ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸುವ ಕ್ರಮ ಸರಿಯಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರೂ ಆದ ಮಾಜಿ ಸಚಿವ ಎಂ. ಶಿವಣ್ಣ ಹೇಳಿದರು.

 ಮೈಸೂರು (ಅ.25): ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸುವ ಕ್ರಮ ಸರಿಯಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರೂ ಆದ ಮಾಜಿ ಸಚಿವ ಎಂ. ಶಿವಣ್ಣ ಹೇಳಿದರು.

ಕನ್ನಡ (Kannada) ಜಾನಪದ ಪರಿಷತ್‌ನ 6ನೇ ವಾರ್ಷಿಕೋತ್ಸವ ಆಂಗವಾಗಿ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಜಾನಪದ ಹಾಗೂ ಬುಡಕಟ್ಟು ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸದ್ಯದಲ್ಲಿಯೇ ರಾಜ್ಯೋತ್ಸವ ಪ್ರಶಸ್ತಿ (Award) ಪ್ರಕಟವಾಗಲಿದೆ. ನನ್ನ ಬಳಿ ಕೂಡ ಹಲವಾರು ಬಂದು, ಶಿಫಾರಸು ಮಾಡುವಂತೆ ಕೋರಿದರು. ಆದ್ದರಿಂದ ಅರ್ಜಿ ಆಹ್ವಾನಿಸವುದು, ಶಿಫಾರಸು ಮಾಡುವುದನ್ನು ಕೈಬಿಟ್ಟು ಅರ್ಹ ಸಾಧಕರನ್ನು ರಾಜ್ಯ ಸರ್ಕಾರವೇ ಗುರುತಿಸಿ ಪ್ರಶಸ್ತಿ ನೀಡಬೇಕು ಎಂದು ಅವರು ಸಲಹೆ ಮಾಡಿದರು.

ನಾನು ಕೂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವನಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್‌ ಅವರ ಧನ್ಯಮಿಲನ ಮತ್ತಿತರ ಕಾರ್ಯಕ್ರಮಗಳಲ್ಲಿ ಹಲವಾರು ಖ್ಯಾತನಟರೊಂದಿಗೆ ಹತ್ತಿರದಿಂದ ಒಡನಾಡುವ ಅವಕಾಶ ಸಿಕ್ಕಿತ್ತು ಎಂದು ಅವರು ಸ್ಮರಿಸಿದರು.

ಜಾನಪದ ಪರಿಷತ್‌ ಕಾರ್ಯಕ್ಕೆ ಶ್ಲಾಘನೆ: ಕನ್ನಡ ಜಾನಪದ ಪರಿಷತ್‌ ಸ್ವತಃ ಕಲಾವಿದರನ್ನು ಗುರುತಿಸಿ, ಗೌರವಿಸುತ್ತಿರುವುದು ಶ್ಲಾಘನೀಯ. ಈ ರೀತಿ ಮಾಡಿದಾಗ ಮಾತ್ರ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ ಆಧುನಿಕ ಕಾಲದಿಂದಲೂ ಜಾನಪದ ಜೀವಂತವಾಗಿದೆ ಎಂದು ಅವರು ಹೇಳಿದರು.

