ಮಂಗಳೂರು: ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಗೆ ತೆರೆ
ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ನಡೆದ ಜಾಂಬೂರಿ, ಸರ್ಕಾರಕ್ಕೆ ಶೀಘ್ರವೇ ಜಾಂಬೂರಿ ನಿರ್ಣಯ ಸಲ್ಲಿಕೆ: ಡಾ.ಆಳ್ವ, ಮುಂದಿನ ವರ್ಷ ಅಮೆರಿಕದಲ್ಲಿ ಜಾಂಬೂರಿ
ಸಂದೀಪ್ ವಾಗ್ಲೆ
ಮಂಗಳೂರು(ಡಿ.27): ಮೂಡುಬಿದಿರೆಯ ಆಳ್ವಾಸ್ ಕ್ಯಾಂಪಸ್‌ನಲ್ಲಿ ಡಿಸೆಂಬರ್ 21ರಿಂದ ನಡೆಯುತ್ತಿದ್ದ 25ನೇ ಅಂತಾರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೂರಿಗೆ ಸೋಮವಾರ ಅಧಿಕೃತವಾಗಿ ತೆರೆ ಬಿತ್ತು. ವಿವಿಧೆಡೆಗಳಿಂದ ಆಗಮಿಸಿದ ಕೆಡೆಟ್‌ಗಳು ತಮ್ಮೂರಿಗೆ ಮರಳಲು ಸಿದ್ಧತೆ ನಡೆಸಿದ್ದಾರೆ. ಆದರೆ, ಜಾಂಬೂರಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಐದು ಬೃಹತ್ ಮೇಳಗಳು ಮಂಗಳವಾರವೂ ಮುಂದುವರಿಯಲಿದ್ದು, ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶವಿದೆ. ಮಳಿಗೆಗಳೂ ತೆರೆದಿರಲಿವೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಜಾಂಬೂರಿ ಯಶಸ್ಸಿನ ರೂವಾರಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಸ್ಕೌಟ್ಸ್ ಮತ್ತು ಗೈಡ್ಸ್ ಉನ್ನತಿಗಾಗಿ ಶೀಘ್ರವೇ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಶೀಘ್ರದಲ್ಲೇ ರಾಜ್ಯದ ಎಲ್ಲ ಜಿಲ್ಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯಸ್ಥರನ್ನು ಮೂಡುಬಿದಿರೆಗೆ ಕರೆಸಿ, ರಾಜ್ಯಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಉಪಸ್ಥಿತಿಯಲ್ಲಿ ಚರ್ಚೆ ನಡೆಸಿ ಸೂಕ್ತ ನಿರ್ಣಯಗಳನ್ನು ಕೈಗೊಂಡು, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಪ್ರಸ್ತುತ ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಸೂಕ್ತ ಇಲಾಖೆ ಇಲ್ಲದಿರುವುದು ಸೇರಿದಂತೆ ಹಲವು ವಿಚಾರಗಳ ಕುರಿತು ನಿರ್ಣಯದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಹೊಸ ಪಕ್ಷಗಳಿಂದ ಬಿಜೆಪಿಗೆ ನಷ್ಟಇಲ್ಲ: ನಳಿನ್ ಕುಮಾರ್
