5 ವರ್ಷದ ಹಿಂದೆ ಅಂತರ್ಜಾತಿ ವಿವಾಹ : ಮಹಿಳೆ ನಿಗೂಢ ನಾಪತ್ತೆ-ಹೊರಬಿದ್ದ ಸ್ಫೋಟಕ ವಿಚಾರ
ಅಂತರ್ಜಾತಿ ಯುವಕನೊಬ್ಬನನ್ನು ಪ್ರೇಮಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಕುಟುಂಬ ಕೊಲೆ ಆರೋಪ ಮಾಡಿದೆ.
ಪಾಂಡವಪುರ (ಅ.21): ಐದು ವರ್ಷಗಳ ಹಿಂದೆ ಅಂತರ್ಜಾತಿ ಯುವಕನೊಬ್ಬನನ್ನು ಪ್ರೇಮಿಸಿ ಮದುವೆಯಾಗಿದ್ದ ಯುವತಿಯೊಬ್ಬಳು ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಮದುವೆಯಾದಂದಿನಿಂದ ಮಗಳೊಂದಿಗೆ ಸಂಪರ್ಕ ಕಡಿದುಕೊಂಡಿದ್ದ ಪೋಷಕರು ಇದೀಗ ವಿಳಾಸ ಹುಡುಕಿಕೊಂಡು ಬಂದ ವೇಳೆ ಮಗಳು ಕೊಲೆಯಾಗಿದ್ದಾಳೆ ಎಂದು ಜನರು ಹೇಳಿದ್ದರಿಂದ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ.
ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿಯ ಮೇಘಶ್ರೀ ನಿಗೂಢವಾಗಿ ನಾಪತ್ತೆಯಾಗಿರುವ ಯುವತಿ. ಈಕೆಯನ್ನು ಪಾಂಡವಪುರ ತಾಲೂಕಿನ ತಿರುಮಲಾಪುರ ಗ್ರಾಮದ ಟಿ.ಕೆ.ಸ್ವಾಮಿ ಎಂಬಾತ ಪ್ರೇಮಿಸಿ ವಿವಾಹವಾಗಿದ್ದಳು. ಈ ಸಂಬಂಧ ಪೋಷಕರು ಕಾಣೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ನಡೆದಿದ್ದೇನು?:
ಮಳವಳ್ಳಿ ತಾಲೂಕು ನಂಜೇಗೌಡನದೊಡ್ಡಿ ವಾಸಿ ಮಹದೇವಯ್ಯನವರ ಪುತ್ರಿ ಮೇಘಶ್ರೀ ಪರಿಶಿಷ್ಟಜಾತಿಗೆ ಸೇರಿದ್ದು, 2014-15ನೇ ಸಾಲಿನಲ್ಲಿ ಬೆಂಗಳೂರಿನ ಕೋಡಿಚಿಕ್ಕನಹಳ್ಳಿಯಲ್ಲಿ ವಾಸವಾಗಿದ್ದರು. ಈ ವೇಳೆ ಮೇಘಶ್ರೀ ಬೊಮ್ಮನಹಳ್ಳಿಯ ಬೇಗೂರು ಮುಖ್ಯರಸ್ತೆಯಲ್ಲಿರುವ ಎಂಇಟಿ ಕಾಲೇಜಿನಲ್ಲಿ ಓದುತ್ತಿದ್ದಳು.
ಯುವತಿಯರೇ ಹುಷಾರ್.. ಬೆಂಗ್ಳೂರಲ್ಲಿ ಮೈಮರೆತು ಮಾತಾಡ್ತಾ ಇದ್ರೆ ಅಷ್ಟೆ ಕತೆ! ...
ಈ ಸಮಯದಲ್ಲಿ ಆಕೆಯ ಗೆಳತಿಯರಾದ ಸಿಂಧು, ಉಷಾ ಹಾಗೂ ರಮ್ಯ ಅವರ ಗೆಳೆತನದಿಂದ ಸ್ವಾಮಿ ಎಂಬ ಯುವಕನ ಪರಿಚಯವಾಗಿದೆ. ಈತ ಉಷಾ ಮತ್ತು ರಮ್ಯ ಅವರ ಅತ್ತೆಯ ಮಗ ಎಂದು ತಿಳಿದು ಬಂದಿದೆ. ಟಿ.ಕೆ. ಸ್ವಾಮಿಯೊಂದಿಗಿನ ಮೇಘಶ್ರೀ ಪರಿಚಯ ಪ್ರೀತಿಗೆ ತಿರುಗಿತ್ತು.
