ಹುಬ್ಬಳ್ಳಿ ಆಕಾಶದಲ್ಲಿ ಹಾರಿದ ಸಿದ್ಧಗಂಗಾ ಶ್ರೀಗಳ ಕೀರ್ತಿ!

‘ಪತಂಗವಾಗಿ ನಾ ಹಾರಾಡಬಲ್ಲೆ...’ ಹಾಡಿನಂತೆ ಇದು ಪತಂಗದ ಉತ್ಸವ. ಎಲ್ಲಿ ನೋಡಿದರಲ್ಲಿ ಬಣ್ಣ ಬಣ್ಣದ, ವಿವಿಧ ವಿನ್ಯಾಸದ ಪತಂಗಗಳು ಮುಗಿಲೆತ್ತರಕ್ಕೆ ಹಾರುತ್ತಿವೆ. ಒಮ್ಮೆ ಕತ್ತು ಮೇಲೆತ್ತಿದ್ದರೆ ಕೆಳಗಿಳಿಸಲು ಮನಸ್ಸಾಗದು. ಹೌದು ಹುಬ್ಬಳ್ಳಿಯ ಕುಸುಗಲ್‌ ರಸ್ತೆಯಲ್ಲಿರುವ ಆಕ್ಸ್‌ಫರ್ಡ್‌ ಕಾಲೇಜಿನ ಬಳಿಯ ಮೈದಾನದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯುತ್ತಿದೆ.

International kite flyers to participate in Hubballi kit  Festival

ನಮ್ಮ ದೇಶ ಅಷ್ಟೇ ಅಲ್ಲದೆ ಸುಮಾರು 11 ದೇಶಗಳಿಂದ ಒಟ್ಟು 34 ಖ್ಯಾತ ಗಾಳಿಪಟ ತಜ್ಞರು ತಮ್ಮ ವಿಶಿಷ್ಟವಾದ ಬೃಹತ್‌ ಗಾಳಿಪಟಗಳನ್ನು ಮುಗಿಲೆತ್ತರಕ್ಕೆ ಹಾರಿಸಿ ರಂಜಿಸಲಿದ್ದಾರೆ. ಬುಧವಾರ ಇಲ್ಲಿ ವಿಂಡ್‌ ಟೆಸ್ಟ್‌ ನಡೆದಿದ್ದು, ಗುರುವಾರ, ಶುಕ್ರವಾರ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ಇಷ್ಟೇ ಅಲ್ಲದೆ ರಾತ್ರಿಯೂ ಎಲ್‌ಇಡಿ ಪತಂಗಗಳನ್ನು ನಕ್ಷತ್ರಗಳ ಮಧ್ಯೆ ಮಿಂಚಲಿದೆ.

ಯಾವ ಯಾವ ದೇಶಗಳು ಭಾಗಿ:

ಕ್ಷಮತಾ ಸಂಸ್ಥೆ ಆಯೋಜಿಸಿರುವ ಈ ಗಾಳಿಪಟ ಉತ್ಸವದಲ್ಲಿ ಸುಮಾರು 11ಕ್ಕೂ ಹೆಚ್ಚು ದೇಶಗಳ ಗಾಳಿಪಟ ತಜ್ಞರು ಭಾಗವಹಿಸುತ್ತಿದ್ದಾರೆ. ಆಸ್ಪ್ರೇಲಿಯಾ, ಅಮೆರಿಕ, ಮಲೇಷ್ಯಾ, ಬೆಲ್ಜಿಯಂ, ಕೆನಡಾ, ಸಿಂಗಪೂರ್‌, ಟರ್ಕಿ, ಎಸ್ಟೋನಿಯಾ, ಪೊಲೆಂಡ್‌ ಹಲವು ದೇಶಗಳು ಭಾಗವಹಿಸಲಿವೆ.

ಮಕ್ಕಳಿಗೆ 2ಸಾವಿರ ಪತಂಗ:

ವಿದೇಶಿಗರ ಜತೆ ಸೇರಿ ಗಾಳಿಪಟ ಹಾರಿಸುವ ಅವಕಾಶವನ್ನು ಮಕ್ಕಳಿಗೂ ಕಲ್ಪಿಸಲಾಗಿದೆ. ಸುಮಾರು 2ಸಾವಿರ ಮಕ್ಕಳಿಗೆ ಉಚಿತವಾಗಿ ಗಾಳಿಪಟವನ್ನು ಸ್ಥಳದಲ್ಲಿಯೇ ಮಾಡಿಕೊಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ವಿವಿಧ ಮಕ್ಕಳನ್ನು ಆಹ್ವಾನಿಸಲಾಗಿದೆ.