ಸ್ಕೌಟ್ಸ್ ಮತ್ತು ಗೈಡ್ಸ್ ಅಧೀನದಲ್ಲಿ ಪಿಲಿಕುಳದಲ್ಲಿ 15 ಎಕರೆ, ಉಡುಪಿಯಲ್ಲಿ 15 ಎಕರೆ, ಬೆಳ್ತಂಗಡಿಯಲ್ಲಿ 3 ಎಕರೆ ಜಾಗವಿದೆ. ಇಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ನಡೆಸಲು ಪೂರಕ ವ್ಯವಸ್ಥೆ ಮಾಡಬೇಕಾಗಿದೆ. ಪಿಲಿಕುಳದಲ್ಲಿ ಎನ್‌ಸಿಸಿ, ಎನ್‌ಎಸ್‌ಎಸ್, ಪೊಲೀಸ್, ಮಿಲಿಟರಿ ಕ್ಯಾಂಪ್‌ಗಳನ್ನು ನಡೆಸಲು ಅನುಕೂಲವಾಗುವಂತೆ ಯುವಶಕ್ತಿ ಕೇಂದ್ರ ಆರಂಭಿಸಲು ಒಂದು ವರ್ಷದ ಗಡುವು ಹಾಕಿಕೊಳ್ಳಲಾಗಿದೆ. ಇದಲ್ಲದೆ, ಸರ್ಕಾರ ಜಾಗ ಹಾಗೂ ಅನುದಾನ ನೀಡಿದರೆ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಮಾಡಲು ಸಿದ್ಧನಿದ್ದೇನೆ ಎಂದು ಆಳ್ವ ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್‌ಗಳ ಮನೋ, ದೈಹಿಕ ಕಸರತ್ತುಗಳು, ಬೌದ್ಧಿಕ ಚಟುವಟಿಕೆಗಳೇ ಜಾಂಬೂರಿಯ ಮುಖ್ಯ ಆಕರ್ಷಣೆ. ರಾಜ್ಯದ ವಿವಿಧ ಜಿಲ್ಲೆ, ಹೊರ ರಾಜ್ಯ, ವಿದೇಶಗಳಿಂದ ಬಂದಿದ್ದ ವಿವಿಧ ಜಾತಿಯ, ಧರ್ಮದ, ಸಂಸ್ಕೃತಿಯ ಕೆಡೆಟ್‌ಗಳು ತಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಆರು ದಿನಗಳ ಕಾಲ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ತಮ್ಮ ತಾಯ್ನೆಲದ ಸಂಸ್ಕೃತಿ, ಜನಪದ, ಕಲಾ ಪ್ರಕಾರಗಳನ್ನು ಪರಸ್ಪರ ವಿನಿಮಯಗೊಳಿಸುವುದರೊಂದಿಗೆ ವಿಶ್ವ ಮಾನವ ಪರಿಕಲ್ಪನೆಗೆ ತಮ್ಮನ್ನು ಒಡ್ಡಿಕೊಂಡರು. ಕನ್ನಡ ನಾಡಿನ ಶ್ರೀಮಂತ ಕಲೆ, ಸಂಸ್ಕೃತಿಯ ಪರಿಚಯ ಮಾಡಿಕೊಂಡರು. ಜಾಂಬೂರಿ, ಸ್ಕೌಟ್ಸ್ ಮತ್ತು ಗೈಡ್ಸ್‌ಗೆ ಹೊಸ ಚಿಗುರು ಮೂಡಿಸಿದೆ ಎಂದರು.
ಇದುವರೆಗೆ ಯಾವುದೇ ವಿಶ್ವ ಜಾಂಬೂರಿಯಲ್ಲಿ 50 ಸಾವಿರದಷ್ಟು ಬೃಹತ್ ಸಂಖ್ಯೆಯಲ್ಲಿ ಕೆಡೆಟ್‌ಗಳು ಭಾಗವಹಿಸಿಲ್ಲ. ಅಲ್ಲದೆ, ಯಾವುದೇ ಅಂತಾರಾಷ್ಟ್ರೀಯ ಜಾಂಬೂರಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡುವ ಕ್ರಮ ಇಲ್ಲ. ಆದರೆ, ಮೂಡುಬಿದಿರೆಯಲ್ಲಿ ಜನರ ಮುಕ್ತ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಭಾನುವಾರ 1.30 ಲಕ್ಷ ಜನ ಆಗಮಿಸಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ ಸೇರಿ ಹಲವು ರಾಜಕೀಯ ನಾಯಕರು ಭೇಟಿ ನೀಡಿದ್ದಾರೆ. ಜಾಂಬೂರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದೇವೆ. ಜಾಂಬೂರಿಗೆ 35-40 ಕೋಟಿ ರು.ಗಳಷ್ಟು ವೆಚ್ಚವಾಗಿದೆ. ಇದರಲ್ಲಿ 10 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ಮೊತ್ತಕ್ಕಾಗಿ ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದೇನೆ. ಕಳೆದ ಬಾರಿ ದಕ್ಷಿಣ ಕೊರಿಯಾದಲ್ಲಿ ವಿಶ್ವ ಜಾಂಬೂರಿ ನಡೆದಿತ್ತು. ಮುಂದಿನ ವರ್ಷ ಅಮೆರಿಕದಲ್ಲಿ ನಡೆಯಲಿದೆ ಎಂದರು.