2015ರಲ್ಲಿ ನಡೆದ ಮೇಘಶ್ರೀ ಅಕ್ಕ ಕಾವ್ಯಶ್ರೀ ಮದುವೆಗೆ ಸ್ವಾಮಿ ಬಂದಿದ್ದು, ಇಬ್ಬರೂ ಜೊತೆಯಲ್ಲೇ ಫೋಟೋ ತೆಗೆಸಿಕೊಂಡಿದ್ದಾರೆ. ಆ ಸಮಯದಲ್ಲಿ ಇವರಿಬ್ಬರ ಪ್ರೀತಿಯ ವಿಚಾರ ಪೋಷಕರಿಗೆ ತಿಳಿದಿರಲಿಲ್ಲವೆನ್ನಲಾಗಿದೆ. ಅಕ್ಕನ ಮದುವೆಯಾದ ಮೂರು ತಿಂಗಳಿಗೆ ಮೇಘಶ್ರೀ ಮನೆಬಿಟ್ಟು ಹೋಗಿ ಆತನ ಪ್ರೇಮಿಯಾಗಿದ್ದ ಟಿ.ಕೆ. ಸ್ವಾಮಿಯನ್ನು ಮದುವೆಯಾಗಿದ್ದಳು. ಇದರಿಂದ ಕೋಪಗೊಂಡ ಮೇಘಶ್ರೀ ತಂದೆ ಮಹದೇವಯ್ಯ ಮಗಳ ಸಂಪರ್ಕದಿಂದ ದೂರವೇ ಉಳಿದಿದ್ದರು.
ಕಿರುಕುಳ ಆರಂಭ: ಮದುವೆಯಾದ ಬಳಿಕ ಕೆಲ ತಿಂಗಳು ಮಾತ್ರ ಮೇಘಶ್ರೀ ಸುಖವಾಗಿದ್ದಳು. ಆನಂತರ ಗಂಡ ಹಾಗೂ ಆತನ ಮನೆಯವರಿಂದ ಕಿರುಕುಳ ಆರಂಭವಾಯಿತು. ಈ ನಡುವೆ ಮೇಘಶ್ರೀಯಿಂದ ಫೋನ್ ಕಸಿದುಕೊಂಡ ಗಂಡನ ಮನೆಯವರು ಯಾರೊಂದಿಗೂ ಸಂಪರ್ಕ ಸಾಧಿಸದಂತೆ ಅಡ್ಡಿಪಡಿಸಿದರು. ಕೆಲವೊಮ್ಮೆ ಮೇಘಶ್ರೀ ಯಾರಿಗೂ ಗೊತ್ತಾಗದಂತೆ ಮನೆಯವರಿಗೆ ಫೋನ್ ಮಾಡಿ ಒಂದೆರಡು ನಿಮಿಷ ಮಾತನಾಡಿ ಕಟ್ ಮಾಡುತ್ತಿದ್ದಳು ಎನ್ನಲಾಗಿದೆ.
ಈ ಮಧ್ಯೆ ಮೇಘಶ್ರೀ ತನ್ನ ಅಕ್ಕ ಕಾವ್ಯಶ್ರೀಗೆ ಮಗುವಾದ ಸಮಯದಲ್ಲಿ ನೋಡಲೆಂದು ಬಂದಿದ್ದಳು. ಆಗ ಗಂಡ ಸ್ವಾಮಿ ಹಾಗೂ ಮಾವ ಕುಮಾರ ಅವರು ಸೇರಿ ನನಗೆ ಜಾತಿ ನಿಂದನೆ ಮಾಡುತ್ತಾ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನನಗೆ ದೈಹಿಕ ಮತ್ತು ಮಾನಸಿಕವಾಗಿ ಹಿಂಸೆ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಳು. ಆದರೆ, ತಾನು ಎಲ್ಲಿದ್ದೇನೆ ಎಂದು ಮಾತ್ರ ಹೇಳಿರಲಿಲ್ಲ ಎಂದು ಮೇಘಶ್ರೀ ತಾಯಿ ಮಹದೇವಮ್ಮ ನೊಂದು ಹೇಳಿದರು.
ಸಂಪರ್ಕ ಸಾಧಿಸಿರಲಿಲ್ಲ: ಅದಾದ ನಂತರ ಸುಮಾರು ನಾಲ್ಕು ವರ್ಷಗಳಿಂದ ಮಗಳು ಸಂಪರ್ಕ ಸಾಧಿಸಿರಲಿಲ್ಲ. ಮೇಘಶ್ರೀ ತಾನು ಎಲ್ಲಿದ್ದೇನೆ ಎಂಬ ಬಗ್ಗೆ ಪೋಷಕರಿಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ. ಗಾರ್ಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹದೇವಮ್ಮ ರಜಾ ದಿನಗಳಲ್ಲಿ ಮಗಳ ಫೋಟೋ ಹಿಡಿದುಕೊಂಡು ಊರೂರು ತಿರುಗುತ್ತಾ ಹುಡುಕುತ್ತಿದ್ದರು. ಈವರೆಗೆ ಮಗಳಿಂದ ಯಾವುದೇ ಫೋನ್ ಕರೆಯೂ ಬಂದಿರಲಿಲ್ಲ ಎಂದು ತಿಳಿಸಿದರು.
