ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಹೂಡಿಕೆದಾರರ ಸಮಾವೇಶ
ರಾಜ್ಯದಲ್ಲಿಯೂ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಿ, ಬಂಡವಾಳ ಹೂಡುವಂತೆ ಮಾಡಲಾಗುವುದು. ಇದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದ್ದಾರೆ. ಆಯಾ ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ ಪಶ್ಚಿಮ ಘಟ್ಟ, ಕರಾವಳಿ, ಹೆರಿಟೇಜ್ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು ಎಂದಿದ್ದಾರೆ.
ಶಿವಮೊಗ್ಗ(ಸೆ.14): ರಾಜ್ಯದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ. ಟಿ. ರವಿ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳ ಸರ್ಕಾರವು ಈಗಾಗಲೇ ಇಂತಹ ಸಮಾವೇಶ ಆಯೋಜಿಸಿದ್ದು, ಈ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ರಾಜ್ಯದಲ್ಲಿಯೂ ಇಂತಹದೇ ಬಂಡವಾಳ ಹೂಡಿಕೆ ಸಮಾವೇಶ ಆಯೋಜಿಸಿ, ಬಂಡವಾಳ ಹೂಡುವಂತೆ ಮಾಡಲಾಗುವುದು. ಇದರಿಂದ ಪ್ರವಾಸಿ ತಾಣಗಳ ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಆಗಲಿದೆ ಎಂದು ಹೇಳಿದರು.
ಆಯಾ ಭೌಗೋಳಿಕ ಅಗತ್ಯಕ್ಕೆ ತಕ್ಕಂತೆ ಪಶ್ಚಿಮ ಘಟ್ಟ, ಕರಾವಳಿ, ಹೆರಿಟೇಜ್ ಪ್ರವಾಸೋದ್ಯಮ ನೀತಿಯನ್ನು ರೂಪಿಸಲಾಗುವುದು. ಈ ಕುರಿತಾಗಿ ಈಗಾಗಲೇ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಎಂದರು.
ಮಾಸ್ಟರ್ ಪ್ಲಾನ್:
ಜಿಲ್ಲೆಯಲ್ಲಿ ಒಟ್ಟು 47 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಈ ತಾಣಗಳ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಧಾರ್ಮಿಕ, ಪ್ರಾಕೃತಿಕ, ಹೆರಿಟೇಜ್ ಸೇರಿದಂತೆ 4 ಟೂರಿಸಂ ಸಕ್ರ್ಯೂಟ್ ರೂಪಿಸಲಾಗಿದೆ. ಈ ಎಲ್ಲಾ ಪ್ರವಾಸಿ ತಾಣಗಳಿಗೆ ಸರಿಯಾದ ಸಂಪರ್ಕ ವ್ಯವಸ್ಥೆ, ವಸತಿ, ಶಾಪಿಂಗ್, ಶೌಚಾಲಯ, ಕುಡಿಯುವ ನೀರಿನಂತಹ ಮೂಲಸೌಲಭ್ಯಗಳ ಕಲ್ಪಿಸುವಿಕೆ ಸೇರಿದಂತೆ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಸ್ತಾವ ಸಲ್ಲಿಸುವಂತೆ ತಿಳಿಸಲಾಗಿದೆ. ಇದೇ ರೀತಿ ವಿಶ್ವವಿಖ್ಯಾತ ಜೋಗ ಜಲಪಾತ ಅಭಿವೃದ್ಧಿಗೆ ಪ್ರತ್ಯೇಕ ಮಾಸ್ಟರ್ ಪ್ಲಾನ್ ರೂಪಿಸಲು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.