾರೆ ಇವರ ಸೇವೆ ಮಾಡಬಾರದೇ ಎಂದು ಪ್ರಶ್ನಿಸಿದರು.

ಅದಕ್ಕಾಗಿ ಅವರಿಗಾಗಿ ತ್ಯಾಗ ಮಾಡಲು ಬಂದಿದ್ದೇನೆ. ಅವರ ಮನೆ ಬಾಗಿಲಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಾಪಂಯನ್ನು ಕಾಂಗ್ರೆಸ್‌ ಬೆಂಬಲಿತ ಮಾಡಿಕೊಂಡು ಬಡವರ ಸೇವೆ ಮಾಡುವುದು ಅವರ ಕೆಲಸಗಳನ್ನು ಮಾಡಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹಾರೋಹಳ್ಳಿ ಮರಳವಾಡಿ ಹೋಬಳಿಯ ಬ್ಲ್ಯಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ, ತಾಪಂ ಸದಸ್ಯೆ ಗೀತಾ ಈಶ್ವರ್‌, ಟಿಎಪಿಸಿಎಂಎಸ್‌ ಮಾಜಿ ಉಪಾಧ್ಯಕ್ಷ ನಂಜೇಗೌಡ, ಮರಳವಾಡಿ ವಿಎಸ್‌ ಎಸ್‌ಎನ್‌ ಅಧ್ಯಕ್ಷ ರಾಯಲ್‌ ರಾಮಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಅಬ್ದುಲ್ಲಾ, ಲಿಂಗೇಗೌಡ, ಚಂದ್ರಣ್ಣ, ಶಿವಶಂಕರ್‌ , ನಂಜುಂಡ, ಶಿವಾನಂದ, ನಾಗೇಂದ್ರ , ಕೆಂಚಪ್ಪ, ಚನ್ನಬಸವೇಗೌಡ ಹಾಜ​ರಿದ್ದ​ರು.