ಇತ್ತೀಚೆಗೆ ನಮ್ಮ ಮನೆಯ ಬೀರುವಿನಲ್ಲಿ ಎಲೆಕ್ಷನ್ ವೋಟರ್ ಐಡಿ ಸಿಕ್ಕಿದಾಗ ಆತನ ವಿಳಾಸ ಪತ್ತೆಯಾಯಿತು. ಅ.14ರಂದು ಅವರ ಊರಿಗೆ ತೆರಳಿ ಮಗಳ ಬಗ್ಗೆ ವಿಚಾರಿಸಿದಾಗ ಗ್ರಾಮದ ಕೆಲವು ವ್ಯಕ್ತಿಗಳು ನಿಮ್ಮ ಮಗಳು ಬದುಕಿಲ್ಲ. ಅವಳನ್ನು ಅವರು ಕೊಲೆ ಮಾಡಿ ಮುಚ್ಚಿಹಾಕಿದ್ದಾರೆ ಎಂದು ಹೇಳಿದ್ದಾಗಿ ಕಣ್ಣೀರಿಡುತ್ತಾ ಹೇಳಿದರು.
ಅ.15ರಂದು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆವು. ಅದರಂತೆ ಪೊಲೀಸರೊಂದಿಗೆ ಹುಡುಗನ ಮನೆಗೆ ಹೋಗಿ ವಿಚಾರಿಸಿದಾಗ ನಮ್ಮ ಮನೆಯಲ್ಲಿ ಯಾರೂ ಇಲ್ಲ. ಅವಳು ತುಂಬಾ ದಿನಗಳ ಹಿಂದೆಯೇ ಹೊರಟುಹೋದಳು ಎಂದು ಹುಡುಗನ ತಂದೆ ಕುಮಾರ ಮಾಹಿತಿ ನೀಡಿದ್ದಾರೆ. ಆದರೆ, ಅದೆಲ್ಲವೂ ಸುಳ್ಳು. ಅವರ ಮಗ ಸ್ವಾಮಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಕಾಣೆಯಾಗಿರುವ ನನ್ನ ಮಗಳು ಮೇಘಶ್ರೀಯನ್ನು ಹುಡುಕಿಸಿಕೊಡುವಂತೆ ಮಹದೇವಮ್ಮ ಪಾಂಡವಪುರ ಪೊಲೀಸರಿಗೆ ಮೊರೆ ಹೋಗಿದ್ದಾರೆ. ಈ ಸಂಬಂಧ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೂ ಮಹದೇವಮ್ಮ ಅವರು ದೂರು ನೀಡಿದ್ದಾರೆ.
ಮಗಳು ಕಾಣೆಯಾಗಿರುವ ಬಗ್ಗೆ ಮಹದೇವಮ್ಮ ಎನ್ನುವವರು ಪಾಂಡವಪುರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಈ ಕುರಿತು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಲಿದ್ದೇವೆ.
-ಕೆ.ಪರಶುರಾಮ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಮಂಡ್ಯ.
ಮಗಳು ಕೊಲೆಯಾಗಿದ್ದಾರೆ ಎಂದು ಊರಿನವರು ಹೇಳುತ್ತಿದ್ದಾರೆ. ಪೊಲೀಸರು ಕೆಲ ವರ್ಷಗಳ ಹಿಂದೆ ಅನಾಥಶವವೊಂದು ಪತ್ತೆಯಾಗಿರುವ ಬಗ್ಗೆ ಎರಡು ಫೋಟೋ ತೋರಿಸಿದ್ದಾರೆ. ಅದು ನನ್ನ ಮಗಳದ್ದೇ ಎಂದು ಗುರುತಿಸಿದ್ದೇನೆ. ಸ್ವಾಮಿಯನ್ನು ಪೊಲೀಸರು ಕರೆಸಿದ್ದಾರೆಂದು ಗೊತ್ತಾಗಿದೆ. ಅವನನ್ನು ನಮಗೆ ತೋರಿಸುತ್ತಿಲ್ಲ. ಪೊಲೀಸರು ನಮ್ಮ ದೂರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ.
- ಮಹದೇವಯ್ಯ, ಮೇಘಶ್ರೀ ತಂದೆ