ಕನ್ನಡ ಜಾನಪದ ಪರಿಷತ್‌ನ ಅಧ್ಯಕ್ಷ ಎಸ್‌. ಬಾಲಾಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಲಾವಿದರನ್ನು ಗೌರವಿಸಿದರು. ಮಾಪನಶಾಸ್ತ್ರದ ಸಹಾಯಕ ನಿಯಂತ್ರಕ ಎಂ.ಎಸ್‌. ಕುಮಾರ್‌ ಆಶಯ ಭಾಷಣ, ಪರಿಷತ್‌ನ ಅಧ್ಯಕ್ಷ ಎಚ್‌. ಕ್ಯಾತನಹಳ್ಳಿ ಪ್ರಕಾಶ್‌ ಪ್ರಾಸ್ತಾವಿಕ ಭಾಷಣ ಮಾಡಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಎನ್‌. ಬೆಟ್ಟೇಗೌಡ, ಎಚ್‌.ಡಿ. ಕೋಟೆ ತಾ. ಕುರುಬರ ಸಂಘದ ಅಧ್ಯಕ್ಷ ಎಂ.ಬಿ. ಆನಂದ್‌, ಪರಿಷತ್‌ನ ವಿಭಾಗೀಯ ಸಂಚಾಲಕಿ ಕಾವೇರಿ ಪ್ರಕಾಶ್‌, ಹಾಪ್‌ಕಾಮ್ಸ್‌ನ ಮಾಜಿ ಅಧ್ಯಕ್ಷ ಬಿ.ಪಿ. ಬೋರೇಗೌಡ, ಕರ್ನಾಟಕ ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷ ಮರಿದೇವಯ್ಯ, ತನುಮನ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೇರಾಮ್‌, ಪರಿಷತ್‌ ಕಾರ್ಯದರ್ಶಿ ಕೆ.ಸಿ. ಕಾಂತಪ್ಪ ಮುಖ್ಯ ಅತಿಥಿಗಳಾಗಿದ್ದರು.

ಸನ್ಮಾನಿತರು: ಜಾನಪದ ಕ್ಷೇತ್ರದ ವೀರಗಾಸೆ ಕಲಾವಿದರಾದ ನಂಜನಗೂಡು ತಾಲೂಕು ಮಲ್ಕುಂಡಿಯ ಬಸವಣ್ಣ, ಸೋಬಾನೆ ಪದ ಹಾಡುಗಾರರಾದ ಮೈಸೂರು ತಾ. ಯರಗನಹಳ್ಳಿಯ ಮಾದಮ್ಮ, ಕಂಸಾಳೆ ಕಲಾವಿದ ಮುರಡಗಳ್ಳಿಯ ಮಹದೇವಯ್ಯ, ಡೊಳ್ಳುಕುಣಿತ ಕಲಾವಿದರಾದ ವಿನಾಯಕನಗರದ ನಿಖಿಲ್‌, ಬುಡಕಟ್ಟು ಕ್ಷೇತ್ರದ ಬೆಟ್ಟಕುರುಬ ಸಮುದಾಯದ ಸರಗೂರು ತಾ. ಆನೆಮಾಳದ ಜೋಮಮ್ಮ, ಜೇನುಕುರುಬ ಬುಡಕಟ್ಟು ಸಮುದಾಯದ ರಾಣಿಗೇಟ್‌ ಹಾಡಿಯ ಜೆ.ಡಿ. ಜಯಪ್ಪ, ಯರವ ಬುಡಕಟ್ಟು ಸಮುದಾಯದ ಎಚ್‌.ಡಿ. ಕೋಟೆ ಗೋಳೂರು ಹಾಡಿಯ ತೋಲಯ್ಯ, ಸೋಲಿಗ ಬುಡಕಟ್ಟು ಸಮುದಾಯದ ಹುಣಸೂರು ತಾ. ಹೆಮ್ಮಿಗೆಹಾಡಿಯ ಹರ್ಷ ಅವರನ್ನು ಸನ್ಮಾನಿಸಲಾಯಿತು.

ಇದಲ್ಲದೇ ಕೆ.ಆರ್‌. ನಗರ ಪುರಸಭೆಯ ಅಧ್ಯಕ್ಷ ಪ್ರಕಾಶ್‌, ಪಿರಿಯಾಪಟ್ಟಣ ತಾಲೂಕಿನ ಕಜಾಪ ಅಧ್ಯಕ್ಷ ನಾಗಣ್ಮ, ಎಚ್‌.ಡಿ. ಕೋಟೆ ತಾಲೂಕಿನ ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಬಿ. ಬಸವರಾಜು, ಎಚ್‌.ಡಿ. ಕೋಟೆ ತಾಲೂಕಿನ ಜಾನಪದ ಹಾಡುಗಾರರಾದ ಪಿ. ಸೋಮಶೇಖರ್‌, ಪದ್ಮರಾಜ್‌ ಅವರನ್ನು ಸಹ ಸನ್ಮಾನಿಸಲಾಯಿತು.

