Asianet Suvarna News Asianet Suvarna News

ಬೆಂಗಳೂರು ಕಂಬಳ: ಕೋಣಗಳಿಗೆ ನಿತ್ಯ 2000 ಖರ್ಚು, ಬಾದಾಮಿ ತಿನ್ನಿಸಿ, ಆಯಿಲ್‌ ಮಸಾಜ್‌..!

ತಮ್ಮ ಊರಿನ, ಮನೆತನದ ಪ್ರತಿಷ್ಠೆಗಾಗಿ ಮಾಲೀಕರು ಕೋಣಗಳನ್ನು ಸಾಕಲು ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಾರೆ. ಮಕ್ಕಳಂತೆ ಕೋಣಗಳನ್ನು ಆರೈಕೆ ಮಾಡಿ ಮಾಡಿ ಬೆಳೆಸುತ್ತಾರೆ. ಕೋಣಗಳನ್ನು ವ್ಯವಸಾಯಕ್ಕೂ ಬಳಸಿಕೊಳ್ಳುತ್ತಾರೆ. ಉತ್ಸಾಹಿ ಯುವಕರ ತಂಡ ಕಟ್ಟಿ ಸ್ಪರ್ಧೆಗೆ ಸಜ್ಜಾಗುತ್ತಾರೆ. ಇತ್ತೀಚೆಗೆ ಸಾಂಪ್ರದಾಯಿಕ ಕಂಬಳಕ್ಕಿಂತ ಶಕ್ತಿ, ಸಾಮರ್ಥ್ಯ ಪ್ರದರ್ಶಿಸುವ ಸ್ಪರ್ಧೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

Interesting Topic About Bengaluru Kambala Race grg
Author
First Published Nov 26, 2023, 7:19 AM IST

ಬೆಂಗಳೂರು(ನ.26):  ನಗರದ ಅರಮನೆ ಮೈದಾನದಲ್ಲಿ ಮೊದಲ ಬಾರಿ ನಡೆಯುತ್ತಿರುವ ಜಾನಪದ ಕ್ರೀಡೆ ಕಂಬಳ, ಕೋಣಗಳು ಹಾಗೂ ಸ್ಪರ್ಧೆಯ ಕುರಿತಾದ ಆಸಕ್ತಿಯ ವಿಚಾರಗಳನ್ನು ಜನತೆಗೆ ಪರಿಚಯಿಸುತ್ತಿದೆ. ತಮ್ಮ ಊರಿನ, ಮನೆತನದ ಪ್ರತಿಷ್ಠೆಗಾಗಿ ಮಾಲೀಕರು ಕೋಣಗಳನ್ನು ಸಾಕಲು ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಾರೆ. ಮಕ್ಕಳಂತೆ ಕೋಣಗಳನ್ನು ಆರೈಕೆ ಮಾಡಿ ಮಾಡಿ ಬೆಳೆಸುತ್ತಾರೆ. ಕೋಣಗಳನ್ನು ವ್ಯವಸಾಯಕ್ಕೂ ಬಳಸಿಕೊಳ್ಳುತ್ತಾರೆ. ಉತ್ಸಾಹಿ ಯುವಕರ ತಂಡ ಕಟ್ಟಿ ಸ್ಪರ್ಧೆಗೆ ಸಜ್ಜಾಗುತ್ತಾರೆ. ಇತ್ತೀಚೆಗೆ ಸಾಂಪ್ರದಾಯಿಕ ಕಂಬಳಕ್ಕಿಂತ ಶಕ್ತಿ, ಸಾಮರ್ಥ್ಯ ಪ್ರದರ್ಶಿಸುವ ಸ್ಪರ್ಧೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

43 ವರ್ಷಗಳಿಂದ ಸ್ಪರ್ಧಿಸುತ್ತಿರುವ ಬೆಳ್ಳಿಪಾಡಿ ಕೈಪ ತಂಡ

ಕಂಬಳದಲ್ಲಿ ಪಾಲ್ಗೊಳ್ಳುವುದು ನಮ್ಮ ತಾತನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಬೆಳ್ಳಿಪಾಡಿ ಕೈಪ ತಂಡ ಕಳೆದ 43 ವರ್ಷಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದೆ. ಕಳೆದ ವರ್ಷದ ಸೀಸನ್‌ನಲ್ಲಿ ನಡೆದ 22 ಸ್ಪರ್ಧೆಗಳ ಪೈಕಿ 11 ಸ್ಪರ್ಧೆಯಲ್ಲಿ ಗೆದ್ದು ಚಾಂಪಿಯನ್ ಆಗಿದ್ದೇವೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕಂಬಳ ವಿಶೇಷ ಎನಿಸುತ್ತಿದೆ. ಮೊದಲ ಬಾರಿ ಕರಾವಳಿಯಿಂದ ಹೊರಗೆ ನಡೆಯುತ್ತಿರುವ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿ ಇದೆ ಎಂದು ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಭಾಸ್ಕರನ್ ಹೇಳಿದರು.

ಬೆಂಗಳೂರು ಕಂಬಳ ಉದ್ಘಾಟಿಸಿದ ಸಿಎಂ : ತುಳು ರಾಜ್ಯದ ಎರಡನೇ ಭಾಷೆ ಮಾಡುವುದಾಗಿ ಸಿದ್ದರಾಮಯ್ಯ ಭರವಸೆ!