ಡ್ರ್ಯಾಗನ್‌ ಗಾಳಿಪಟ

ಉತ್ಸವದಲ್ಲಿ ಡ್ರ್ಯಾಗನ್‌ ಪತಂಗ ವಿಶೇಷವಾಗಿದೆ. 15 ಕೆಜಿ ತೂಕವಿರುವ ಇದು, ಆಕಾಶದಲ್ಲಿ ಹಾರಾಡಿದರೆ 150 ಕೆಜಿ ಭಾರವಾಗುತ್ತದೆ. ಅಲ್ಲದೆ ರಂಗುರಂಗಿನ ವಿವಿಧ ಕಲ್ಪನೆಗಳಲ್ಲಿ ಸಾಕಾರಗೊಂಡ, ಪಕ್ಷಿ, ಪ್ರಾಣಿಗಳ ಗಾಳಿಪಟಗಳು ಆಕಾಶದಲ್ಲಿ ಮಾಯಾಂಗನೆಯಂತೆ ಕಣ್ಮುಂದೆ ಹಾದು ಹೋಗುವಂತೆ ಕಂಡುಬರುವ ದೃಶ್ಯ ಸೃಷ್ಟಿಯಾಗಲಿದೆ. ರಾತ್ರಿ ಸಮಯದಲ್ಲಿ ಎಲ್‌ಇಡಿ ಬಳಸಿ ಹಾರುವ ಪಟಗಳು ಗಮನ ಸೆಳೆಯುತ್ತವೆ.

ವಿದೇಶಿ ಗಾಳಿಪಟ ತಜ್ಞರು:

ಅಂತಾರಾಷ್ಟ್ರೀಯ ಗಾಳಿಪಟ ತಜ್ಞರಾದ ಸಾರತ ಕಿಂಗ್‌ಸ್ಲೇ ಗುನವಾರ್ಡೇನಾ, ಅಮೆರಿಕದ ಫಿಲ್‌ ಬಾರ್ಡರ್‌, ಮಲೇಷ್ಯಾದ ನಸ್ರಿ ಅಹಮದ್‌, ಹಾಗೂ ಮಹದ್‌ ಭೋಹಾರಿ ಬಿನ್‌ ಕಿಪ್ಲಿ, ನಾರ್ಶಹರಿಜಃತ, ಬೆಲ್ಜಿಯಂನ ಮಾರ್ಕ್ ಆಂಡ್ರೆ ಪೌಲಾ ವಂಡೇನ್‌ ಬೊರೆಕ್‌, ಮತ್ತು ನಿಕೋಲ್‌ ಮತ್ಲಿಡ್‌ ಫೋರಿನ್‌, ಕೆನಡಾದ ಫೆಡ್ರಿಕ್‌ ಆಂಡ್ರೆ ಟೇಲರ್‌, ಮತ್ತು ಡೊನ್ನಾ ಲಿನ್‌ ಟೇಲರ್‌, ಸಿಂಗಾಪುರದ ಗಡೀಸ್‌ ವಿದಿಯತಿ, ರಿಕ್ಯಾಪ್‌ ಎರ್ಥನ್‌ ಟಫ್ಕಿಸಿಯೋಗ್ಲು, ಎಸ್ಟೋನಿಯಾದ ಆಂಡ್ರಿಯಾ ಸೋಕ್‌ ಮತ್ತು ಜಾನಾ ಸೂಮ್‌, ಹಾಗೂ ಪೋಲೆಂಡ್‌ನ ವ್ಹಿಸ್ಟಾಗ್ವಿಸದತಾ, ರಿಯಾ ಸ್ವಸ್ತಿಕಾ ಪತಂಗದ ಸೂತ್ರದಾರರು. ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಗಾಳಿಪಟ ತಜ್ಞ ಬೆಂಗಳೂರಿನ ವಿ.ಕೆ. ರಾವ್‌, ಸಂದೇಶ ಕಡ್ಡಿ , ಜಿಗ್ನೇಶ ಕತ್ರಿ, ಸುಹಾಸ ಎಲ್‌.ಎನ್‌. ರಮೇಶ ಪರ್ತಿ ಕೂಡ ಭಾಗವಹಿಸುವರು.