ನಿಸರ್ಗ ಮತ್ತು ವಿಸ್ಮಯ ಪ್ರಾರ್ಥಿಸಿದರು. ಎಸ್‌.ಎಂ. ಮಧುಸೂದನ್‌ ಸ್ವಾಗತಿಸಿದರು. ಪಲ್ಲವಿ ನಿರೂಪಿಸಿದರು. ಕನ್ನಡ ಜಾನಪದ ಪರಿಷತ್‌ನ ಜಿಲ್ಲಾ ಹಾಗೂ ತಾಲೂಕು ಘಟಕಗಳ ಪದಾಧಿಕಾರಿಗಳು ಇದ್ದರು.

ಇದೇ ಸಂದರ್ಭದಲ್ಲಿ ಕಜಾಪ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್‌ ಅವರನ್ನು ಹುಟ್ಟುಹಬ್ಬದ ಅಂಗವಾಗಿ ನಾನಾ ಸಂಘ ಸಂಸ್ಥೆಗಳು ಸನ್ಮಾನಿಸಿದವು.

ಜಾನಪದ ಗೀತಗಾಯನ:

ಮೈಸೂರನ ಪನ್ನಗ ವಿಜಯ್‌ಕುಮಾರ್‌ ಮತ್ತು ತಂಡ, ಎಚ್‌.ಡಿ. ಕೋಟೆಯ ಮರಿಸ್ವಾಮಿ ಸರ್ವಾಥ್‌ ಮತ್ತು ತಂಡ, ಸುಮಂತ್‌ ವಶಿಷ್ಠ ಮತ್ತು ತಂಡ, ಎಚ್‌.ಡಿ. ಕೋಟೆಯ ಮಲಾರ ಗಣೇಶ ಮತ್ತು ತಂಡ, ಪುಷ್ಪಲತಾ ಮತ್ತು ತಂಡ, ಸರಗೂರು ತಾಲೂಕಿನ ದೇವರಾಜು ಆನಗಟ್ಟಿಮತ್ತು ತಂಡ, ಎಚ್‌.ಡಿ. ಕೋಟೆ ತಾ. ದೇವಲಾಪುರದ ಅಮ್ಮ ರಾಮಚಂದ್ರ ಮತ್ತು ತಂಡ, ಪಿ. ಪುನೀತ್‌ಕುಮಾರ್‌, ಅಜಯ್‌ಕುಮಾರ್‌ ಮತ್ತು ಸೋಮು ತಂಡ, ಹುಣಸೂರು ತಾಲೂಕು ವಸಂತ ಹೊನ್ನೇನಹಳ್ಳಿ ಮತ್ತು ತಂಡ, ಕಂಸಾಳೆ ಮಾದೇವ ಮತ್ತು ತಂಡ, ಕೊಳ್ಳೇಗಾಲ ತಾಲೂಕಿನ ಶಿವಮ್ಮ ಸತ್ತೇಗಾಲ ಮತ್ತು ತಂಡ, ಪ್ರಸನ್ನ ಪಾಂಡವಪುರ, ಚಿರಂಜೀವಿ, ಚಂದ್ರು, ತೇಜು, ರಾಕೇಶ್‌, ರಾಜೇಶ್ವರಿ, ಕೆ.ಪಿ. ಪ್ರೇಮಕುಮಾರಿ, ಕಳಸೂರು ರಾಜು ಮತ್ತು ತಂಡದವರು ಜಾನಪದ ಗೀತಗಾಯನ ನಡೆಸಿಕೊಟ್ಟರು.