ಶಿವಾನಂದ ಗೊಂಬಿ

ಹುಬ್ಬಳ್ಳಿ(ಫೆ.06): ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಬೇಕೆಂದರೆ ಸಾಕಷ್ಟು ತಯಾರಿ ಮಾಡಿಕೊಳ್ಳಬೇಕಾಗುತ್ತೆ. ಅದರಲ್ಲಿ  ಮೊಟ್ಟ ಮೊದಲ ಅಂಶವೆಂದರೆ ಸರ್ಕಾರ ತನ್ನ ಆಡಳಿತ ವ್ಯವಸ್ಥೆ ಸುಧಾರಿಸಬೇಕು. ಸರ್ಕಾರದಿಂದ ಆಗಬೇಕಾದ ಕೆಲಸಗಳ ಸರಳೀಕರಣಗೊಳಿಸಬೇಕು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದು ಬಂಡವಾಳ ಹೂಡಿಕೆಯಲ್ಲಿ ಪಾಲ್ಗೊಳ್ಳ ಬಯಸುವ ಕೈಗಾರಿಕೋದ್ಯಮಿಗಳ ಅಭಿಮತ. ಹೌದು ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಒಪ್ಪಂದಗಳೇನೋ ಆಗುತ್ತವೆ. ಆದರೆ, ಅದರ ಬಳಿಕದ್ದೇ ದೊಡ್ಡ ಸಮಸ್ಯೆ. ಒಂದು ಸಣ್ಣ ಕೆಲಸಕ್ಕೂ ತಿಂಗಳಗಟ್ಟಲೇ ಕಚೇರಿಗೆ ಅಲೆದಾಡಬೇಕಾಗುತ್ತೆ. ಒಂದು ಕೈಗಾರಿಕೆ ಪ್ರಾರಂಭಿಸಬೇಕೆಂದರೆ ಹತ್ತಾರು ಕೆಲಸಗಳನ್ನು ಸರ್ಕಾರದ ಮಟ್ಟದಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ನೂರೆಂಟು ಇಲಾಖೆಗಳಿಂದ ಅನುಮತಿ ಪಡೆಯಬೇಕಾಗುತ್ತೆ. ಪರಿಸರ ಇಲಾಖೆ, ನೀರು, ವಿದ್ಯುತ್‌, ಪಾಲಿಕೆ, ಜಿಲ್ಲಾಡಳಿತ, ಹೀಗೆ ಹತ್ತಾರು ಕಡೆಗಳಲ್ಲಿ ಹತ್ತಾರು ಅನುಮತಿ ಪಡೆಯಬೇಕಾಗುತ್ತೆ. ಆದರೆ, ಕರ್ನಾಟಕದಲ್ಲಿ ಎಲ್ಲದಕ್ಕೂ ಕಚೇರಿ ಕಚೇರಿ ಅಲೆಯಬೇಕಾಗುತ್ತೆ.
ಇಲ್ಲಿನ ಏಕಗವಾಕ್ಷಿ ಕಿಟಕಿ (ಸಿಂಗಲ್‌ ವಿಂಡೋ ಸಿಸ್ಟಂ) ಹೆಸರಿಗೆ ಮಾತ್ರ ಸಿಂಗಲ್‌ ವಿಂಡೋ. ಕಾಟಾಚಾರಕ್ಕೆಂಬಂತೆ ಇದೆ. ಭೂಮಿ ಬೇಕಾದರೂ ಆರೇಳು ತಿಂಗಳು ಕಾಯಬೇಕಾಗುತ್ತೆ. ಭೂಮಿ ಸಿಕ್ಕ ಮೇಲೆ ಪರಿಸರ ಇಲಾಖೆಯದ್ದು ಮತ್ತೆ ಮೂರ್ನಾಲ್ಕು ತಿಂಗಳು ಕಾಯಬೇಕಾಗುತ್ತೆ. ಅದರಂತೆ ವಿದ್ಯುತ್‌, ನೀರು ಪ್ರತಿಯೊಂದು ಇಲಾಖೆಗಳಿಗೂ ಕನಿಷ್ಠವೆಂದರೂ ಮೂರ್ಮೂರು ತಿಂಗಳು ಅಲೆದಾಡಬೇಕಾಗುತ್ತೆ. ಇದರಿಂದ ಉದ್ಯಮಿಗಳು ಕಚೇರಿಗೆ ಅಲೆ ಅಲೆದು ಸುಸ್ತಾಗಿ ಬೇಡವೇ ಬೇಡಪ್ಪ ಇವರ ಸಹವಾಸ ಎಂದುಕೊಂಡು ಬೇರೆಡೆ ಹೋಗುವುದುಂಟು. ಇಷ್ಟುದಿನ ಆಗಿರುವುದೇ ಇದೇ ರೀತಿ. ಇನ್ನು ಕೈಗಾರಿಕೆ ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಒಂದೇ ಬಾರಿಗೆ ಯಾವ ಉದ್ಯಮಿಗೂ ಕೆಲಸ ಆದ ಉದಾಹರಣೆಯೇ ಇಲ್ಲ ಎಂಬ ಆರೋಪ ಸಾಮಾನ್ಯವಾಗಿ ಕೇಳಿ ಬರುತ್ತೆ. ಈ ಎಲ್ಲ ಕಾರಣದಿಂದಲೇ ಹಿಂದೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶಗಳು ಅಷ್ಟೊಂದು ಯಶಸ್ವಿಯಾಗಲಿಲ್ಲ ಎಂಬ ಮಾತು ಉದ್ಯಮಿಗಳದ್ದು.