ನಿತ್ಯ ಈಜು, ವ್ಯಾಯಾಮ ಮಾಡುತ್ತೇವೆ

ಕಂಬಳದಲ್ಲಿ ಓಡಲು ತಾಕತ್ತು ಬೇಕಾಗುತ್ತದೆ. ಪ್ರತಿನಿತ್ಯ ತಪ್ಪದೇ ವ್ಯಾಯಾಮ ಮಾಡುತ್ತೇನೆ. ಕೋಣಗಳ ಜೊತೆ ಬರಿಗಾಲಲ್ಲಿ ವಾಕಿಂಗ್ ಮತ್ತು ಓಟದ ಅಭ್ಯಾಸ ಮಾಡುತ್ತೇನೆ. ಕರಾವಳಿಯ ಸಹಜ ಊಟ ಮಾಡುತ್ತೇವೆ. ಆದರೆ, ಅಭ್ಯಾಸ ನಿರಂತರವಾಗಿರುತ್ತದೆ. ಮೊದಲ ಬಾರಿ ಬೆಂಗಳೂರಿನಲ್ಲಿ ನಡೆದ ಕಂಬಳದಲ್ಲಿ ನೀರು ತಣ್ಣಗಿದೆ ಎನ್ನುವುದು ಬಿಟ್ಟರೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಕಳೆದ 8 ವರ್ಷಗಳಿಂದ ಕಂಬಳದಲ್ಲಿ ಓಡುತ್ತಿರುವ ಕಾರ್ಕಳದ 33 ವರ್ಷದ ಸುಧೀರ್ ಸಾಲಿಯಾನ್ ತಿಳಿಸಿದರು.

ದಿನಕ್ಕೆ ₹2 ಸಾವಿರ ಖರ್ಚು

ಕೋಣಗಳಿಗೆ ಕುದಿಸಿದ ಹುರುಳಿ ಕಾಳನ್ನು ಹುರಿ ಮಾಡಿ ದಿನಕ್ಕೆ ಎರಡು ಬಾರಿ ತಿನ್ನಿಸುತ್ತೇವೆ. ಮಧ್ಯಾಹ್ನದ ವೇಳೆ ಭತ್ತದ ಹುಲ್ಲು ಕೊಟ್ಟು ವಿಶ್ರಾಂತಿಗೆ ಬಿಡುತ್ತೇವೆ. ಆಗಾಗ ಕುಂಬಳಕಾಯಿ, ಕ್ಯಾರೇಟ್, ಬಾದಾಮಿಯನ್ನು ತಿನ್ನಿಸುತ್ತೇವೆ. ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತೇವೆ. ಕೋಣದ ದೇಹ ತಂಪಾಗಿಡಲು ನೆರವಾಗುತ್ತದೆ. ಒಂದು ಜೊತೆ ಕೋಣಕ್ಕೆ ದಿನಕ್ಕೆ ₹2 ಸಾವಿರ ಖರ್ಚು ಮಾಡಲಾಗುತ್ತದೆ. ಅದರ ಜೊತೆಗೆ ಕಂಬಳ ಸ್ಪರ್ಧೆಗಾಗಿ ಸುಮಾರು 20ರಿಂದ 30 ಜನರ ತಂಡವು ಇರುತ್ತದೆ. ಕಂಬಳ ಬಗೆಗಿನ ಆಸಕ್ತಿಯಿಂದಾಗಿ ಸಾಕಷ್ಟು ಜನ ತಂಡ ಸೇರಿಕೊಳ್ಳುತ್ತಾರೆ ಎಂದು ಹಳೇಯಂಗಡಿ ಕೊಪ್ಪಲ ನಂದಗೋಕುಲ ತಂಡದ ಸದಸ್ಯ ಗಿರೀಶ್ ಹೇಳಿದರು.

ಬೆಂಗಳೂರಲ್ಲಿ ಕಂಬಳ ನಡೆಯುತ್ತಿರಲಿ

ಬೆಂಗಳೂರಿನಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವುದಕ್ಕೆ ಖುಷಿ ಇದೆ. ಮುಂಬರುವ ವರ್ಷಗಳಲ್ಲೂ ಸ್ಪರ್ಧೆಯನ್ನು ಆಯೋಜಿಸಬಹುದು. ಬಹುಮಾನಕ್ಕಿಂತ ಹೆಚ್ಚಾಗಿ ನಮಗೆ ಓಟದಲ್ಲಿ ಭಾಗವಹಿಸುವುದು ಮುಖ್ಯ. ನಾನು ಕಳ‍ೆದ 15 ವರ್ಷದಿಂದ ಕಂಬಳದಲ್ಲಿ ಭಾಗವಹಿಸುತ್ತಿದ್ದೇನೆ. ಒಟ್ಟು 25 ಜನರ ತಂಡದೊಂದಿಗೆ ಮಂಗಳೂರಿನ ಬಂದಿದ್ದೇವೆ ಎಂದು ನಿಟ್ಟೆ ಪರಪ್ಪಾಡಿ ತಂಡದ ಸುರೇಶ್ ಕೋಟ್ಯಾನ್ ತಿಳಿಸಿದರು.

Follow Us:
Download App:
  • android
  • ios