ಕೆನಡಾದ ಫೆಡ್ರಿಕ್‌ ಆಂಡ್ರೆ ಟೇಲರ್‌, ಮತ್ತು ಡೊನ್ನಾ ಲಿನ್‌ ಟೇಲರ್‌ ಕಳೆದ 20ಕ್ಕೂ ಹೆಚ್ಚು ವರ್ಷದಿಂದ ಗಾಳಿಪಟದ ಜೊತೆಗಿದ್ದಾರೆ. ಹತ್ತಾರು ದೇಶಗಳ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿರುವ ಇವರು ಆಯೋಜಕರನ್ನು ಸಂಪರ್ಕಿಸಿ ಅನ್ಯದೇಶದ ನೆಲದಿಂದ ಆಗಸಕ್ಕೆ ಗಾಳಿಪಟ ಹಾರಿಸುತ್ತಿದ್ದು, ಹುಬ್ಬಳ್ಳಿ ಬಾನಿನಲ್ಲಿ ಪಟ ಏರಿಸಲು ಉತ್ಸುಕರಾಗಿದ್ದಾರೆ.

ಸಿದ್ಧಗಂಗಾ ಶ್ರೀ ಪಟ:

ವಿವಿಧ ಬಗೆಯ ಪತಂಗಗಳಾದ ರುಕಾಕು, ಸ್ಟಂಟ್‌ ಕೈಟ್‌, ಪ್ಯಾರಾಫೈಲ್‌, ಕಾರ್ಟೂನ್‌, ರೆವೆಲ್ಯೂಶನರಿ ಪತಂಗಗಳು ಹಾರಾಡಲಿವೆ. ಇತ್ತೀಚೆಗೆ ಶಿವೈಕ್ಯರಾದ ಡಾ. ಸಿದ್ಧಗಂಗಾ ಶ್ರೀಗಳ ಭಾವಚಿತ್ರದ 8 ಫäಟ್‌ ಎತ್ತರದ ಪತಂಗವನ್ನೂ ಸಿದ್ಧಪಡಿಸಲಾಗುತ್ತಿದೆ ಎಂದು 40 ವರ್ಷದಿಂದ ಗಾಳಿಪಟ ಕ್ಷೇತ್ರದಲ್ಲಿರುವ ವಿ.ಕೆ.ರಾವ್‌ ಮಾಹಿತಿ ನೀಡಿದ್ದಾರೆ.

ನಾಸಾ ರೂಪದ ಪತಂಗ

ನಾಸಾ ರೂಪಿಸಿದ ರಿಫ್ಸ್‌ಟಾನ್‌ ಎಂಬ ವಸ್ತುವಿನಿಂದ ರೂಪಿಸಿದ ಅಪ್ಲಿಕೆ ಬಟ್ಟೆಯ ಗಾಳಿಪಟಗಳು ನಭಕ್ಕೇರಲಿವೆ. ಇವು ಕೈಯಿಂದ ಬಿಡಿಸಿದ ಚಿತ್ರವಾಗಿರದೆ ಬಟ್ಟೆರೂಪಿಸುವಾಗಲೇ ಮುದ್ರಿತವಾದ ಚಿತ್ರಗಳಾಗಿವೆ. 15 ಎಲ್‌ಇಡಿ ಗಾಳಿಪಟ ಕೂಡ ಇದೇ ರೀತಿಯಾಗಿರುವುದು ವಿಶೇಷವಾಗಿದೆ.

ಗಾಳಿಪಟ ನಮಗೆ ಗೊತ್ತಿಲ್ಲದಂತೆ ನಮ್ಮಲ್ಲಿ ಚೈತನ್ಯ, ಹುರುಪು ತುಂಬುತ್ತದೆ ಜೊತೆಗೆ ಮೊಗದಲ್ಲೊಂದು ನಗುವರಳಿಸುತ್ತದೆ. ಇನ್ನೊಬ್ಬರಲ್ಲಿ ನಗುವರಳಿಸುವ ನನಗೆ ದೇವರು ಹೆಚ್ಚು ನಗುವಂತೆ ಆಶೀರ್ವದಿಸುವಂತೆ ಆಶೀರ್ವಾದ ನೀಡುತ್ತಾರೆ.- ನಾಸ್ರಿ ಅಹ್ಮದ್‌ ಮಲೇಷಿಯಾ ಗಾಳಿಪಟ ತಜ್ಞ

Latest Videos
Follow Us:
Download App:
  • android
  • ios