ಹಳಿತಪ್ಪಿದ ಇಂಟರ್‌ಸಿಟಿ ರೈಲು: ಪ್ರಯಾಣಿಕರು ಅಪಾಯದಿಂದ ಪಾರು
ಹಳಿತಪ್ಪಿದ ಇಂಟರ್‌ಸಿಟಿ ರೈಲು: ಪ್ರಯಾಣಿಕರು ಅಪಾಯದಿಂದ ಪಾರು | ಶಿವಮೊಗ್ಗದ ಕುಂಸಿ ಬಳಿ ನಡೆದ ಘಟನೆ
ಶಿವಮೊಗ್ಗ(ಡಿ.01): ಬೆಂಗಳೂರು-ಶಿವಮೊಗ್ಗ-ತಾಳಗೊಪ್ಪ ಇಂಟರ್ ಸಿಟಿ ರೈಲಿನ ಎಂಜಿನ್ ಆನಂದಪುರ-ಕುಂಸಿ ನಡುವೆ ಬಸವಾಪುರ ಬಳಿ ಹಳಿತಪ್ಪಿದ ಘಟನೆ ನಡೆದಿದೆ. ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಬೋಗಿಗಳು ಹಳಿಯ ಮೇಲೆಯೇ ಇದ್ದು, ಎಂಜಿನ್ ಮಾತ್ರವೇ ಹಳಿ ತಪ್ಪಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಘಟನೆಯಲ್ಲಿ ಯಾವ ಪ್ರಯಾಣಿಕರಿಗೂ ತೊಂದರೆಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದಾರೆ. ಸುದ್ದಿ ತಿಳಿದ ತಕ್ಷಣ ರೈಲ್ವೆ ಅಧಿಕಾರಿಗಳು, ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಅಪ್ಪ-ಮಗಳಿಗೆ ಒಲಿದ ಜಯ; ಮೂವರು ದಂಪತಿಗಳು ಆಯ್ಕೆ
ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ ಎಂದು ಮೂಲಗಳು ತಿಳಿಸಿವೆ. ಇದರಿಂದಾಗಿ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಡಬೇಕಿದ್ದ ರೈಲು ರದ್ದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಇಲ್ಲಿ ಇಂಟರ್ ಸಿಟಿ ರೈಲು ನಂತರ ಯಾವುದೇ ರೈಲು ಸಂಚರಿಸುವುದಿಲ್ಲ. ಹೀಗಾಗಿ ಯಾವುದೇ ಸಮಸ್ಯೆಯಾಗಿಲ್ಲ. ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್ ಮೂಲಕ ಸಾಗರ ಮತ್ತಿತರ ಕಡೆಗಳಿಗೆ ಕಳುಹಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಮುಂಜಾನೆ ಬೇರೆ ಎಂಜಿನ್ ಮೂಲಕ ರೈಲು ಬೋಗಿಗಳನ್ನು ಸಾಗಿಸಲಾಗುವುದು ಎಂದು ಮೂಲಗಳು ಹೇಳಿವೆ.