ಮತ್ತೇನು ಮಾಡಬೇಕು:

ಸರ್ಕಾರ ತನ್ನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಬೇಕು. ಉದ್ಯಮಿ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಬೇಕು. ಈಗಿನ ಸಿಂಗಲ್‌ ವಿಂಡೋ ಸಿಸ್ಟಂಗೆ ಚುರುಕು ಮುಟ್ಟಿಸುವಂತಾಗಬೇಕು. ಉದ್ಯಮಿಗಳಿಗೆ ಸಮಾವೇಶದಲ್ಲಿ ಮಾತುಕೊಟ್ಟಂತೆ ಸರ್ಕಾರಗಳು ನಡೆದುಕೊಳ್ಳಬೇಕು. ಸಿಂಗಲ್‌ ವಿಂಡೋ ಸಿಸ್ಟ್‌ಂ ಸದೃಢಗೊಳಿಸಬೇಕು. ಇಲ್ಲಿ ಮಾತುಕೊಟ್ಟು ಮರೆತು ಬಿಡಬಾರದು. ತತಕ್ಷಣವೇ ಎಲ್ಲ ಅನುಮತಿಗಳು ಸಿಗುವಂತಾಗಬೇಕು. ಬೇರೆ ಬೇರೆ ರಾಜ್ಯ, ದೇಶಗಳಲ್ಲಿ ತಕ್ಷಣವೇ ಅನುಮತಿ ಕೊಡಲಾಗುತ್ತೆ. ಅದರಂತೆ ಇಲ್ಲೂ ಜಾರಿಗೊಳಿಸಬೇಕು. ಅಂದಾಗ ಮಾತ್ರ ಇಲ್ಲಿನ ಉದ್ಯಮಿಗಳು ಇತ್ತ ಕಡೆಗೆ ಬರಲು ಇಚ್ಛಿಸುತ್ತಾರೆ. ಇಲ್ಲದಿದ್ದಲ್ಲಿ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಬಂಡವಾಳ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗುತ್ತೆ ಎಂಬುದು ಉದ್ಯಮಿಗಳ ಅಂಬೋಣ.ಒಟ್ಟಿನಲ್ಲಿ ಇಲ್ಲಿನ ವ್ಯವಸ್ಥೆ ಉದ್ಯಮಿ ಸ್ನೇಹಿ ವ್ಯವಸ್ಥೆಯಾಗಬೇಕು. ಕಾಟಾಚಾರಕ್ಕೆಂಬಂತೆ ಸಮಾವೇಶ ನಡೆಸಿದ್ದೇವೆ ಎಂಬಂತಾಗಬಾರದು. ಅದಕ್ಕೆ ಬೇಕಾದ ಪೂರಕ ವಾತಾವರಣ ಸೃಷ್ಟಿಸಬೇಕಿದೆ.

10 ತಿಂಗಳಲ್ಲಿ ಕಾರು ಬಿಡುಗಡೆಯಾಗಿತ್ತು:

ಚೀನಾದಲ್ಲಿ ಟೆಸ್ಲಾ ಕಾರು ಉತ್ಪಾದನಾ ಘಟಕ ಸ್ಥಾಪನೆಯ ಒಪ್ಪಂದ ಮಾಡಿಕೊಂಡು 10 ತಿಂಗಳಲ್ಲೇ ತನ್ನ ಮೊದಲ ಕಾರನ್ನು ಬಿಡುಗಡೆ ಮಾಡಿತ್ತು. ಅಷ್ಟೊಂದು ಫಾಸ್ಟಾಗಿ ಅಲ್ಲಿನ ವ್ಯವಸ್ಥೆಯಿದೆ. ಪ್ರತಿಯೊಂದು ಇಲಾಖೆಗಳಿಂದ ಅನುಮತಿ ಪಡೆದು ಸಿವಿಲ್‌ ವರ್ಕ್ ಮುಗಿಸಿಕೊಂಡು, ನೌಕರರ ವರ್ಗದ ನೇಮಕಾತಿ ಮಾಡಿಕೊಂಡು ತನ್ನ ಕಾರನ್ನೇ ಕೇವಲ 10 ತಿಂಗಳಲ್ಲಿ ಬಿಡುಗಡೆ ಮಾಡುತ್ತೆ ಅಂದರೆ ಅಲ್ಲಿನ ವ್ಯವಸ್ಥೆ ಎಷ್ಟೊಂದು ಸರಳೀಕರಣವಾಗಿದೆ. ಅಷ್ಟೊಂದು ಸರಳೀಕರಣ ಇಲ್ಲಿ ಸಾಧ್ಯವಿಲ್ಲದಿದ್ದರೂ ಕೊಂಚ ಮಟ್ಟಿಗಾದರೂ ಸುಧಾರಣೆ ಮಾಡಿಕೊಳ್ಳಬೇಕು. ಉದ್ಯಮಿ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿದೆ.

ಈ ಬಗ್ಗೆ ಮಾತನಾಡಿದ ಹುಬ್ಬಳ್ಳಿ- ಧಾರವಾಡ ಅಭಿವೃದ್ಧಿ ಫೋರಂ ಅಶೋಕ ಶೆಟ್ಟರ್‌ ಅವರು, ಬೇರೆಡೆಗಿಂತ ನಮ್ಮಲ್ಲಿ ಯಾಕೆ ಉದ್ಯಮ ಸ್ಥಾಪಿಸುವುದರಿಂದ ಉದ್ಯಮಿಗಳಿಗೆ ಆಗುವ ಅನುಕೂಲಗಳೇನು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಇದರೊಂದಿಗೆ ಕಚೇರಿ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡಬಾರದು. ವ್ಯವಸ್ಥೆಯೆನ್ನೆಲ್ಲ ಸರಳೀಕರಣಗೊಳಿಸಬೇಕು ಎಂದು ಹೇಳಿದ್ದಾರೆ.